ಮಾನ್ಯರೆ, ತಾ. 18 ರಂದು ಲೋಕಸಭೆಗೆ ಚುನಾವಣೆ ಸಂದರ್ಭ ಮತದಾನದಲ್ಲಿ ಯುವಕರು, ಮಹಿಳೆಯರು, ವಯಸ್ಸಾದವರು, ದೃಷ್ಟಿ ದೋಷವಿರುವವರು ಇರಬಹುದು. ಆದರೆ ಹೆಚ್ಚಿನ ಚುನಾವಣೆ ಬೂತ್‍ಗಳಲ್ಲಿ ಚೆನ್ನಾಗಿ ಬೆಳಕಿನ ವ್ಯವಸ್ಥೆ ಇರುವದಿಲ್ಲ. ಮತದಾನಕ್ಕಾಗಿ ಎಲ್ಲ ಸಮರ್ಪಕ ವ್ಯವಸ್ಥೆಯನ್ನು ಮಾಡಿದರೂ ಮಂದ ಬೆಳಕಿನಲ್ಲಿ ಮತದಾನ ಮಾಡಲು ಸಾಧ್ಯವಿಲ್ಲವೆಂಬ ಅಂಶ ಗಮನಕ್ಕೆ ಬಾರದೆ ಇರುವದು ಆಶ್ಚರ್ಯವನ್ನು ಉಂಟು ಮಾಡಿದೆ.

ಅನೇಕ ಮತಗಟ್ಟೆಗಳು ಅಂಗನವಾಡಿ ಕೇಂದ್ರ, ಶಾಲಾ-ಕಾಲೇಜುಗಳೇ ಆಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಅನೇಕ ಶಾಲಾ-ಕಾಲೇಜುಗಳಿಗೆ ವಿದ್ಯುತ್ ಸಂಪರ್ಕವಿರುವದಿಲ್ಲ. ಕೆಲವು ಕಡೆ ವಿದ್ಯುತ್ ಸಂಪರ್ಕವಿದ್ದರೂ ವಿದ್ಯುತ್ ಯಾವಾಗ ಕೈ ಕೊಡುತ್ತದೆ ಎಂದು ಹೇಳಲು ಬರುವದಿಲ್ಲ. ಈ ಸಮಯದಲ್ಲಿ ನಮ್ಮ ಕೊಡಗಿನಲ್ಲಿ ಅಡ್ಡ ಮಳೆ ಬೀಳುವ ಕಾಲ, ಈ ಸಮಯದಲ್ಲಿ ಮೋಡ ಮುಚ್ಚಿದ ವಾತಾವರಣವೇ ಹೆಚ್ಚು. ಇದರಿಂದ ಮತದಾನ ಮಾಡುವ ಕಡೆ ಬೆಳಕಿನ ಪ್ರಮಾಣ ಕಡಿಮೆ ಇರುತ್ತದೆ. ಮತದಾನ ಯಂತ್ರದ ಸುತ್ತಲೂ ಕಾರ್ಡ್‍ಬೋರ್ಡ್ ಅಥವಾ ಇತರ ವಸ್ತುಗಳಿಂದ ಮುಚ್ಚಿರುವದರಿಂದ ಬೆಳಕು ಮಂದವಾಗಿರುತ್ತದೆ. ಇದರಿಂದ ವಯಸ್ಸಾದವರು ಇರಬಹುದು, ಯುವಕರು ಇರಬಹುದು ಇವರಿಗೆ ಅಭ್ಯರ್ಥಿಯ ಚಿಹ್ನೆ, ಹೆಸರು, ಪಕ್ಷ ಯಾವದು ಗೊತ್ತಾಗುವದಿಲ್ಲ. ನ್ಯಾಯವಾಗಿ ಯಾರಿಗೆ ಮತದಾನ ಮಾಡಬೇಕೋ ಅವರಿಗೆ ಸಲ್ಲದೇ ಇವರಿಗೆ ಇಷ್ಟವಿಲ್ಲದ ಇನ್ಯಾರಿಗೋ ಮತದಾನವಾಗುತ್ತದೆ. ಇದು ಬಹಳ ದೊಡ್ಡ ಅನ್ಯಾಯ. ಚುನಾವಣೆಗೆ ಸಾಕಷ್ಟು ಖರ್ಚು ಮಾಡುವ ಆಯೋಗ ಇದರ ಬಗ್ಗೆ ಗಮನ ಹರಿಸಬೇಕು.

ಅರಮೇರಿ ಗ್ರಾಮದ ಸರಕಾರಿ ಪ್ರಾಥಮಿಕ ಕೇಂದ್ರದಲ್ಲಿ ಮತದಾನ ಕೇಂದ್ರವಿದ್ದು, ಅಲ್ಲಿ ಹಲವಾರು ವರ್ಷಗಳಿಂದ ಮತದಾನ ಮಾಡುತ್ತ ಬಂದಿರುತ್ತೇನೆ. ಅಲ್ಲಿಯೂ ಮಂದ ಬೆಳಕಿನಿಂದಾಗಿ ಮತದಾನ ಮಾಡದ ಪರಿಸ್ಥಿತಿ ಇದೆ. ಹೀಗೆ ಕೊಡಗಿನ ಅನೇಕ ಮತ ಕೇಂದ್ರಗಳಲ್ಲಿ ಮಂದ ಬೆಳಕಿನಿಂದ ಕೂಡಿರುತ್ತದೆ. ಇದರಿಂದ ಮತದಾರರಿಗೆ ಹೆಚ್ಚು ತೊಂದರೆ ಆಗಿರುತ್ತದೆ. ಈ ಸಲವಾದರು ಇದನ್ನು ಗಮನಿಸಿ ಚುನಾವಣಾ ಆಯೋಗ ಎಲ್ಲ ಮತದಾನ ಕೇಂದ್ರವನ್ನು ಪರಿಶೀಲನೆ ಮಾಡಿ ಬೆಳಕಿನ ವ್ಯವಸ್ಥೆ ಮಾಡುವಂತಾಗಲಿ. - ಪಾಲೇಕಂಡ ರತ್ನ ಕರುಂಬಯ್ಯ, ಅರಮೇರಿ.