ಮಡಿಕೇರಿ, ಏ. 14: ಕಳೆದ ವರ್ಷ ಮಳೆಗಾಲದಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತ ವೇಳೆ ಮನೆಗಳನ್ನು ಕಳೆದುಕೊಂಡಿರುವ ನಿರಾಶ್ರಿತರಿಗೆ ಕರ್ನಾಟಕ ರಾಜೀವ್ ಗಾಂಧಿ ಪುನರ್ವಸತಿ ನಿಗಮದಿಂದ ನಿರ್ಮಿಸಲಾಗುತ್ತಿರುವ ಮನೆಗಳ ಕಾಮಗಾರಿಯನ್ನು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಿ, ಅರ್ಹ ಫಲಾನುಭವಿ ಸಂತ್ರಸ್ತರಿಗೆ ಹಸ್ತಾಂತರಿಸಲಾಗುವದು ಎಂದು ನಿಗಮದ ಅಧೀಕ್ಷಕ ಅಭಿಯಂತರ ಶ್ರೀನಿವಾಸ್ ಭರವಸೆ ನೀಡಿದ್ದಾರೆ.
ಪ್ರಸಕ್ತ ಮುಂಗಾರು ಮಳೆ ಸಮೀಪಿಸುತ್ತಿದ್ದರೂ ಮನೆಗಳ ಪುನರ್‍ನಿರ್ಮಾಣ ಕೆಲಸ ಮುಗಿಯ ದಿರುವ ಬಗ್ಗೆ ಜನವಲಯದಲ್ಲಿ ಕೇಳಿ ಬರುತ್ತಿರುವ ಅಸಮಾಧಾನದ ಕುರಿತು ‘ಶಕ್ತಿ’ ಅಧಿಕಾರಿಯನ್ನು ಸಂಪರ್ಕಿಸಿ ದಾಗ ಮೇಲಿನ ಭರವಸೆ ನೀಡಿದ್ದಾರೆ. ಮೊದಲ ಹಂತದಲ್ಲಿ ಮಡಿಕೇರಿ ಸಮೀಪದ ಕರ್ಣಂಗೇರಿ ಗ್ರಾಮದಲ್ಲಿ 38 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಈ ಮನೆಗಳ ಕೆಲಸ ಶೇ.90ರಷ್ಟು ಪೂರ್ಣ ಹಂತದಲ್ಲಿದೆ ಎಂದು ಅವರು ವಿವರಿಸಿದ್ದಾರೆ. ಅಲ್ಲದೆ ಈ ಮನೆಗಳನ್ನು ಪೂರ್ಣಗೊಳಿಸಿದ ಬಳಿಕ ಮೂಲಭೂತ ಸೌಲಭ್ಯಗಳಾದ ರಸ್ತೆ, ವಿದ್ಯುತ್, ಕುಡಿಯುವ ನೀರಿನ ಸೌಲಭ್ಯ ಇತ್ಯಾದಿ ಕೂಡ ಕಲ್ಪಿಸಬೇಕಿದೆ ಎಂದು ವಿವರಿಸಿದ ಅವರು; ಇಂತಹ ಕೆಲಸಗಳನ್ನು ಹಂತಹಂತವಾಗಿ ಕೈಗೆತ್ತಿಕೊಳ್ಳಲಾಗುವದು ಎಂದು ಸ್ಪಷ್ಟಪಡಿಸಿದ್ದಾರೆ.
ಮದೆಯಲ್ಲಿ ಭಾಗಶಃ: ಇನ್ನೊಂದೆಡೆ ಮದೆ ಗ್ರಾ.ಪಂ. ವ್ಯಾಪ್ತಿಯ ಗೋಳಿಕಟ್ಟೆ ಬಳಿ 80 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, 40 ಮನೆಗಳ ಅಡಿಪಾಯ ಕಾಮಗಾರಿ ನಡೆದಿದ್ದರೆ, ಸುಮಾರು 40 ಮನೆಗಳ ಕೆಲಸ ಭಾಗಶಃ ಪೂರ್ಣ ಹಂತಕ್ಕೆ ತಲಪಿದ್ದು, ಅಲ್ಲಿಯೂ ಕೂಡ ಮೂಲಭೂತ ಸೌಕರ್ಯ ಆಗಬೇಕಿದೆ ಎಂದು ತಿಳಿಸಿದ್ದಾರೆ. ಮಾತ್ರವಲ್ಲದೆ, ಸಂಬಂಧಿಸಿದ ಮನೆಗಳಿಗೆ ಕಿಟಕಿ- ಬಾಗಿಲುಗಳ ಅಳವಡಿಕೆ ಇನ್ನಷ್ಟೇ ಕಲ್ಪಿಸಬೇಕಿದೆ ಎಂದು ವಿವರಣೆ ನೀಡಿದ್ದಾರೆ.
ಜಂಬೂರು 318 ಮನೆ : ರಾಜೀವ್ ಗಾಂಧಿ ಗ್ರಾಮೀಣ ಪುನರ್ವಸತಿ ನಿಗಮದಿಂದ ಮಾದಾಪುರ ಬಳಿಯ ಜಂಬೂರು ಗ್ರಾಮದಲ್ಲಿ 318 ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಈ ಪೈಕಿ ಈಗಾಗಲೇ 55 ಮನೆಗಳಿಗೆ ಅಡಿಪಾಯ ಸಹಿತ ಕೆಲಸ ಮುಂದುವರಿದಿದೆ. ಬಹುತೇಕ ಮನೆಗಳು ಮುಕ್ತಾಯ ಹಂತದಲ್ಲಿದ್ದು, ಮೊದಲ ಹಂತದಲ್ಲಿ 55 ಮನೆಗಳನ್ನು ಪೂರ್ಣಗೊಳಿಸಿ ಕಿಟಕಿ- ಬಾಗಿಲುಗಳ ಸಹಿತ ಮೂಲಭೂತ ಸೌಲಭ್ಯ ಒದಗಿಸಲಾಗುವದು ಎಂದು ಶ್ರೀನಿವಾಸ್ ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ. ಉಳಿದ ಮನೆಗಳ ಅಡಿಪಾಯ ನಿರ್ಮಿಸಿದ್ದು, ಹಂತ ಹಂತವಾಗಿ ಕಾಮಗಾರಿ ನಡೆಯುತ್ತಿದೆ ಎಂದು ವಿವರಿಸಿದ್ದಾರೆ.
200 ಮನೆ ಇನ್ಫೋಸಿಸ್: ಇನ್ನೊಂದೆಡೆ ಜಂಬೂರುವಿನ ಈ ನಿವೇಶನದಲ್ಲಿ ಕರ್ನಾಟಕ ಸರಕಾರದ ನಿರ್ದೇಶನದಂತೆ 200 ಮನೆಗಳನ್ನು ಇನ್ಫೋಸಿಸ್ ಸಂಸ್ಥೆಯಿಂದ ಸಂತ್ರಸ್ತರಿಗೆ ನಿರ್ಮಿಸಿಕೊಡುವ ಒಡಂಬಡಿಕೆ ಯಾಗಿದ್ದು, ಆ ಸಂಸ್ಥೆಯ ಮುಖ್ಯಸ್ಥರು ಮಾರ್ಚ್ 25ರಂದು ಅಲ್ಲಿ ಭೂಮಿಪೂಜೆ ನೆರವೇರಿಸಿದ್ದು, ಈಗಷ್ಟೇ ಕಾಮಗಾರಿಗೆ ಚಾಲನೆ ದೊರೆತಿದೆ ಎಂದು ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.
ಹಂತ ಹಂತವಾಗಿ ಪೂರ್ಣ: ಈಗಿನ ಪ್ರಕಾರ ಕರ್ಣಂಗೇರಿಯಲ್ಲಿ ನಿರ್ಮಿಸುತ್ತಿರುವ 38 ಮನೆಗಳನ್ನು ಮೊದಲ ಹಂತದಲ್ಲಿ ಪೂರ್ಣಗೊಳಿಸಲಾಗುವದು ಎಂದು ತಿಳಿಸಿದ ಅಧಿಕಾರಿ, ಮದೆಯಲ್ಲಿ 80 ಮನೆಗಳ ಕಾಮಗಾರಿ ಕೂಡ ಆದಷ್ಟು ಬೇಗ ಪೂರ್ಣಗೊಳಿಸುವ ಪ್ರಯತ್ನವಿದೆ ಎಂದರು. ಈ ಎರಡು ಕಡೆಗಳಲ್ಲಿ ಕಾಮಗಾರಿ ಮೇ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಜೂನ್ ಅಂತ್ಯಕ್ಕೆ ಮಾದಾಪುರ ಬಳಿ ಜಂಬೂರುವಿನ ಮನೆಗಳ ಸಹಿತ 423 ಮನೆಗಳ ಕೆಲಸ ಪೂರ್ಣಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಆ ದಿಸೆಯಲ್ಲಿ ಈಗಾಗಲೇ ಸಂಬಂಧಿಸಿದ ನಿಗಮದಿಂದ ಗುತ್ತಿಗೆದಾರರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದ್ದು, ನಿಗದಿತ ಕಾಲಮಿತಿಯೊಳಗೆ ಕೆಲಸ ಪೂರೈಸಿ ಮಳೆಗಾಲಕ್ಕೆ ಮುನ್ನ ಸಂತ್ರಸ್ತರಿಗೆ ಹಂಚಿಕೆಗೆ ಕ್ರಮ ವಹಿಸಲಾಗುವದು ಎಂಬದಾಗಿ ಸ್ಪಷ್ಟಪಡಿಸಿದ್ದಾರೆ.