ಸನಾತನ ಸಂಸ್ಕøತಿಗೆ ಒಳಪಟ್ಟ ನಮ್ಮ ಭಾರತ ದೇಶದಲ್ಲಿ ಪ್ರತಿಯೊಂದು ಹಬ್ಬ-ಹರಿದಿನಗಳು ಅದರದ್ದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ. ಪ್ರತಿಯೊಂದು ಹಬ್ಬವು ತನ್ನದೇ ಆದ ಸಂಸ್ಕøತಿಯನ್ನು ಒಳಗೊಂಡಿದೆ. ಅಂತೆಯೇ ಕೇರಳದ ಮುಖ್ಯ ಹಬ್ಬ ‘ವಿಶು’ವನ್ನು ಮಲೆಯಾಳಿಗಳು ಬಹಳ ಸಂಭ್ರಮ - ಸಡಗರದಿಂದ ಆಚರಿಸುತ್ತಾರೆ. ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳದ ಗಡಿನಾಡ ಜಿಲ್ಲೆಯಲ್ಲಿಯೂ ವಿಶು ಹಬ್ಬವನ್ನು ಬಹಳ ಭಕ್ತಿಯಿಂದ ಆಚರಿಸುತ್ತಾರೆ. ತುಳುವರ ಮುಖ್ಯ ಹಬ್ಬವು ವಿಶು ಆಗಿದೆ. ಇದನ್ನು ಬಿಸುಪರ್ಬ (ವಿಷು ಹಬ್ಬ)ವೆಂದು ಕರೆಯುತ್ತಾರೆ.

ಅನಾದಿಕಾಲದಿಂದಲೂ ತುಳುವರು ನಾಗಾರಾಧನೆ, ಭೂತಾರಾಧಾನೆಯನ್ನು ನಂಬಿ, ದೈವ ದೈವಾದಿಗಳನ್ನು ಮುಂದಿಟ್ಟುಕೊಂಡು ತಮ್ಮ ಎಲ್ಲಾ ಕೆಲಸ - ಕಾರ್ಯಗಳನ್ನು ಪ್ರಾರಂಭಿಸುವದು ವಾಡಿಕೆ. ಅಂತೆಯೇ ತುಳುವರು ಬಿಸು ಪರ್ಬವನ್ನು ಆಚರಿಸುವ ಪದ್ಧತಿ ಇದೆ. ಮನೆಯ ಒಡತಿ ಸ್ನಾನ ಮಾಡಿ ಮುಂಜಾನೆಯೇ ತುದಿ ಬಾಳೆ ಎಲೆಯಲ್ಲಿ ಬೆಳಿಗ್ಗೆ ಅಕ್ಕಿ, ತೆಂಗಿನಕಾಯಿ, ಅಡಿಕೆ, ವೀಳ್ಯದೆಲೆ, ಆರ್ಥಿಕವಾಗಿ ಸ್ಥಿತಿವಂತರಾಗಿದ್ದರೆ ಚಿನ್ನ - ಹಣವನ್ನು ದೇವರ ಕೋಣೆಯಲ್ಲಿಟ್ಟು ದೀಪ ಹಚ್ಚಿ ನಮಸ್ಕರಿಸುತ್ತಾರೆ. ಮನೆಯ ಇತರ ಸದಸ್ಯರು ಕೂಡ ಮುಂಜಾನೆ ಮೊದಲು ‘ಬಿಸುಕಣಿ’ಯನ್ನು ನೋಡುವದು ವಾಡಿಕೆ. ಇದರಿಂದ ನಮ್ಮ ಮುಂದಿನ ಜೀವನವು ಒಳಿತಾಗುವದು ಎಂಬದು ನಂಬಿಕೆ.

ತರವಾಡು ಮನೆಗಳಲ್ಲಿ ಕುಟುಂಬದ ಸದಸ್ಯರೆಲ್ಲರೂ ಸೇರಿ ದೈವ-ದೇವರುಗಳು ಆಭರಣಗಳನ್ನು ಮುಟ್ಟಿ ನಮಸ್ಕರಿಸುವದು ಕೂಡ ಇದೆ. ಬಿಸು ಪರ್ಬ ಎಂದರೆ ಏನೋ ಹುರುಪು, ಏನೋ ಉತ್ಸಾಹ. ಜಗತ್ತಿನೆಲ್ಲೆಡೆ ಇರುವ ತುಳುವರು ‘ಬಿಸು ಪರ್ಬ’ವನ್ನು ಹೊಸ ‘ವರುಷ’ವೆಂದೇ ಆಚರಿಸುತ್ತಾರೆ. ಮದ್ಯಪಾನ, ಮಾಂಸಾಹಾರಕ್ಕೆ ಆಸ್ಪದ ನೀಡದೆ ಬಹಳ ಸರಳತೆಯಿಂದ ಆಚರಿಸುತ್ತಾರೆ. (ಕೆಲವೊಂದು ಕಡೆ ಮದ್ಯಪಾನ, ಮಾಂಸಕ್ಕೆ ಮುಖ್ಯ ಆದ್ಯತೆ ನೀಡುವದು ನೋಡುವಾಗ ವಿಷಾದವೆನಿಸುತ್ತದೆ.)

ಒಟ್ಟಿನಲ್ಲಿ ಬಿಸು ಪರ್ಬವು ಪ್ರತಿಯೊಬ್ಬರ ಬಾಳಿನಲ್ಲಿ ಹೊಸತನ ಮೂಡಿಸಲಿ ಎಲ್ಲರಿಗೂ ಒಳಿತನ್ನುಂಟು ಮಾಡಲಿ ಎಂದು ಹಾರೈಸೋಣ.

- ಮೋಹಿನಿ ದಯಾನಂದ ರೈ, ಪಾಲಿಬೆಟ್ಟ.