ಕುಶಾಲನಗರ, ಏ. 14: ಕುಶಾಲನಗರ ಹಾಗೂ ಹಾರನಹಳ್ಳಿ ಹೋಬಳಿಗಳ ವೀರಶೈವ ಲಿಂಗಾ ಯಿತ ಪ್ರಮುಖರು ಸೇರಿ ಕಳೆದ 25 ವರ್ಷಗಳ ಹಿಂದೆ ಬಸವೇಶ್ವರ ಟ್ರಸ್ಟ್ ರಚಿಸಿ ಬಸವೇಶ್ವರ ಕಲ್ಯಾಣ ಮಂಟಪ ಕಟ್ಟಲು ದಾನಿಗಳಿಂದ ಪಡೆದಿದ್ದ 50 ಸೆಂಟು ಜಾಗದಲ್ಲಿ ಹೊಸ ರೂಪ ಕೊಡಲು ಟ್ರಸ್ಟ್ ಸಭೆ ತೀರ್ಮಾನಿಸಿದ ಬೆನ್ನಲ್ಲೇ ವ್ಯಕ್ತಿಯೊಬ್ಬರು ಆ ಜಾಗ ನಮ್ಮದು ಎಂಬ ನಾಮಫಲಕ ಅಳವಡಿಸಿದ ಬಗ್ಗೆ ಟ್ರಸ್ಟ್ ಪದಾಧಿಕಾರಿಗಳು ಕುಶಾಲನಗರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಬಸವೇಶ್ವರ ಟ್ರಸ್ಟ್ ಸಮಿತಿ ಸಭೆಯಲ್ಲಿ ಜಾಗದ ಬಗ್ಗೆ ನ್ಯಾಯಾಲಯದಲ್ಲಿ ಹೋರಾಡಿ ಟ್ರಸ್ಟ್ ಹೆಸರಿಗೆ ನಮೂನೆ 3 ಮಾಡಿಸಿಕೊಂಡು ಕಂದಾಯ ಕೂಡ ಪಾವತಿಸಿ ಕಟ್ಟಡ ಕಟ್ಟಲು ‘ಕುಡ’ದಿಂದ ಪರವಾನಗಿ ಕೂಡ ಪಡೆಯಲಾಗಿದೆ. ಆದರೆ ಯಾರೋ ಅಕ್ರಮಿಗಳು ನಾಮಫಲಕ ಹಾಕಿರುವ ಬಗ್ಗೆ ನೀಡಿರುವ ದೂರಿನ ಬಗ್ಗೆ ಟ್ರಸ್ಟ್ ಉಪಾಧ್ಯಕ್ಷ ಮಹದೇವಪ್ಪ ಮಾಹಿತಿ ನೀಡಿದರು.

ಟ್ರಸ್ಟ್‍ನಲ್ಲಿರುವ ನಲವತ್ತು ಸದಸ್ಯರು ಕಟ್ಟಡ ಕಟ್ಟಲು ತಲಾ 5 ಲಕ್ಷ ರೂಗಳನ್ನು ಕಂತುಗಳ ರೂಪದಲ್ಲಿ ಪಾವತಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. 50 ಸೆಂಟು ಜಾಗದ ಸುತ್ತ ಬಂದೋಬಸ್ತ್ ಕೈಗೊಂಡು ಬ್ಯಾಂಕಿನಿಂದ ಸಾಲ ಪಡೆದು ಮುಂದಿನ ದಿನಗಳಲ್ಲಿ ಸುಸಜ್ಜಿತ ವೀರಶೈವ ಭವನ ಕಟ್ಟುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ಮುಂದಿನ ಸಭೆಯನ್ನು ತಾ. 16 ರಂದು ಕೊಪ್ಪದ ಶಿವದೇವ ಅಕ್ಕಿ ಗಿರಣಿ ಬಳಿ ನಡೆಸುವಂತೆ ತೀರ್ಮಾನಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಆವರ್ತಿ ಮಹದೇವಪ್ಪ, ಕಾರ್ಯದರ್ಶಿ ಹೆಚ್.ವಿ. ಶಿವಪ್ಪ, ಪ್ರಮುಖರಾದ ಹೆಚ್.ಎಸ್. ಪುಟ್ಟರಾಜು, ಹೆಚ್.ಎಸ್. ರೇವಪ್ಪ, ಕಲ್ಲೂರು ನಿಂಗಪ್ಪ, ವೀಣಾ, ಸುರೇಶ್, ಗರಗಂದೂರು ಸೋಮಶೇಖರ್, ಮಂಜುನಾಥ್, ಗುರುಮಲ್ಲಪ್ಪ, ವಿಶ್ವೇಶ್ವರಯ್ಯ, ಗುಡ್ಡೆಹೊಸೂರು ರಾಜಶೇಖರ ಮೊದಲಾದವರಿದ್ದರು.