ಮಡಿಕೇರಿ, ಏ. 14: ಇಲ್ಲಿನ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣವನ್ನು ರೂ. 89 ಲಕ್ಷ ವೆಚ್ಚದಲ್ಲಿ ನವೀಕರಿಸುವ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯ ಬಗ್ಗೆ ಜನ ವಲಯದಲ್ಲಿ ತೀವ್ರ ಅಸಮಾಧಾನದೊಂದಿಗೆ ತೀರಾ ಕಳಪೆ ಕೆಲಸ ನಡೆಯುತ್ತಿದೆ ಎಂಬ ಆರೋಪ ವ್ಯಕ್ತಗೊಳ್ಳತೊಡಗಿದೆ. ಪ್ರಸಕ್ತ ನಿಲ್ದಾಣದಲ್ಲಿ ನಿತ್ಯ ಪ್ರಯಾಣಿಕರ ಸಹಿತ ನಿಲ್ದಾಣ ಸಿಬ್ಬಂದಿ ಹಾಗೂ ಮಳಿಗೆಗಳ ವ್ಯಾಪಾರಿಗಳು; ಬಸ್ ಪ್ರಯಾಣಿಕರು ಬವಣೆ ಪಡುವಂತಾಗಿದೆ.‘ಶಕ್ತಿ’ಗೆ ಲಭಿಸಿರುವ ಮಾಹಿತಿ ಪ್ರಕಾರ ಅಂದಾಜು ರೂ. 1.50 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣದ ನವೀಕರಣಕ್ಕೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಕ್ರಿಯಾಯೋಜನೆಯನ್ನು ರೂಪಿಸಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಪುತ್ತೂರು ಸಾರಿಗೆ ಘಟಕದಿಂದ ಅಲ್ಲಿನ ನಿವಾಸಿ ರಜಾಕ್ ಎಂಬವರಿಗೆ ಮೊದಲ ಹಂತದಲ್ಲಿ ರೂ. 89 ಲಕ್ಷದ ಕಾಮಗಾರಿಗೆ ಟೆಂಡರ್ ನೀಡಲಾಗಿದೆ ಎಂದು ಗೊತ್ತಾಗಿದೆ.
(ಮೊದಲ ಪುಟದಿಂದ)
ಕಳೆದ 15 ದಿನಗಳಿಂದ ಬಸ್ ನಿಲ್ದಾಣದಲ್ಲಿ ಪ್ರಸಕ್ತ ನೆಲಹಾಸು ಅಳವಡಿಸಿರುವ ಟೈಲ್ಸ್ಗಳ ಮೇಲೆಯೇ ‘ಎಂ ಸ್ಯಾಂಡ್’ ಬಳಸಿಕೊಂಡು ಮತ್ತೆ ಇನ್ನಷ್ಟು ಉದ್ದ ಮತ್ತು ಅಗಲದಿಂದ ಕೂಡಿರುವ ಟೈಲ್ಸ್ ಅಳವಡಿಕೆ ಗೋಚರಿಸಿದೆ. ಇಲ್ಲಿ ಮಾಡಿರುವ ಕೆಲಸಗಳನ್ನೇ ಮತ್ತೆ ಮತ್ತೆ ಕಿತ್ತು ಹಾಕಿ ಮರು ಜೋಡಿಸುವ ಮೂಲಕ ಕಾಲಹರಣವಾಗುತ್ತಿದೆ ಎಂದು ನಿಲ್ದಾಣದ ವರ್ತಕರು ಆರೋಪಿಸಿದ್ದಾರೆ.
ಅನೇಕ ಪ್ರಯಾಣಿಕರು ಕೆಲಸದ ಅರಿವಿಲ್ಲದೆ ಬಸ್ ಏರುವ ಗಡಿಬಿಡಿಯಲ್ಲಿ ಬರುವಾಗ ಜಾರಿ ಬಿದ್ದು ಗಾಯಗೊಂಡಿದ್ದಾರೆ ಎಂದು ಬೊಟ್ಟು ಮಾಡಿದ್ದಾರೆ. ಅಲ್ಲದೆ ಈ ಹಿಂದೆ ಅಳವಡಿಸಿರುವ ಟೈಲ್ಸ್ಗಳ ಮೇಲೆಯೇ ಹೊಸದಾಗಿ ಕೆಲಸ ನಡೆಸುತ್ತಿರುವದು ಕಂಡು ಬಂದಿದ್ದು, ಇಲ್ಲಿ ಸಾಕಷ್ಟು ಸಂಶಯದೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಕಾಮಗಾರಿಯಿಂದ ಯಾರಿಗೆ ಉಪಯೋಗ ಎಂದು ಪ್ರಶ್ನಿಸಿರುವ ವರ್ತಕರೊಂದಿಗೆ, ನಿಲ್ದಾಣ ಸಿಬ್ಬಂದಿ ಮತ್ತು ಸಾರ್ವಜನಿಕ ಪ್ರಯಾಣಿಕರು ಕೂಡ ಕಳಪೆ ಕೆಲಸದೊಂದಿಗೆ ಹಣ ದುರುಪಯೋಗದ ಆರೋಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಚುನಾವಣೆಯ ನಡುವೆ ತರಾತುರಿಯಲ್ಲಿ ಇಂತಹ ಕೆಲಸದ ಔಚಿತ್ಯವನ್ನು ಪ್ರಶ್ನಿಸಿದ್ದಾರೆ.
ಸಾರಿಗೆ ಇಲಾಖೆ ಮಾಹಿತಿ : ಈ ಬಗ್ಗೆ ಸಂಸ್ಥೆಯ ಮಡಿಕೇರಿ ಘಟಕ ವ್ಯವಸ್ಥಾಪಕಿ ಗೀತಾ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ, ಕಾಮಗಾರಿ ಕೇಂದ್ರ ವಲಯದಿಂದ ನಡೆಯುತ್ತಿದ್ದು, ಇಲ್ಲಿಗೆ ಸಂಬಂಧಿಸಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಪುತ್ತೂರು ಘಟಕ ವ್ಯವಸ್ಥಾಪಕರನ್ನು ‘ಶಕ್ತಿ’ ಮಾಹಿತಿ ಬಯಸಿದಾಗ, ಅದು ಸಾರಿಗೆ ಇಲಾಖೆಯ ತಾಂತ್ರಿಕ ವಿಭಾಗದಿಂದ ಕಾಮಗಾರಿಯೆಂದು ಪ್ರತಿಕ್ರಿಯಿಸಿದ್ದಾರೆ. ಪುತ್ತೂರು ಸಾರಿಗೆ ಘಟಕ ತಾಂತ್ರಿಕ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿರುವ ಶರತ್ ಅವರನ್ನು ಸಂಪರ್ಕಿಸಿದಾಗ, ಮಡಿಕೇರಿಯ ರಾಜ್ಯ ಸಾರಿಗೆ ಬಸ್ ನಿಲ್ದಾಣ ಮಳೆಯಿಂದ ಸೋರುತ್ತಿದ್ದು, ಹೀಗಾಗಿ ದುರಸ್ಥಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಿದ್ದಾರೆ.
ನಿಲ್ದಾಣ ಮೇಲ್ದರ್ಜೆಗೆ: ಆ ಪ್ರಕಾರ ಇಲ್ಲಿನ ನಿಲ್ದಾಣದ ಮೇಲ್ಚಾವಣಿಯನ್ನು ಸಂಪೂರ್ಣ ಬದಲಾಯಿಸಲಾಗುತ್ತಿದೆ; ನಿಲ್ದಾಣ ಆವರಣದ ಸುತ್ತಲೂ ತಡೆಗೋಡೆ, ಚರಂಡಿ ವ್ಯವಸ್ಥೆ, ಹೊಸದಾಗಿ ಟೈಲ್ಸ್ನೊಂದಿಗೆ ಇಂಟರ್ಲಾಕ್ ಅಳವಡಿಕೆ ಕಾಮಗಾರಿಗೆ ಗುತ್ತಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಪ್ರಯಾಣಿಕರು ನಿಲ್ದಾಣದಲ್ಲಿ ಆಸೀನರಾಗಲು ಸುಸಜ್ಜಿತವಾದ ತುಕ್ಕು ಹಿಡಿಯದ ಬದಲಿ ಆಸನ ವ್ಯವಸ್ಥೆ, ನಿಲ್ದಾಣಕ್ಕೆ ಬಸ್ಗಳು ಬರುವಲ್ಲಿ ಅಲ್ಲಲ್ಲಿ ಉಂಟಾಗಿರುವ ಗುಂಡಿಗಳನ್ನು ಸರಿಪಡಿಸುವದು, ಕಟ್ಟಡಗಳಿಗೆ ಬಣ್ಣ ಬಳಿಯುವದು ಮುಂತಾದ ಕಾಮಗಾರಿ ಒಳಗೊಂಡಂತೆ ಗುತ್ತಿಗೆ ನೀಡಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಆದರೆ ಇಲ್ಲಿ ಪ್ರಮುಖವಾಗಿ ಕೈಗೊಳ್ಳಬೇಕಾಗಿರುವ ಉಲ್ಲೇಖಿತ ಕಾಮಗಾರಿಗಳ ಹೊರತಾಗಿ; ಕಳೆದ 15 ದಿನಗಳಿಂದ ಇರುವ ಬಸ್ ನಿಲ್ದಾಣವನ್ನು ಹಾಳುಗೆಡವಿ ಚುನಾವಣೆ ನಡುವೆ ತರಾತುರಿಯಲ್ಲಿ ಕೆಲಸಕ್ಕೆ ಮುಂದಾಗಿರುವದು ಸಂಶಯ ಮೂಡಿಸಿದೆ ಎಂಬದು ಸಾರ್ವಜನಿಕರ ಅಸಮಾಧಾನವಾಗಿದೆ.