ಸೋಮವಾರಪೇಟೆ, ಏ.15: ಕಾಂಗ್ರೆಸ್ ಸರ್ಕಾರ ದಲಿತರನ್ನು ಕೇವಲ ಓಟ್ ಬ್ಯಾಂಕ್ ಆಗಿ ಮಾಡಿಕೊಂಡಿದೆಯೇ ಹೊರತು ದಲಿತರ ಮೇಲೆ ಕಾಳಜಿ ವಹಿಸಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ದಲಿತರ ಉದ್ದಾರಕ್ಕೆ ಹಲವಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಹೆಚ್.ಸಿ. ರಾಮಕೃಷ್ಣ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಮೋದಿ ಅವರು 100 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಅವರ ಸ್ಮಾರಕ ನಿರ್ಮಿಸಿದ್ದಾರೆ. ಲಂಡನ್‍ನ ನಿವಾಸವನ್ನು ಭಾರತ ಸ್ವಾಧೀನಕ್ಕೆ ತೆಗೆದುಕೊಳ್ಳುವ ಮೂಲಕ ಬಾಬಾ ಸಾಹೇಬ್ ಅವರಿಗೆ ಗೌರವ ಸಲ್ಲಿಸಿದೆ. ಆದರೆ ಈವರೆಗೆ ಆಡಳಿತ ನಡೆಸಿದ ಕಾಂಗ್ರೆಸ್‍ನಿಂದ ಇಂತಹ ಕ್ರಮ ಸಾಧ್ಯವಾಗಿಲ್ಲ ಎಂದರು. ಈ ಹಿಂದೆ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್ ಪಕ್ಷ ಇದೀಗ ದಲಿತರ ಪರ ಮೊಸಳೆ ಕಣ್ಣೀರು ಹಾಕುತ್ತಿದೆ. ಅಂಬೇಡ್ಕರ್ ವಿಧಿವಶರಾದಾಗ ಅಂತ್ಯಸಂಸ್ಕಾರಕ್ಕೂ ದೆಹಲಿಯಲ್ಲಿ ಜಾಗ ನೀಡಲಿಲ್ಲ. ಇದನ್ನು ದಲಿತ ಬಂಧುಗಳು ಮರೆತಿಲ್ಲ ಎಂದರು.
ಕಳೆದ 5 ವರ್ಷದಲ್ಲಿ 10ಕೋಟಿಗೂ ಹೆಚ್ಚು ಶೌಚಾಲಯ ನಿರ್ಮಿಸಲಾಗಿದೆ. ಎಲ್ಲರಿಗೂ ಪಿಂಚಣಿ ಯೋಜನೆ, 10 ಕೋಟಿಗೂ ಹೆಚ್ಚು ಮಂದಿಗೆ ಸೋಷಿಯಲ್ ಹೆಲ್ತ್ ಕಾರ್ಡ್ ವಿತರಣೆ, 15 ಕೋಟಿಗೂ ಹೆಚ್ಚು ಮುದ್ರಾ ಯೋಜನೆಯಡಿ ಸಾಲ, ಜನ್‍ಧನ್ ಯೋಜನೆಯಡಿ ಬ್ಯಾಂಕ್ ಖಾತೆ, ಹೌಸ್ ಫಾರ್ ಆಲ್ ಯೋಜನೆ, 50ಕೋಟಿಗೂ ಹೆಚ್ಚು ಮಂದಿಗೆ 5ಲಕ್ಷದವರೆಗೆ ಆರೋಗ್ಯ ವಿಮೆ, ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ನೀಡಿದ್ದು ಮೋದಿ ಸರ್ಕಾರ ಎಂದು ರಾಮಕೃಷ್ಣ ಹೇಳಿದರು. ಸಂಸದ ಪ್ರತಾಪ್ ಸಿಂಹ ಅತೀ ಹೆಚ್ಚುನ ಅನುದಾನ ತರುವಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದರು.
ಗೋಷ್ಠಿಯಲ್ಲಿ ಎಸ್‍ಸಿ ಮೋರ್ಚಾದ ಹೋಬಳಿ ಅಧ್ಯಕ್ಷ ಲೋಕೇಶ್, ಪದಾಧಿಕಾರಿಗಳಾದ ವಿಜಯ, ಲೋಹಿತ್ ಅವರುಗಳು ಉಪಸ್ಥಿತರಿದ್ದರು.