ಗೋಣಿಕೊಪ್ಪ ವರದಿ, ಏ. 15 : ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಕನಸುಗಳನ್ನು ಮತ್ತು ಸಂವಿಧಾನದಲ್ಲಿರುವ ಆಶಯಗಳು ಹಾಗೂ ಉದ್ದೇಶಗಳನ್ನು ಪೂರ್ಣಗೊಳಿಸಲು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಮಾಜಿ ಲೋಕೋಪಯೋಗಿ ಸಚಿವ ಎಚ್.ಸಿ ಮಹದೇವಪ್ಪ ಕರೆ ನೀಡಿದರು.

ಮೈತ್ರಿ ಪಕ್ಷದ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನದ ಅಡಿಯಲ್ಲಿ ಆಡಳಿತ ನಡೆಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಆದರೆ ದೇಶದಲ್ಲಿ ಮೋದಿ ಸರ್ವಾಧಿಕಾರ ನಡೆಯುತ್ತಿದೆ. ಸಮೃದ್ಧ ಭಾರತದ ಆಲೋಚನೆ ಕಾಂಗ್ರೆಸ್ ಪಕ್ಷದಲ್ಲಿದೆ ಆದರೆ ಮೋದಿ ಭಾರತದ ಆಶಯ ಬಿಜೆಪಿ ಸರ್ಕಾರದ ಚಿಂತನೆಯಾಗಿದೆ. ಬಿಜೆಪಿ ಅಂಬೇಡ್ಕರ್ ಅವರ ಸಾಂವಿಧಾನವನ್ನು ಬುಡಮೇಲು ಮಾಡುತ್ತಿದೆ ಎಂದು ಆರೋಪಿಸಿದರು.

ಕೇರಳದ ವಯನಾಡು ಕ್ಷೇತ್ರದ ಮಾಜಿ ಸಚಿವೆ ರೋಸಾ ಕುಟ್ಟಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಎಲ್ಲಾ ಅಂಶಗಳನ್ನು ಹೇಳಲಾಗಿದೆ. ಪ್ರಣಾಳಿಕೆಯನ್ನು ಅರ್ಥೈಸಿಕೊಂಡು ಮೈತ್ರಿ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ ಮಂಜುನಾಥ್ ಮಾತನಾಡಿ, ದೇಶದ ಉಳಿವಿಗೆ ಜ್ಯಾತ್ಯತೀತ ಪಕ್ಷಗಳ ಉಳಿವು ಅತಿಮುಖ್ಯ. ಮೈತ್ರಿ ಪಕ್ಷದ ಆಯ್ಕೆ ಮೂಲಕ ದೇಶವನ್ನು ಉಳಿಸುವ ಹೊಣೆಗಾರಿಕೆ ಮತದಾರರ ಮೇಲಿದೆ ಎಂದರು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬಡವರಿಗೆ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು. ಅದ್ದರಿಂದ ಕೋಟ್ಯಾಂತರ ಬಡವರು ಪ್ರಯೋಜನವನ್ನು ಪಡೆದಿದ್ದಾರೆ. ಎಂದರು.

ಜೆಡಿಎಸ್ ಅಧ್ಯಕ್ಷ ಕೆ. ಎಂ. ಗಣೇಶ್ ಮಾತನಾಡಿ, ಸಂವಿಧಾನವನ್ನು ತಿರುಚಲು ಹೊರಟಿರುವ ಬಿಜೆಪಿ ಸರ್ಕಾರ ನಮಗೆ ಬೇಕಿಲ್ಲ. 5 ವರ್ಷಗಳಲ್ಲಿ ಒಂದು ದಿನವೂ ಅಚ್ಚೇ ದಿನ್ ಬಂದಿಲ್ಲ ಎಂದರು.

ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ, ಮಾಜಿ ಸಚಿವೆ ಸುಮಾ ವಸಂತ್, ಶಾಸಕಿ ವೀಣಾ ಅಚ್ಚಯ್ಯ, ಮಾಜಿ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಜೆಡಿಎಸ್ ಮಹಿಳಾ ಘಡಕದ ಜಿಲ್ಲಾಧ್ಯಕ್ಷೆ ಶಾಂತಿ ಅಚ್ಚಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ, ಪರಿಶಿಷ್ಟ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷೆ ಪಂಕಜಾ, ಪಕ್ಷದ ಕ್ಷೇತ ವೀಕ್ಷಕ ಶಾಹಿದ್ ಇದ್ದರು.