ಸೋಮವಾರಪೇಟೆ, ಏ. 15: ನರೇಂದ್ರ ಮೋದಿ ಅವರ ಭ್ರಷ್ಟಾಚಾರ ರಹಿತ ಆಡಳಿತ, ಮೈಸೂರು ಸೇರಿದಂತೆ ಕೊಡಗಿನಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಕಳೆದ 5 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರ ಗೆಲುವಿಗೆ ಕಾರಣವಾಗಲಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಅಭಿಪ್ರಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ನಳಿನಿ ಗಣೇಶ್, ಸಂಸದರಾದ ಪ್ರತಾಪ್‍ಸಿಂಹ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸಿದ್ದಾರೆ. ಬಹುನಿರೀಕ್ಷಿತ ಮೈಸೂರು-ಕೊಡಗು ರೈಲುಮಾರ್ಗ, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೈಸೂರಿನಲ್ಲಿ ಪಾಸ್‍ಪೋರ್ಟ್ ಸೇವಾಕೇಂದ್ರ, ಮೈಸೂರು-ಮಡಿಕೇರಿ ನಡುವೆ ನಾಲ್ಕು ಪಥದ ಹೆದ್ದಾರಿ ನಿರ್ಮಾಣದ ಬೃಹತ್ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಜಿಲ್ಲೆಯಲ್ಲಿಯೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ 20 ಸಾವಿರ ಬಡ ಕುಟುಂಬಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸ್ಸಿನ ಉಜ್ವಲಯೋಜನೆಯಡಿ ಉಚಿತ ಗ್ಯಾಸ್ ವಿತರಣೆ, ಬಡಜನರಿಗೆ ಕಡಿಮೆ ಬೆಲೆಯಲ್ಲಿ ಔಷಧಿ ದೊರೆಯುವಂತೆ ಮಾಡುವ ಜನೌಷಧ ಕೇಂದ್ರಗಳನ್ನು ತೆರೆಯುವಲ್ಲಿ ಪ್ರತಾಪ್ ಸಿಂಹ ಯಶಸ್ವಿಯಾಗಿದ್ದಾರೆ ಎಂದು ನಳಿನಿ ಗಣೇಶ್ ಹೇಳಿದರು.

ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯೆ ಸುಮಾ ಸುದೀಪ್ ಮಾತನಾಡಿ, ಕೇಂದ್ರದಿಂದ ಕೊಡಗು ಜಿಲ್ಲೆಗೆ 34 ಕೋಟಿ ರೂ. ಅನುದಾನ ಬಂದಿದ್ದು, ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಗೋಣಿಕೊಪ್ಪ ನಗರದ ಪ್ರಮುಖ ರಸ್ತೆ ಹಾಗು ಸೋಮವಾರಪೇಟೆ ತಾಲೂಕಿನ ಹಿಪ್ಪಲಿ ಗೇಟ್‍ನಿಂದ ಆಲೂರು ಸಿದ್ದಾಪುರದವರೆಗಿನ 9.5ಕಿ.ಮೀ ರಸ್ತೆ ಅಭಿವೃದ್ಧಿಗೆ ಕೇಂದ್ರ ರಸ್ತೆ ನಿಧಿಯಿಂದ 9ಕೋಟಿ ರೂ. ಬಿಡುಗಡೆ ಮಾಡಿದ್ದು ಕಾಮಗಾರಿ ಪ್ರಾರಂಭಗೊಂಡಿದೆ ಎಂದರು.

ತಾಲೂಕು ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಎಚ್.ಎನ್.ತಂಗಮ್ಮ ಮಾತನಾಡಿ, ಚನ್ನರಾಯಪಟ್ಟಣದಿಂದ ಸೋಮವಾರಪೇಟೆ, ಮಡಿಕೇರಿ ಮೂಲಕ ವಿರಾಜಪೇಟೆ ಮಾಕುಟ್ಟ ರಸ್ತೆಯನ್ನು ಹೆದ್ದಾರಿಯಾಗಿ ಘೋಷಣೆ ಮಾಡಲಾಗಿದೆ. ಅದೇ ರೀತಿ ಭಾಗಮಂಡಲದಿಂದ ಮಡಿಕೇರಿವರೆಗೆ 53 ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆ ಮಾಡಲಾಗಿದೆ ಎಂದರು. ಗೋಷ್ಠಿಯಲ್ಲಿ ಮೋರ್ಚಾದ ಉಪಾಧ್ಯಕ್ಷೆ ಲೀಲಾ ನಿರ್ವಾಣಿ, ಸದಸ್ಯೆ ಕಾಮಾಕ್ಷಿ ಉಪಸ್ಥಿತರಿದ್ದರು.