ಸೋಮವಾರಪೇಟೆ, ಏ.15: ಕೊಡಗು ಜಿಲ್ಲೆಗೆ ಕಂಟಕಪ್ರಾಯವಾಗಿದ್ದ ಮಾಧವ ಗಾಡ್ಗೀಳ್ ವರದಿ ಅನುಷ್ಠಾನಕ್ಕೆ ಸಹಿ ಮಾಡಿದ್ದೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ವಿಜಯಶಂಕರ್ ಅವರು ಕೊಡಗಿಗೆ ನೀಡಿದ ಕೊಡುಗೆಯಾಗಿದೆ ಎಂದು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಲೇವಡಿ ಮಾಡಿದರು.

ಭಾರತೀಯ ಜನತಾ ಪಾರ್ಟಿಯ ವತಿಯಿಂದ ಇಲ್ಲಿನ ಜೇಸೀ ವೇದಿಕೆಯಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೊಡಗಿನ ಶಾಸಕರ ಹೋರಾಟದಿಂದ ವರದಿ ಅನುಷ್ಠಾನಕ್ಕೆ ಬಂದಿಲ್ಲ ಎಂದರು.

ಕೊಡಗಿನಲ್ಲಿ ಪ್ರವಾಹ ಉಂಟಾದ ಸಂದರ್ಭ 5,500 ಮಂದಿಗೆ 5 ರಿಂದ 1ಲಕ್ಷದವರೆಗೆ ಕೇಂದ್ರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಪರಿಹಾರ ಕೊಡಿಸಿದ್ದೇನೆ. 20 ಮಂದಿ ಮೃತಪಟ್ಟ ಸಂದರ್ಭ ಕೇಂದ್ರದಿಂದ 6 ಲಕ್ಷ ನೀಡಲಾಗಿದೆ. ಆದರೆ ರಾಜ್ಯ ಸರ್ಕಾರ ಕೇವಲ 1 ಲಕ್ಷ ನೀಡಿದೆ. ಭೂಕುಸಿತಗೊಂಡ ರಸ್ತೆ ಕಾಮಗಾರಿಗಳೂ ಸಹ ರಾಷ್ಟ್ರೀಯ ಹೆದ್ದಾರಿ ನಿಗಮದಿಂದ ನಡೆಯುತ್ತಿದೆ ಎಂದ ಪ್ರತಾಪ್ ಸಿಂಹ, ಮೋದಿ ನೇತೃತ್ವದ ಸರ್ಕಾರದಿಂದ ಗ್ರಾಮ ಪಂಚಾಯಿತಿಗಳು ನಡೆಯುತ್ತಿವೆ.14 ನೇ ಹಣಕಾಸು ಆಯೋಗದಿಂದ ನೇರವಾಗಿ ಗ್ರಾ.ಪಂ.ಗಳಿಗೆ ಅನುದಾನ ಬಿಡುಗಡೆಯಾಗುತ್ತಿದೆ. ಬೀದಿ ದೀಪಗಳ ವಿದ್ಯುತ್ ಬಿಲ್ ಸಹ ಮೋದಿ ಸರ್ಕಾರ ಕಟ್ಟುತ್ತಿದೆ ಎಂದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಹಿಂದೆ ಬಿಜೆಪಿ ಸರ್ಕಾರವಿದ್ದಾಗ ದೇವಾಲಯ, ಶಾದಿ ಮಹಲ್, ಚರ್ಚ್‍ಗಳ ನಿರ್ಮಾಣಕ್ಕೆ ಕೋಟ್ಯಂತರ ಅನುದಾನ ಒದಗಿಸಲಾಗಿದೆ. ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುವದಾಗಿ ಘೋಷಿಸಿ ಇಂದಿಗೂ ಮನ್ನಾ ಮಾಡಿಲ್ಲ. 100 ಕೋಟಿ ಹಣ ಇನ್ನೂ ಡಿಸಿಸಿ ಬ್ಯಾಂಕ್‍ಗೆ ಬರಬೇಕಿದೆ. ಕೊಡಗಿನಲ್ಲಿ ಕೇವಲ 11 ಮಂದಿಗೆ ಮಾತ್ರ 1 ಲಕ್ಷ ಸಾಲ ಮನ್ನಾ ಆಗಿದೆ. ಇಂತಹ ಕೂಡಾವಳಿ ಸರ್ಕಾರದಿಂದ ಅಭಿವೃದ್ಧಿ ಅಸಾಧ್ಯ ಎಂದರು.

ನಾವುಗಳು 1800 ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇವೆ. ಈಗಿನ ಸರ್ಕಾರ ಕೇಂದ್ರದಿಂದ ಬರುವ ಅನುದಾನವನ್ನೂ ಕೊಡಗಿಗೆ ನೀಡುತ್ತಿಲ್ಲ. ಮಲತಾಯಿ ಧೋರಣೆ ಮುಂದುವರೆಸಿದೆ ಎಂದು ಆರೋಪಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಮತದಾರರೇ ಈ ಬಾರಿ ಬಿಜೆಪಿ ಪರ ಮತ ಚಲಾಯಿಸಲು ಉತ್ಸುಕರಾಗಿದ್ದು, ಮೋದಿ ಆಡಳಿತ ಬಯಸಿದ್ದಾರೆ ಎಂದರು.

ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಬಿಜೆಪಿ ಮುಖಂಡ ವಿ.ಎಂ. ವಿಜಯ, ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿ.ಕೆ. ಲೋಕೇಶ್, ಜಿಲ್ಲಾ ವಕ್ತಾರ ಅಭಿಮನ್ಯುಕುಮಾರ್, ಎಸ್.ಸಿ. ಮೋರ್ಚಾದ ರಾಮಕೃಷ್ಣ, ಮಹಿಳಾ ಮೋರ್ಚಾದ ನಳಿನಿ ಗಣೇಶ್, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಸದಸ್ಯೆ ತಂಗಮ್ಮ, ಧರ್ಮಪ್ಪ, ಪ್ರಮುಖರಾದ ಮಲ್ಲೇಶ್, ನಗರಾಧ್ಯಕ್ಷ ಸೋಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.