ಸೋಮವಾರಪೇಟೆ, ಏ.15: ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಮೈತ್ರಿ ಸರ್ಕಾರ ಉಳಿಯಬೇಕು; ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ 4 ವರ್ಷ ಇರಬೇಕು ಎಂದಾದರೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಅವರು ಗೆಲ್ಲಲೇಬೇಕು ಎಂದು ನಿಗಮ ಮಂಡಳಿ ಮಾಜೀ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವತಿಯಿಂದ ಇಲ್ಲಿನ ಜೇಸೀ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
4 ವರ್ಷ ರಾಜ್ಯ ಸರ್ಕಾರ ಇರಬೇಕು;ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರಬೇಕು ಎಂದಾದರೆ ಮೈತ್ರಿ ಅಭ್ಯರ್ಥಿ ಗೆಲುವು ಅನಿವಾರ್ಯ. ಮೈತ್ರಿ ಅಭ್ಯರ್ಥಿ ಕ್ಷೇತ್ರದಲ್ಲಿ ಕನಿಷ್ಟ 2.50 ಲಕ್ಷ ಮತಗಳ ಅಂತರದಿಂದ ಜಯಗಳಿಸುವದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ಮೈತ್ರಿಯಿಂದ ಪಟ್ಟಣ ಪಂಚಾಯಿತಿಯಲ್ಲಿ ಅತ್ಯಧಿಕ ಸ್ಥಾನ ಗಳಿಸಿದ್ದೇವೆ. ಕಾಂಗ್ರೆಸ್ ಬಡವರ ಪಕ್ಷವಾಗಿದ್ದು, ಸಿದ್ದರಾಮಯ್ಯ ಅವರು ಈ ಹಿಂದೆ 150 ಭರವಸೆಗಳನ್ನು ಈಡೇರಿಸಿದ್ದಾರೆ. ಮೈತ್ರಿ ಸರ್ಕಾರದಿಂದ ಉತ್ತಮ ಕಾರ್ಯಗಳು ಪ್ರಗತಿಯಲ್ಲಿದ್ದು, ಸೋಮವಾರಪೇಟೆ ಭಾಗದಲ್ಲಿ 100 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ನಾವು ಹಣ ತಂದರೆ ಕ್ಷೇತ್ರದ ಶಾಸಕರು ಭೂಮಿಪೂಜೆ ನೆರವೇರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ಕ್ಷೇತ್ರ ಸಮಿತಿಯ ಅಧ್ಯಕ್ಷ ಹೆಚ್.ಆರ್. ಸುರೇಶ್ ಮಾತನಾಡಿ, ಮೈತ್ರಿ ಸರ್ಕಾರದಿಂದ ಜಿಲ್ಲೆ ಅಭಿವೃದ್ಧಿ ಕಾಣುತ್ತಿದೆ. ಬಿಜೆಪಿಯವರು ಮೋದಿ ಮುಖ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಡಿಸಿಲ್ವಾ ಮಾತನಾಡಿ, ಇಂದಿಗೂ ಹಲವಷ್ಟು ಭಾಗದಲ್ಲಿ ಮೈತ್ರಿ ಅಭ್ಯರ್ಥಿಯ ಪರ ಪ್ರಚಾರ ಕಾರ್ಯವೇ ನಡೆದಿಲ್ಲ. ಮುಂದಿನ ದಿನಗಳಲ್ಲಿ ಪ್ರತಿ ಮನೆಗೂ ತೆರಳಿ ಪ್ರಚಾರ ಮಾಡಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕಾಂಗ್ರೆಸ್ ಮುಖಂಡ ಹೆಚ್.ಸಿ. ನಾಗೇಶ್ ಮಾತನಾಡಿದರು. ವೇದಿಕೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್, ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ, ಕಾಂಗ್ರೆಸ್ ಮುಖಂಡ ಬಗ್ಗನ ತಮ್ಮಯ್ಯ, ಬಿ.ಬಿ. ಸತೀಶ್, ವಿ.ಎ. ಲಾರೆನ್ಸ್, ಉದಯಶಂಕರ್, ಶೀಲಾ ಡಿಸೋಜ, ಹೆಚ್.ಎ. ನಾಗರಾಜು, ಜೆಡಿಎಸ್ ನಗರಾಧ್ಯಕ್ಷ ಜಯಾನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.