ಸೋಮವಾರಪೇಟೆ, ಏ. 15: ಶಾಂತಳ್ಳಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪದಾಧಿಕಾರಿಗಳ ಚುನಾವಣಾ ಪ್ರಚಾರ ಸಭೆ ಕುಮಾರಲಿಂಗೇಶ್ವರ ದೇವಾಲಯ ಆವರಣದಲ್ಲಿ ನಡೆಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 5 ವರ್ಷಗಳಿಂದ ಜಿಲ್ಲೆಯಲ್ಲಿ ಯಾವದೇ ಅಭಿವೃದ್ಧಿ ಕಾರ್ಯ ಮಾಡದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಜಿಲ್ಲೆಯ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕ ಬಿ.ಈ. ಜಯೇಂದ್ರ ಮಾತನಾಡಿ, ಶಾಂತಳ್ಳಿ ಹೋಬಳಿ ಸೇರಿದಂತೆ ಪುಷ್ಪಗಿರಿ ತಪ್ಪಲಿನ ಹಲವು ಗ್ರಾಮಗಳ ಗ್ರಾಮಸ್ಥರು ಕಸ್ತೂರಿರಂಗನ್ ವರದಿಯಿಂದ ಸಂಕಷ್ಟ ಎದುರಿಸುವಂತಾಗಿದೆ. ಹಿಂದಿನ ಲೋಕಸಭಾ ಚುನಾವಣೆಗೂ ಮುನ್ನ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದ್ದ ಪ್ರತಾಪ್ ಸಿಂಹ ಯಾವದೇ ಕೆಲಸವನ್ನು ಮಾಡಿಲ್ಲ ಎಂದರು.

ಕಾಳು ಮೆಣಸು ಹಾಗೂ ಕಾಫಿಗೆ ಬೆಲೆ ಇಳಿಕೆಯಾಗಿದ್ದು ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ ಕೇಂದ್ರ ಸರ್ಕಾರ ಬೆಳೆಗಾರರ ಹಿತ ಕಾಪಾಡಲು ಮುಂದಾಗಿಲ್ಲ ಎಂದು ಶಾಂತಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಗ್ಗನ ಅನಿಲ್ ಆರೋಪಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯರುಗಳಾದ ನಾಗರಾಜು, ಕೆ.ಕೆ. ಗೋಪಾಲ್, ಮಾಜಿ ಅಧ್ಯಕ್ಷ ಕೆ.ಕೆ. ಮುತ್ತಣ್ಣ, ಕೆ. ಕೆ. ಸುಬ್ಬಯ್ಯ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಗ್ಗನ ತಮ್ಮಯ್ಯ, ಬೀದಳ್ಳಿ ತಮ್ಮಯ್ಯ, ಪೊನ್ನಪ್ಪ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.