ಗೋಣಿಕೊಪ್ಪ ವರದಿ, ಏ. 15 : ಹಾಕಿಕೂರ್ಗ್ ವತಿಯಿಂದ ಕಾಕೋಟು ಪರಂಬು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿರುವ ಕೂರ್ಗ್ ಚಾಂಪಿಯನ್ ಟ್ರೋಫಿ ಟೂರ್ನಿಯಲ್ಲಿ 149 ಕೊಡವ ಕುಟುಂಬಗಳು ಪಾಲ್ಗೊಳ್ಳಲಿವೆ ಎಂದು ಹಾಕಿಕೂರ್ಗ್ ಕಾರ್ಯದರ್ಶಿ ಬುಟ್ಟಿಯಂಡ ಚೆಂಗಪ್ಪ ತಿಳಿಸಿದ್ದಾರೆ.ತಾ. 20 ರಿಂದ ಮುಂದಿನ 21 ದಿನಗಳ ಕಾಲ ಟೂರ್ನಿ ನಡೆಯಲಿದ್ದು, ಚೊಚ್ಚಲ ಬಾರಿ ನಡೆಯುವ ಟೂರ್ನಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ ತಂಡದ ನೋಂದಣಿ ಪ್ರಕ್ರಿಯೆ ಮುಗಿದಿದ್ದು, 149 ತಂಡಗಳು ನೋಂದಣಿ ಮಾಡಿಕೊಂಡಿದೆ. ಅಲ್ಲಿನ 2 ಮೈದಾನದಲ್ಲಿ ಟೂರ್ನಿ ನಡೆಯಲಿದೆ. ಕೊಡಗಿನ ಹಾಕಿ ಅಭಿಮಾನಿಗಳಿಗೆ ಉತ್ತಮ ಹಾಕಿ ಪ್ರದರ್ಶನ ದೊರೆಯಲಿದೆ ಎಂದು ತಿಳಿಸಿದರು. ನಿರೀಕ್ಷೆಗಿಂತ ಹೆಚ್ಚು ತಂಡಗಳು ನೋಂದಣಿ ಮಾಡಿಕೊಂಡಿರುವದು ಹಾಕಿ ಆಟಕ್ಕೆ ಹೆಚ್ಚು ಪ್ರೋತ್ಸಾಹ ದೊರೆತಂತಾಗಿದೆ ಎಂದರು.

ತಾ. 20 ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಈ ಟೂರ್ನಿಯ ನಡುವೆ ಇಲ್ಲಿವರೆಗೆ ನಡೆದಿರುವ ಕೌಟುಂಬಿಕ ಕೊಡವ ಹಾಕಿಯಲ್ಲಿ ಪ್ರಶಸ್ತಿ ಸುತ್ತಿಗೆ ಬಂದಿರುವ ತಂಡಗಳಿಗೆ ಚಾಂಪಿಯನ್ಸ್ ಲೀಗ್ ಟೂರ್ನಿ ಆಯೋಜಿಸಲಾಗಿದೆ. ಇದರಲ್ಲಿ 10 ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಚೇಂದಂಡ, ಕಲಿಯಂಡ, ಚೆಪ್ಪುಡೀರ, ಮುಕ್ಕಾಟೀರ (ಬೋಂದ), ಪಳಂಗಂಡ, ಪರದಂಡ, ಮಂಡೇಪಂಡ, ಕುಲ್ಲೆಟೀರ, ಅಂಜಪರವಂಡ ಹಾಗೂ ಕೂತಂಡ ತಂಡಗಳು ಸ್ಪರ್ಧಿಸಲಿವೆ ಎಂದರು.

ವಿಶೇಷ ಸಭೆ : ಕೂರ್ಗ್ ಚಾಂಪಿಯನ್ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಕುಟುಂಬಗಳ ವ್ಯವಸ್ಥಾಪಕರುಗಳೊಂದಿಗೆ ಸಲಹಾ ಸಭೆ ತಾ. 16 ರಂದು (ಇಂದು) ವೀರಾಜಪೇಟೆ ಕೊಡವ ಸಮಾಜದ ಕ್ಲಬ್ ಹಾಲ್‍ನಲ್ಲಿ ಬೆಳಗ್ಗೆ 10.30 ಕ್ಕೆ ನಡೆಯಲಿದೆ. ಅದೇ ದಿನ ಟೈಸ್ ಬಿಡುಗಡೆ ಮಾಡಲಾಗುವದು ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ಜಂಟಿ ಕಾರ್ಯದರ್ಶಿ ಕೊಕ್ಕಂಡ ರೋಶನ್, ನಿರ್ದೇಶಕರುಗಳಾದ ನೆಲ್ಲಮಕ್ಕಡ ಪವನ್, ನಾಚಪ್ಪ ಇದ್ದರು.