ಗೋಣಿಕೊಪ್ಪಲು, ಏ.15: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೀಣಿಹಡ್ಲುವಿಗೆ ಭೇಟಿ ನೀಡಿದ ಮಾಜಿ ಸಚಿವ ಹೆಚ್.ಎಸ್. ಮಹದೇವಪ್ಪ ಅವರು ಬೊಂಬುಕಾಡು, ಜಂಗಲಾಡಿ, ಚೀಣಿಹಡ್ಲು ಹಾಗೂ ಆಯಿರ ಸುಳಿಯ ನೂರಾರು ಹಾಡಿ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ಇತ್ತೀಚೆಗೆ ಹಾಡಿಯ ನಿವಾಸಿಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವದೇ ಪಕ್ಷದ ಅಭ್ಯರ್ಥಿಗೆ ಮತ ನೀಡದೆ ನೋಟಾಕ್ಕೆ ಮತ ಚಲಾಯಿಸುವ ತೀರ್ಮಾನಕ್ಕೆ ಬಂದಿದ್ದರು. ಈ ಬಗ್ಗೆ ಶಕ್ತಿ ಸಮಗ್ರ ವರದಿ ಪ್ರಕಟಿಸಿತ್ತು. ಸುದ್ದಿ ಆಲಿಸಿದ ಮಾಜಿ ಸಚಿವರು ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಸಂದರ್ಭ ಹಾಡಿಯ ನಿವಾಸಿಗಳನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಬಗೆಹರಿಸುವ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು. ಸ್ಥಳದಿಂದ ದೂರವಾಣಿ ಮೂಲಕ ಹೆಚ್. ವಿಜಯಶಂಕರ್ ಅವರನ್ನು ಸಂಪರ್ಕಿಸಿ ಚುನಾವಣೆ ಮುಗಿದ ತರುವಾಯ ಹಾಡಿಗೆ ಭೇಟಿ ನೀಡಿ ಸಮಸ್ಯೆ ಆಲಿಸುವಂತೆ ನಿರ್ದೇಶನ ನೀಡಿದರು.
ಮಾಜಿ ಮಂತ್ರಿಗಳೊಂದಿಗೆ ಆಗಮಿಸಿದ್ದ ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ ಹಾಡಿ ನಿವಾಸಿಗಳನ್ನು ಮನವೊಲಿಸಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ನಿರೀಕ್ಷಿತ ಮಟ್ಟದಲ್ಲಿ ಸವಲತ್ತುಗಳು ಈ ಭಾಗಕ್ಕೆ ತಲಪಲಿಲ್ಲ ಎಂದು ಜಿ.ಪಂ.ಸದಸ್ಯೆ ಪಿ.ಆರ್.ಪಂಕಜ ತಮ್ಮ ನೋವನ್ನು ತೋಡಿಕೊಂಡರು.
ನಮ್ಮ ಹಾಡಿಗಳಿಗೆ ರಸ್ತೆ, ಕುಡಿಯುವ ನೀರು, ಮನೆ ನಿರ್ಮಾಣ, ಶೌಚಾಲಯ, ವಿದ್ಯುತ್ಚ್ಛಕ್ತಿ ಬಗ್ಗೆ ಕ್ರಮಕೈಗೊಳ್ಳುವಂತೆ ಹಾಡಿಯ ಮುಖಂಡ ಪಿ.ಸಿ. ರಾಮು ಒತ್ತಾಯಿಸಿದರು. ಬೊಂಬುಕಾಡು ಹಾಡಿ ಪ್ರಮುಖರಾದ ಪಿ.ಎಂ.ರವಿ, ರಮೇಶ್, ಭವ್ಯ, ಮಾರ, ಜಂಗಲಾಡಿ ಹಾಡಿಯ ಪ್ರಮುಖರಾದ ಪಿ.ಸಿ.ಬೋಜಪ್ಪ, ಮಾರ, ಕಾರಿ, ನಿತೀನ್, ಚೀಣಿಹಡ್ಲು ಹಾಡಿಯ ಪ್ರಮುಖರಾದ ಚುಬ್ರು,ಪಿ.ಎಂ.ಶಿವು. ಪಾರ್ವತಿ, ಸರೋಜ, ಆಯಿರಸುಳಿ ಹಾಡಿಯ ಪ್ರಮುಖರಾದ ಪಿ.ಟಿ.ರಾಜು, ರಾಮು.ಪಿ.ಎಂ. ಕಾವೇರಿ, ರಾಮು, ತಾ.ಪಂ.ಸದಸ್ಯೆ ಆಶಾಜೇಮ್ಸ್ ಗ್ರಾ.ಪಂ. ಅಧ್ಯಕ್ಷ ಶಿವುಕುಮಾರ್,ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ, ಸತೀಶ್ ಕುಮಾರ್, ವಿನಯ್ ಕುಮಾರ್, ಜೆ.ಕೆ.ಸೋಮಣ್ಣ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.