ಕುಶಾಲನಗರ, ಏ. 15: 2014 ರಲ್ಲಿ ಬಿಜೆಪಿ ಘೋಷಿಸಿದ ಯಾವದೇ ಪ್ರಣಾಳಿಕೆಗಳನ್ನು ಈಡೇರಿಸುವಲ್ಲಿ ಮೋದಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆರೋಪಿಸಿದರು.ಅವರು ಕುಶಾಲನಗರದಲ್ಲಿ ಕೊಡಗು-ಮೈಸೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಪರ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ದೇಶದಲ್ಲಿ ರೈತ ಸಮಸ್ಯೆ ಸೇರಿದಂತೆ ನಿರುದ್ಯೋಗ, ಬೆಲೆ ಏರಿಕೆ, ಮಹಿಳೆಯರ ಸಮಸ್ಯೆಗಳ ಬಗ್ಗೆ ಚಕಾರ ಎತ್ತದ ಮೋದಿಯನ್ನು ಮತ್ತೊಮ್ಮೆ ಆಯ್ಕೆ ಮಾಡುವ ಮುನ್ನಾ ತೀರ್ಮಾನಕ್ಕೆ ಬರುವ ಚಿಂತನೆ ಅಗತ್ಯತೆಯಿದೆ ಎಂದರು.ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಆಡಳಿತದ ಚುಕ್ಕಾಣಿ ಹಿಡಿದಿದ್ದು ಬಿಜೆಪಿಯನ್ನು ಸೋಲಿಸುವ ಗುರಿ ಸಾಧಿಸಬೇಕಾಗಿದೆ. ತಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭ ತನ್ನ ಸರಕಾರ ನೀಡಿದ 165 ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸಿದ್ದೇನೆ ಎಂದ ಸಿದ್ದ ರಾಮಯ್ಯ, ಬಿಜೆಪಿಯ ಚುನಾವಣಾ ಪ್ರಣಾಳಿಕೆ ಹಳೆ ಮದ್ಯವನ್ನು ಹೊಸ ಬಾಟಲಿಗೆ ತುಂಬಿದಂತಾಗಿದೆ ಎಂದು ಲೇವಡಿ ಮಾಡಿದರು. ಕೇಂದ್ರದ ಬಿಜೆಪಿ ಸರಕಾರ ಸಂವಿಧಾನ ಬದಲಾವಣೆಗೆ ಮುಂದಾಗಿದ್ದು ಕೇವಲ ಕೋಮುಭಾವನೆ, ದೇಶ ಒಡೆಯುವ ಕೆಲಸ ಸೇರಿದಂತೆ ಸರ್ವಾಧಿಕಾರಿ ಧೋರಣೆಯೊಂದಿಗೆ ಒಗ್ಗಟ್ಟಿಗೆ ಧಕ್ಕೆ ತರುತ್ತಿದ್ದು ಕಾಂಗ್ರೆಸ್‍ಸನ್ನು ಬೆಂಬಲಿಸುವ ಮೂಲಕ ಉತ್ತಮ ಸರಕಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಕೋರಿದರು.(ಮೊದಲ ಪುಟದಿಂದ) 5 ವರ್ಷಗಳ ಕಾಲ ಪ್ರಧಾನಮಂತ್ರಿ ಮೋದಿ ಮತ್ತು ಕೊಡಗು-ಮೈಸೂರು ಲೋಕಸಭಾ ಸದಸ್ಯ ಪ್ರತಾಪ್‍ಸಿಂಹ ಅತಿ ಹೆಚ್ಚಿನ ಸುಳ್ಳು ಹೇಳಿಕೊಂಡು ದಿನ ಕಳೆದಿದ್ದಾರೆ.
ತಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಪ್ರತಿ ವರ್ಷ ಕೊಡಗು ಜಿಲ್ಲೆಗೆ ತಲಾ ರೂ. 50 ಕೋಟಿ ಅನುದಾನ ನೀಡಿದ್ದೇನೆ. ಕೊಡಗು ಜಿಲ್ಲೆಯ ದಿಡ್ಡಳ್ಳಿ ನಿರಾಶ್ರಿತರಿಗೆ ಪುರ್ನವಸತಿ ಕಲ್ಪಿಸುವಲ್ಲಿ ಯಶಸ್ಸು ಕಂಡಿದ್ದೇನೆ. ಸರಕಾರದ ಮೂಲಕ ರೂ. 8500 ಕೋಟಿಗಳ ಸಾಲ ಮನ್ನಾ ತನ್ನ ಸರಕಾರ ಮಾಡಿದ್ದು ನಂತರ ಮೈತ್ರಿ ಸರಕಾರ 45 ಸಾವಿರ ಕೋಟಿ ಮನ್ನಾ ಮಾಡುವಲ್ಲಿ ಯೋಜನೆ ರೂಪಿಸಿದೆ ಎಂದರು.
ಕುಶಾಲನಗರ ಪಟ್ಟಣದ ಅಭಿವೃದ್ಧಿಗೆ ರೂ. 5 ಕೋಟಿ ಸೇರಿದಂತೆ ಬಡವರ ಉಪಯೋಗಕ್ಕಾಗಿ ಇಂದಿರಾ ಕ್ಯಾಂಟಿನ್ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಮಾಹಿತಿ ಒದಗಿಸಿದರು.
ಈ ಸಂದರ್ಭ ಮಾತನಾಡಿದ ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡುರಾವ್, ಈ ಚುನಾವಣೆ ದೇಶದ ಭವಿಷ್ಯ ರೂಪಿಸುವ ಚುನಾವಣೆಯಾಗಿದೆ. ಯುವಕರಿಗೆ ಉದ್ಯೋಗ ಸೃಷ್ಠಿಸುವಲ್ಲಿ ಮೋದಿ ಸರಕಾರ ಸಂಪೂರ್ಣ ವಿಫಲವಾಗಿದೆ. ಆರ್ಥಿಕ ನೀತಿ, ಅರ್ಥ ವ್ಯವಸ್ಥೆ ಅಧೋಗತಿಗೆ ಕುಸಿದಿದೆ. ಕಪ್ಪು ಹಣ ಹಿಂತಿರುಗಿಸುವ ಭರವಸೆ ಬದಲು ಆಪರೇಷನ್ ಕಮಲ, ಸರಕಾರ ಅಭದ್ರತೆ ಮಾಡುವ ಕೆಲಸ ಕಾರ್ಯದಲ್ಲೇ ಬಿಜೆಪಿ ತೊಡಗಿದೆ ಎಂದು ಆರೋಪಿಸಿದರು.
ದೇಶದಲ್ಲಿ ಹಿಟ್ಲರ್ ರಾಜಕಾರಣದೊಂದಿಗೆ ಸಾಮಾನ್ಯ ಜನತೆ ದಂಗೆ ಏಳುವಂತಾಗಿದೆ. ಚುನಾವಣೆ ಹೆಸರಿನಲ್ಲಿ ಬಿಜೆಪಿ ಜನರ ಮನಸ್ಸನ್ನು ವಿಭಜನೆ ಮಾಡುವ ಮೂಲಕ ಗೆಲುವು ಸಾಧಿಸುವ ಗುರಿ ಹೊಂದಿದೆ ಎಂದು ದೂರಿದರು.
ದೇಶ ಒಡೆಯುವ ಕೆಲಸದಲ್ಲಿ ತೊಡಗಿರುವ ಮೋದಿಯನ್ನು ಪಾಕ್ ಪ್ರಧಾನಮಂತ್ರಿ ಕೂಡ ಹೊಗಳುತ್ತಿರುವದು ಸಂಶಯಕ್ಕೆ ಎಡೆಮಾಡಿದ್ದು, ದೇಶ ಭಕ್ತಿಯನ್ನು ಚುನಾವಣೆಯಲ್ಲಿ ಬಳಸುವದು ಸರಿಯಲ್ಲ ಎಂದರು.
ಕಾಂಗ್ರೆಸ್ ಮುಖಂಡರಾದ ಎಂ.ಸಿ.ನಾಣಯ್ಯ ಮಾತನಾಡಿ, ಕೊಡಗು ಜಿಲ್ಲೆಗೆ ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. 28 ಕ್ಷೇತ್ರಗಳಲ್ಲಿ 20ಕ್ಕೂ ಅಧಿಕ ಮೈತ್ತಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದರಲ್ಲದೆ ಪ್ರತಿಷ್ಠೆಗಳನ್ನು ಬಿಟ್ಟು ರಾಜಕೀಯ ನಾಯಕರು ರಾಷ್ಟ್ರೀಯ ಸಮಗ್ರತೆ ಬಗ್ಗೆ ಜಾಗೃತರಾಗಬೇಕಿದೆ ಎಂದರು.
ಮಾಜಿ ಸಚಿವ ಜೆಡಿಎಸ್ ಪ್ರಮುಖ ಬಿ.ಎ. ಜೀವಿಜಯ ಮಾತನಾಡಿ, ಮೌಲ್ಯಾಧಾರಿತ ರಾಜಕಾರಣ ಸತ್ತು ಹೋಗಿ ಹಲವು ವರ್ಷಗಳಾಗಿವೆ. ರಾಷ್ಟ್ರದ ಭವಿಷ್ಯ ನಿರ್ಮಾಣ ಮಾಡುವ ಮಹತ್ತರ ಚುನಾವಣೆ ಇದಾಗಿದ್ದು ಜನತೆ ಎಚ್ಚೆತ್ತುಕೊಳ್ಳಬೇಕಿದೆ ಎಂದರಲ್ಲದೆ ಇದು ನನ್ನ ಕೊನೆಯ ಸಾರ್ವಜನಿಕ ಭಾಷಣ ಎಂದರು.
ಸಭೆಗೂ ಮುನ್ನ ಮಾತನಾಡಿದ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ, ಕೊಡಗು ಮೈಸೂರು ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಪ್ರತಾಪ್‍ಸಿಂಹ ಕೇವಲ ಹನುವ ಜಯಂತಿಗೆ ಸೀಮಿತವಾದ ಎಂ.ಪಿ.ಯಾಗಿದ್ದಾರೆಂದು ಕುಟುಕಿದರು.
ಈ ಸಂದರ್ಭ ಎರಡೂ ಪಕ್ಷಗಳ ಪ್ರಮುಖರಾದ ವೀಣಾ ಅಚ್ಚಯ್ಯ, ಸುಮಾವಸಂತ್, ಅರುಣ್ ಮಾಚಯ್ಯ, ಟಿ.ಪಿ.ರಮೇಶ್, ಬ್ರಿಜೇಶ್ ಕಾಳಪ್ಪ, ಕೆ.ಎಂ.ಇಬ್ರಾಹಿಂ, ಮಿಟ್ಟು ಚಂಗಪ್ಪ, ಕೆ.ಎಂ.ಗಣೇಶ್, ಕೆ.ಕೆ.ಮಂಜುನಾಥ್ ಕುಮಾರ್, ಕೆ.ಕೆ.ಮಂಜುಳಾ, ಸಂಕೇತ್‍ಪೂವಯ್ಯ, ಕೆ.ಪಿ.ಚಂದ್ರಕಲಾ, ವಿ.ಪಿ.ಶಶಿಧರ್, ಧರ್ಮಜ ಉತ್ತಪ್ಪ ಸೇರಿದಂತೆ ವಿವಿಧ ಘಟಕಗಳ ಪ್ರಮುಖರು, ಕಾರ್ಯಕರ್ತರು ಇದ್ದರು.
ಮಾಜಿ ಕುಡಾ ಅಧ್ಯಕ್ಷ ಮಂಜುನಾಥ್ ಗುಂಡೂರಾವ್ ಸ್ವಾಗತಿಸಿದರು, ಪ.ಪಂ. ಮಾಜಿ ಸದಸ್ಯ ನಂಜುಂಡಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.