ಮಡಿಕೇರಿ, ಏ. 15: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ವ್ಯಾಪಕ ಜನ ಬೆಂಬಲದೊಂದಿಗೆ, ತಾ. 18 ರಂದು ನಡೆಯಲಿರುವ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆಲವು ಸಾಧಿಸುವೆ ಎಂದು ಹಾಲೀ ಸಂಸದ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಇಂದು ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತನ್ನ ಗೆಲವಿನ ಅಂತರವನ್ನು ಮತದಾರರೇ ನಿರ್ಧರಿಸಲಿದ್ದಾರೆ ಎಂದು ಮಾರ್ನುಡಿದರು.ಕೊಡಗಿನ ಜನತೆಯ ಭಾವನೆಗಳನ್ನು ಘಾಸಿಗೊಳಿಸಿ ಟಿಪ್ಪು ಜಯಂತಿ ಹೇರಿರುವ ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ನಾಡಿನಲ್ಲಿ ಮತ ಕೇಳಲು ನೈತಿಕ ಹಕ್ಕಿಲ್ಲವೆಂದು ಟೀಕಿಸಿದರು. ಅಲ್ಲದೆ ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ್ದಾಗ ಕಾಗಿನೆಲೆ ಶ್ರೀಗಳು ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಯನ್ನು ವಿಧಾನಸಭಾ ಚುನಾವಣೆಯಲ್ಲಿ ಕಳೆದು ಕೊಂಡಿದ್ದರಿಂದ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದ ದುರಂತ ಸಂಭವಿಸಿದ್ದಾಗಿ ಹೇಳಿಕೆ ನೀಡಿದ್ದನ್ನು ಈ ವ್ಯಕ್ತಿ ಅಲ್ಲಗೆಳೆಯಲಿಲ್ಲವೆಂದು ಟೀಕಿಸಿದರು.ಹೀಗೆ ಕೊಡಗಿನ ಜನತೆಯ ಭಾವನೆಗಳಿಗೆ ವಿರುದ್ಧವಾಗಿ ಟಿಪ್ಪು ಜಯಂತಿ ಹೇರಿದ (ಮೊದಲ ಪುಟದಿಂದ) ಸಿದ್ದರಾಮಯ್ಯ, ತಮ್ಮ ಪರ ಸ್ವಾಮೀಜಿಯೊಬ್ಬರು ಹೇಳಿಕೆ ನೀಡಿ ಕಷ್ಟ ಕಾಲದಲ್ಲಿ ಕೊಡಗಿನ ಜನತೆಯ ಮನಸ್ಸಿಗೆ ಇನ್ನಷ್ಟು ನೋವುಂಟು ಮಾಡಿದರೂ, ಸಿದ್ದರಾಮಯ್ಯ ಮೌನ ವಹಿಸಿದ್ದಾಗಿ ಖಂಡಿಸಿದರು.
ಅಲ್ಲದೆ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಡುವೆಯೂ ಕೊಡಗು-ಮೈಸೂರು ಕ್ಷೇತ್ರ ಸೇರಿದಂತೆ ಬಿಜೆಪಿ ಸುಮಾರು 22 ಕ್ಷೇತ್ರಗಳಲ್ಲಿ ಗೆಲವು ದಾಖಲಿಸುವ ವಿಶ್ವಾಸ ವ್ಯಕ್ತಪಡಿಸಿದ ಪ್ರತಾಪ್ ಸಿಂಹ, ದಕ್ಷಿಣ ಭಾರತಕ್ಕೆ ಕಾವೇರಿ ನೀರುಣಿಸಿದ್ದು, ಈ ನಾಡಿನ ನೆಲ, ಜಲ, ಜನತೆಯ ಭಾವನೆಗಳಿಗೆ ಘಾಸಿಗೊಳಿಸುವವರಿಗೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಭವಿಷ್ಯ ನುಡಿದರು.
ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಸೇರಿದಂತೆ ಪಕ್ಷದ ಇತರ ಮುಖಂಡರು, ಕಾರ್ಯಕರ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಅಲ್ಲದೆ ನಗರಸಭೆ ಮಾಜಿ ಸದಸ್ಯೆ ಸಂಗೀತ ಪ್ರಸನ್ನ ಹಾಗೂ ಇತರರನ್ನು ಬಿಜೆಪಿಗೆ ಬರಮಾಡಿಕೊಳ್ಳಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಬಿ. ರವಿಕುಶಾಲಪ್ಪ, ನಗರ ಅಧ್ಯಕ್ಷ ಮಹೇಶ್ ಜೈನಿ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.