ಗೋಣಿಕೊಪ್ಪ ವರದಿ, ಎ. 15 : ಕೊಡವರ ಹೊಸ ವರ್ಷ ಎಡಮ್ಯಾರ್ ಒಂದ್ ಅನ್ನು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ಪೊಂಬೊಳಕ್ ಹೆಸರಿನಲ್ಲಿ ನಡೆಸುವ ಮೂಲಕ ಆಚರಿಸಲಾಯಿತು.

ಭಾನುವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಿಂದ ಉಮಾಮಹೇಶ್ವರಿ ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು. ನೂರಾರು ಕೊಡವರು ಸಾಂಪ್ರದಾಯಿಕ ಉಡುಪು ಧರಿಸಿ ಪಂಜಿನ ಬೆಳಕಿನೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಪಟ್ಟಣದ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಆಚರಣೆ ಯ ಬಗ್ಗೆ ಗಮನ ಸೆಳೆಯಲಾಯಿತು. ಆಚರಣೆಯ ಉದ್ದೇಶದ ಬಗ್ಗೆ ಬೆಳಕು ಚೆಲ್ಲಲಾಯಿತು.

ಈ ಸಂದರ್ಭ ಮಾತನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ನಾಚಪ್ಪ, ಭೂತಾಯಿಗೂ ಕೊಡವರಿಗೂ ಇರುವ ಉನ್ನತ, ಪಾರಂಪರಿಕ ಮತ್ತು ಭಾವನಾತ್ಮಕ ಸಂಬಂಧಗಳನ್ನು ಗಟ್ಟಿಗೊಳಿಸುವದರ ಮೂಲಕ ಮುಂದಿನ ಪೀಳಿಗೆಗೆ ಕೊಡವರ ಶ್ರೇಷ್ಠ ಆದರ್ಶ ಸಂಸ್ಕøತಿ, ಮತ್ತು ನಾಗರಿಕತೆಯ ಹೆಗ್ಗುರುತುಗಳನ್ನು ಬಳುವಳಿಯಾಗಿ ವರ್ಗಾಯಿಸುವ ಸಂದೇಶವಾಗಿ ಸಾರ್ವಜನಿಕವಾಗಿ ಆಚರಿಸಲಾಗುತ್ತಿದೆ ಎಂದರು.

ಕೊಡವ ಬುಡಕಟ್ಟು ಜನಾಂಗಕ್ಕೆ ಸಂವಿಧಾನ ಭದ್ರತೆ, 234 ವರ್ಷಗಳ ಹಿಂದೆ ಕೊಡವರ ನರಮೇಧ ನಡೆದ ದುರಂತ ಸ್ಥಳವಾಗಿರುವ ದೇವಟ್ ಪರಂಬ್‍ನಲ್ಲಿ ಜಲಿಯನ್ ವಾಲಾಬಾಗ್ ಮಾದರಿ ರಾಷ್ಟ್ರೀಯ ಸ್ಮಾರಕ ನಿರ್ಮಾಣ ಆಗಬೇಕು. ದುರಂತದ ಕುರಿತು ವಿಶ್ವಸಂಸ್ಥೆಯ ಹೋಲೋಕಾಸ್ಟ್ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು ಹಾಗೂ ಜಾಗತಿಕ ಹೋಲೋಕಾಸ್ಟ್ ಮ್ಯೂಸಿಯಂ ರಚಿಸಬೇಕು ಮತ್ತು ಈ ಹತ್ಯಾಕಾಂಡದಲ್ಲಿ ಅಂದು ಟಿಪ್ಪುವಿ ನೊಂದಿಗೆ ನೇರ ಭಾಗಿಯಾದ ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯ ಮಿತ್ರ ಪಡೆಯು ಕೊಡವರ ಮೇಲೆ ನಡೆಸಿದ ಅಮಾನುಷ ಕ್ರೌರ್ಯಕ್ಕಾಗಿ ಫ್ರಾನ್ಸ್ ಕೊಡವರ ಬಹಿರಂಗ ಕ್ಷಮೆ ಯಾಚಿಸ ಬೇಕು ಎಂದು ಒತ್ತಾಯಿಸಿ ದರು. ಈ ಸಂದರ್ಭ ನೂರಾರು ಕೊಡವರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.

-ಸುದ್ದಿಪುತ್ರ