ಮಡಿಕೇರಿ, ಏ. 16: ಅಕಾಲಿಕ ಮಳೆಯಿಂದಾಗಿ ಈ ಹಿಂದೆ ಸಂಭವಿಸಿದ ನಷ್ಟಕ್ಕೆ ರೈತರು-ಬೆಳೆಗಾರರಿಗೆ ಪರಿಹಾರವಾಗಿ ಅವರ ಖಾತೆಗೆ ಬಂದಿದ್ದ ಹಣವನ್ನು ವಾಪಾಸ್ಸು ಪಡೆದಿರುವ ಪ್ರಕರಣದ ಬಗ್ಗೆ ಪ್ರಸಕ್ತ ನಡೆಯುತ್ತಿರುವ ಚುನಾವಣೆಯ ಬಳಿಕ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಲು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ನಿರ್ಧರಿಸಿದೆ.
ನಿನ್ನೆ ಸಮಿತಿಯ ಜಿಲ್ಲಾಧ್ಯಕ್ಷ ಎ.ಎಸ್. ಕಟ್ಟಿಮಂದಯ್ಯ ಅವರ ಅಧ್ಯಕ್ಷತೆಯಲ್ಲಿ ಹೊಟೇಲ್ ಸಿಲ್ವರ್ ಸ್ಕೈ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ವಿಚಾರವೂ ಸೇರಿದಂತೆ ಹಲವು ಅಂಶಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ಕಾಫಿ ಮಾರಾಟದ ಸಂದರ್ಭದಲ್ಲಿ ಔಟ್‍ಟರ್ನ್ ನೆಪದ ಮೂಲಕ ಬೆಳೆಗಾರರು ವಂಚಿಸಲ್ಪಡುತ್ತಿದ್ದಾರೆ ಎಂದು ಸಮಿತಿಯ ಮಚ್ಚಾಮಾಡ ಮಾಚಯ್ಯ ಅವರು ಗಮನ ಸೆಳೆದರು. ಈ ಬಗ್ಗೆ ಚರ್ಚೆ ನಡೆದು ಈ ಬಗ್ಗೆ ಕಾಫಿ ಕುಯ್ಯುವ, ಒಣಗಿಸುವ ಸಮಯದಲ್ಲಿ ತಾಂತ್ರಿಕ ಅಂಶಗಳ ಬಗ್ಗೆ ಕಾಫಿ ಮಂಡಳಿಯ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ವಿವರ ನೀಡುವದರ ಮೂಲಕ ಬೆಳೆಗಾರರಿಗೆ ಅನ್ಯಾಯವಾಗುವದನ್ನು ತಡೆಯಲು ಪ್ರಯತ್ನಿಸಲು ಹಾಗೂ ಜಿಲ್ಲಾ ಸಹಕಾರ ಸಂಸ್ಥೆಯ ಮೂಲಕ ಸೂಕ್ತ ವ್ಯಾಪಾರ ನಡೆಸಲು ಆಗ್ರಹಿಸಲು ನಿರ್ಧರಿಸಲಾಯಿತು.
ಭತ್ತ ಖರೀದಿ ಕೇಂದ್ರದಲ್ಲಿ ತೂಕದಲ್ಲಿ ಕಡಿತ ಮಾಡಲಾಗುತ್ತಿದೆ ಹಾಗೂ ಸಾಗಾಟದ ಬಾಪ್ತನ್ನು ರೈತರು ಭರಿಸಬೇಕಾದ ಅನಿವಾರ್ಯತೆಯಿಂದ ನಷ್ಟವುಂಟಾಗುತ್ತಿದೆ. ಈ ಸಮಸ್ಯೆಯನ್ನು ಸರಿಪಡಿಸುವಂತೆ ಹಾಗೂ ಸರಕಾರ ಸೂಕ್ತ ರೀತಿಯಲ್ಲಿ ಖರೀದಿ ಮಾಡುವಂತೆ ಒತ್ತಾಯಿಸಲು ಸಭೆಯಲ್ಲಿ ಆಗ್ರಹಿಸಲಾಯಿತು.
ಕರಿಮೆಣಸು ಧಾರಣೆ ಕುಸಿತ ಬಗ್ಗೆ ನೂತನ ಜನಪ್ರತಿನಿಧಿಗಳೊಂದಿಗೆ ವ್ಯವಹರಿಸಲೂ ಈ ಸಂದರ್ಭ ನಿರ್ಧರಿಸಲಾಯಿತಲ್ಲದೆ, ಮೇ 13 ರಂದು ಗೋಣಿಕೊಪ್ಪಲು ಆರ್.ಎಂ.ಸಿ. ಸಭಾಂಗಣದಲ್ಲಿ ಸಮಿತಿಯ ಮಹಾಸಭೆ ನಡೆಸಲು ನಿರ್ಧರಿಸಲಾಯಿತು.
ಸಮಿತಿ ತಾಲೂಕು ಅಧ್ಯಕ್ಷರು ಅಧಿಕಾರ ವ್ಯಾಪ್ತಿ ಮೀರಿ ಜಿಲ್ಲಾಧ್ಯಕ್ಷರಿಗೆ ಬರೆದ ಪತ್ರದ ಕುರಿತು ಖಂಡನೆ ವ್ಯಕ್ತಪಡಿಸಲಾಯಿತು. ರಾಜ್ಯ ಸರಕಾರದ ಬೆಳೆ ಸಾಲ ಮನ್ನಾ ಎಲ್ಲರಿಗೂ ತಲಪಿಲ್ಲ. ಮುಂದಿನ ದಿನದಲ್ಲಿ ಈ ಕುರಿತು ಹೋರಾಟ ಹಮ್ಮಿಕೊಳ್ಳಲು ಸಭೆ ತೀರ್ಮಾನಿಸಿತು.
ಕಟ್ಟಿ ಮಂದಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿ ಉಪಾಧ್ಯಕ್ಷ ನಾಟೋಳಂಡ ಚರ್ಮಣ, ಪ್ರ. ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ, ಖಜಾಂಚಿ ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ, ಬೊಟ್ಟಂಗಡ ಮಾಚಯ್ಯ, ಕಾಳಿಮಾಡ ಪೂವಯ್ಯ, ಮತ್ರಂಡ ಅಪ್ಪಚ್ಚು, ಅಜ್ಜಮಾಡ ನಂಜಪ್ಪ, ಎ. ಕೃಷ್ಣಮಯ್ಯ, ಮಚ್ಚಮಾಡ ಮಾಚಯ್ಯ, ಪೋಡಮಾಡ ಉತ್ತಪ್ಪ, ಕೊಟ್ಟಂಗಡ ಮಂಜುನಾಥ್, ಕೂಪದಿರ ಉತ್ತಪ್ಪ ಮತ್ತಿತರರು ಪಾಲ್ಗೊಂಡಿದ್ದರು.