ವೀರಾಜಪೇಟೆ,ಏ. 16: ಭಾರತೀಯ ಜನತಾ ಪಾರ್ಟಿ ವತಿಯಿಂದ ಅಮ್ಮತ್ತಿಯ ಮುಖ್ಯ ಬೀದಿಯಲ್ಲಿ ರೋಡ್‍ಶೋ ನಡೆಸಿದ ಬಿಜೆಪಿ ಕಾರ್ಯಕರ್ತರು ನರೇಂದ್ರ ಮೋದಿಯವರ ಯೋಜನೆಗಳ ಬಗ್ಗೆ ಮತದಾರರಿಗೆ ಅರಿವು ಮೂಡಿಸಿ ಮತಯಾಚನೆ ಮಾಡಿದರು. ಸಮೀಪದ ಅಮ್ಮತ್ತಿ ಕಾರ್ಮಾಡು ರಸ್ತೆಯಿಂದ ಮೆರವಣಿಗೆ ಹೊರಟು ಸಿದ್ದಾಪುರ ರಸ್ತೆ ಹಾಗೂ ವೀರಾಜಪೇಟೆ ರಸ್ತೆಯಲ್ಲಿ ರೋಡ್‍ಶೋ ನಡೆಸಿದ ಬಳಿಕ ಅಮ್ಮತ್ತಿಯ ಬಸ್ಸು ನಿಲ್ದಾಣ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದರು.

ಭಾರತ ದೇಶಕ್ಕೆ ಎರಡು ಪ್ರಧಾನಿಗಳು ಬೇಕೆನ್ನುವ ಬೇಡಿಕೆಯನ್ನು ಮುಂದಿಟ್ಟು ದೇಶದಲ್ಲಿ ಭಯೋತ್ಪಾದನೆಗೆ ಭ್ರಷ್ಟಾಚಾರಗಳಿಗೆ ಕಾಂಗ್ರೆಸ್ ಆಡಳಿತ ಅವಕಾಶ ನೀಡಿದ್ದರಿಂದ ನರೇಂದ್ರ ಮೋದಿ ಅವರು 5ವರ್ಷಗಳ ಹಿಂದೆಯೇ ಪ್ರಧಾನಿಯಾಗಲು ಅವಕಾಶವಾಯಿತು. ಪ್ರಧಾನಿ ಮೋದಿ ಅವರ ಜನಪರಯೋಜನೆಗಳು ಫಲಾನುಭವಿಗಳ ಮನೆಗೆ ತಲಪುವ ಕೆಲಸವಾಗಿದೆ ಎಂದು ಹೇಳಿದ ಶಾಸಕ ಕೆ.ಜಿ.ಬೋಪಯ್ಯ ಅವರು ಈ ರಾಷ್ಟ್ರದ ಅಭಿವೃದ್ಧಿಯೊಂದಿಗೆ ರಾಷ್ಟ್ರ ಸುಭದ್ರವಾಗಲು ನರೇಂದ್ರ ಮೋದಿ ಅವರು ಮತ್ತೆ ಅಧಿಕಾರದ ಗದ್ದುಗೆ ಹಿಡಿಯಬೇಕು. ಕಳೆದ ಅವಧಿಯಲ್ಲಿ 258 ಯೋಜನೆಗಳನ್ನು ಜಾರಿಗೆತಂದು ಜನಪ್ರಿಯ ಪ್ರಧಾನಿ ಎನಿಸಿಕೊಂಡ ನರೇಂದ್ರ ಮೋದಿ ಅವರ ಅನೇಕ ಸಾಧನೆಗಳು ಈಗಲು ಚಾಲ್ತಿಯಲ್ಲಿವೆ. ಕಾಂಗ್ರೆಸ್ ಸರಕಾರ ಇಷ್ಟು ವರ್ಷ ಮಾಡದಂತಹ ಅಭಿವೃದ್ಧಿ ಕಾರ್ಯವನ್ನು ಮಾಡಿರುವ ಪ್ರಧಾನಿ ಮೋದಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಬಡತನ ನಿರ್ಮೂಲನೆ ಹಾಗೂ ದೇಶದ ಏಳಿಗೆ ಸಾಧ್ಯವಾಗಲಿದೆ ಎಂದರು.

ಬಿಜೆಪಿಯ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿ ಕುಶಾಲಪ್ಪ ಮಾತನಾಡಿ ಭ್ರಷ್ಟಾಚಾರ ರಹಿತವಾದ ಬಿಜೆಪಿ ಸರಕಾರ ಕೇಂದ್ರದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಈ ಹಿಂದೆ ಕೇಂದ್ರದಲ್ಲಿ ಇಂದಿರಾ ಗಾಂಧಿಯವರ ಕುಟುಂಬವೇ ನಿರಂತರ ಆಡಳಿತ ನಡೆಸಿತ್ತು. ರಾಜ್ಯದಲ್ಲಿ ಈಗ ದೇವೇಗೌಡರ ಕುಟುಂಬವೇ ಮತ್ತೆ ರಾಜ್ಯದ ಆಡಳಿತ ನಡೆಸಲು ಹೊರಟಿದೆ ಎಂದು ದೂರಿದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುಜಾಕುಶಾಲಪ್ಪಚ ಮಾತನಾಡಿ ಕೇಂದ್ರ ಸರಕಾರದ ಯೋಜನೆಗಳು ಜನರ ಮನೆ ಬಾಗಿಲಿಗೆ ತಲಪುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 20 ಸಾವಿರಕ್ಕು ಹೆಚ್ಚು ಕುಟುಂಬಗಳಿಗೆ ಅಡುಗೆ ಅನಿಲ ನೀಡಿ ಹೊಗೆ ಮುಕ್ತ ಪ್ರದೇಶವನ್ನಾಗಿಸಿದ್ದಾರೆ. ಪ್ರಧಾನಿ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಬಿಜೆಪಿ ಮುಖಂಡರಾದ ತಾಲೂಕು ಪ್ರಧಾನ ಕಾರ್ಯದರ್ಶಿ ಸುವಿನ್ ಗಣಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಕೊಡವ ಸಮಾಜದ ಅಧ್ಯಕ್ಷ ಮುಕೊಂಡ ಬೋಸ್ ದೇವಯ್ಯ, ರೈತ ಸಂಘದ ಅಧ್ಯಕ್ಷ ಕೆ.ಯು.ಗಣಪತಿ, ತಾಲೂಕು ಅಧ್ಯಕ್ಷ ಅರುಣ್‍ಭೀಮಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಶಶಿ ಸುಬ್ರಮಣಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ರೋಡ್‍ಶೋ ಮತ್ತು ಚುನಾವಣಾ ಪ್ರಚಾರದಲ್ಲಿ ತಾಲೂಕು ಉಪಾಧ್ಯಕ್ಷ ಗಣೇಶ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ತಾಲೂಕು ಪಂಚಾಯಿತಿ ಸದಸ್ಯೆ ಶೋಭ, ಕಾರ್ಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋನಾ ಭೀüಮಯ್ಯ, ಉಪಾಧ್ಯಕ್ಷೆ ಸುನೀತಾ, ಸ್ಥಳೀಯರಾದ ಎಂ.ವಸಂತ್, ಜಯ ಹಾಗೂ ಪಕ್ಷದ ಕಾರ್ಯಕರ್ತರುಗಳು ಭಾಗವಹಿಸಿದ್ದರು.