ಮಡಿಕೇರಿ, ಏ. 16: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪ್ರಸಕ್ತ ವರ್ಷ ಕೊಡಗು ಜಿಲ್ಲೆ ತೃತೀಯ ಸ್ಥಾನ ಪಡೆದಿದೆ. ಕಲಾ ವಿಭಾಗದಲ್ಲಿ ಪಾಲಿಬೆಟ್ಟ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೆ.ಪಿ. ಸಂಜೀವ (565 ಅಂಕ-94.17%), ವಾಣಿಜ್ಯ ವಿಭಾಗದಲ್ಲಿ ಮಡಿಕೇರಿ ಸಂತ ಜೋಸೆಫರ ಬಾಲಿಕಾ ಸಂಯುಕ್ತ ಪಿಯು ಕಾಲೇಜಿನ ಸಫ್ವಾನ ಕೆ.ಎ. (588 ಅಂಕ-98%) ಹಾಗೂ ವಿಜ್ಞಾನ ವಿಭಾಗದಲ್ಲಿ ಗೋಣಿಕೊಪ್ಪ ವಿದ್ಯಾನಿಕೇತನ ಪಿಯು ಕಾಲೇಜಿನ ಎನ್. ಚರಿತಾ ಪೂಣಚ್ಚ (584 ಅಂಕ-97.33%) ಅಂಕಗಳೊಂದಿಗೆ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ.ಇನ್ನುಳಿದಂತೆ ಕಲಾ ವಿಭಾಗದಲ್ಲಿ ಶಿರಂಗಾಲ ಸರಕಾರಿ ಪದವಿ ಪೂರ್ವ ಕಾಲೇಜಿನ ಎಸ್.ಕೆ. ದಿವ್ಯಾ (542-90.33%) ದ್ವಿತೀಯ ಹಾಗೂ ಶಿರಂಗಾಲ ಸ.ಪ.ಪೂ. ಕಾಲೇಜಿನ ಚೇತನ್ ಎನ್.ಸಿ. (540-90%) ತೃತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ, ಗೋಣಿಕೊಪ್ಪ ವಿದ್ಯಾನಿಕೇತನ ಪಿ.ಯು. ಕಾಲೇಜಿನ ಬಿ.ಸಿ. ಜನಿತ್ (584-97.33%) ದ್ವಿತೀಯ ಹಾಗೂ ಸುಂಟಿಕೊಪ್ಪ ಸಂತ ಮೇರಿಸ್ ಸಂಯುಕ್ತ ಪಿಯು ಕಾಲೇಜಿನ ಎ.ಎಸ್. ಪೂವಮ್ಮ (583-97.17%) ತೃತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮಡಿಕೇರಿ ಸಂತ ಜೋಸೆಫರ ಬಾಲಿಕಾ ಸಂಯುಕ್ತ ಪಿಯು ಕಾಲೇಜಿನ ಬಿ.ಡಿ. ವಿದ್ಯಾಶ್ರೀ (582-97%) ದ್ವಿತೀಯ ಹಾಗೂ ವೀರಾಜಪೇಟೆ ಸಂತ ಅನ್ನಮ್ಮ ಪಿಯು ಕಾಲೇಜಿನ ಟಿ.ಎನ್. ವೈಷ್ಣವಿ (581-96.83%) ತೃತೀಯ ಸ್ಥಾನ ಗಳಿಸಿದ್ದಾರೆ.ಸಾಧಕರು ಏನಂತಾರೆ..?ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಲ್ಲಿ ಜಿಲ್ಲೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ಸಾಧಕ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಗುರಿಯ ಬಗ್ಗೆ ‘ಶಕ್ತಿ’ಯೊಂದಿಗೆ ಮನದಾಳ ಬಿಚ್ಚಿಟ್ಟಿದ್ದಾರೆ.

ಇಂಜಿನಿಯರಿಂಗ್ ಮಾಡುವೆ: ಚರಿತಾ

ಅಮ್ಮತ್ತಿ ಕಾವಾಡಿ ಗ್ರಾಮದ ಕಾಫಿ ಬೆಳೆಗಾರ ಎನ್.ಪಿ. ಪೂಣಚ್ಚ ಹಾಗೂ ಕೆ.ಎ. ಕಾವೇರಮ್ಮ ದಂಪತಿಯ ಪುತ್ರಿಯಾಗಿರುವ ಚರಿತಾ ಪೂಣಚ್ಚ ಇಂಜಿನಿಯರಿಂಗ್ ಮಾಡುವ ಬಯಕೆ ಹೊಂದಿದ್ದಾಳೆ.

ಪ್ರೊಫೆಸರ್ ಆಗುವೆ: ವಿದ್ಯಾಶ್ರೀ

ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಹಿಂಭಾಗದ ನಿವಾಸಿ ಅರಣ್ಯ ಇಲಾಖೆ ಉದ್ಯೋಗಿ ಬಾನಂಡ ದೇವಿ ಪ್ರಸಾದ್ ಹಾಗೂ ನಯನ ದಂಪತಿಯ ಪುತ್ರಿಯಾಗಿರುವ ವಿದ್ಯಾಶ್ರೀ ಬಿಎಸ್‍ಸಿ ಮುಗಿಸಿ ಪ್ರೊಫೆಸರ್ ಹುದ್ದೆಗೇರುವ ಗುರಿ ಹೊಂದಿದ್ದಾಳೆ.

(ಮೊದಲ ಪುಟದಿಂದ)

ಎಂಬಿಬಿಎಸ್ ಮಾಡುವೆ: ವೈಷ್ಣವಿ

ವೀರಾಜಪೇಟೆಯ ಕೃಷಿಕ ಟಿ.ಜಿ. ನಾಗರಾಜು ಹಾಗೂ ಮೀನಾ ದಂಪತಿಯ ಪುತ್ರಿಯಾಗಿರುವ ಟಿ.ಎನ್. ವೈಷ್ಣವಿ ಎಂಬಿಬಿಎಸ್ ಮಾಡುವ ಬಯಕೆ ಹೊಂದಿದ್ದಾಳೆ.

ಸಿ.ಎಸ್. ಮಾಡುವೆ: ಸಫ್ವಾನ

ವೀರಾಜಪೇಟೆ ಜಾಮಿಯಾಲ ಗ್ರಾಮದ ನಿವಾಸಿಯಾಗಿದ್ದು, ದುಬೈನಲ್ಲಿ ಉದ್ಯೋಗಿಯಾಗಿರುವ ಕೆ.ಎ. ಅಹ್ಮದ್ ಹಾಗೂ ಕೆ.ಎ. ಫಾತಿಮಾ ಅವರ ಪುತ್ರಿ ಸಫ್ವಾನ ಬಿ.ಕಾಂ. ಮೂಲಕ ಕಂಪೆನಿ ಸೆಕ್ರೆಟರಿಶಿಪ್ (ಸಿ.ಎಸ್.) ಮಾಡುವ ಆಸೆ ಇರುವದಾಗಿ ಅಭಿಪ್ರಾಯಿಸಿದ್ದಾಳೆ.

ಸಿ.ಎ. ಮಾಡುವೆ: ಜನಿತ್

ಬಿ.ಎಸ್.ಎನ್.ಎಲ್. ಉದ್ಯೋಗಿಯಾಗಿರುವ ವೀರಾಜಪೇಟೆ ನಿಸರ್ಗ ಲೇಔಟ್‍ನ ಬಿ.ಡಿ. ಚಂದ್ರಪ್ಪ ಮತ್ತು ಬಿ.ಸಿ. ಮಾಲಾ ದಂಪತಿಯ ಪುತ್ರನಾಗಿರುವ ಜನಿತ್ ಸಿ.ಎ. ಮಾಡುವ ಬಯಕೆ ಹೊಂದಿರುವದಾಗಿ ಹೇಳಿದ್ದಾನೆ.

ಸೇನೆಗೆ ಸೇರುವೆ: ಪೂವಮ್ಮ

ಕ್ರೀಡಾ ಕಾಲೇಜಿಗೆ ಸೇರಿ ಆ ಮೂಲಕ ಸೇನೆಗೆ ಸೇರುವ ಗುರಿ ಹೊಂದಿರು ವದಾಗಿ ಮಾದಾಪುರದ ಕೃಷಿಕ ಎ.ಎನ್. ಸುರೇಶ್ ಹಾಗೂ ಯಶೋಧ ದಂಪತಿಯ ಪುತ್ರಿ ಎ.ಎಸ್. ಪೂವಮ್ಮ ತಿಳಿಸಿದ್ದಾಳೆ.

ಅಧಿಕಾರಿಯಾಗುವೆ: ಸಂಜೀವ

ಉನ್ನತ ವಿದ್ಯಾಭ್ಯಾಸ ಪಡೆದು ಸರಕಾರಿ ಅಧಿಕಾರಿಯಾಗುವದಾಗಿ ಹುಂಡಿ ಗ್ರಾಮದ ದಿ. ಪಳನಿ ಹಾಗೂ ಕರ್ಪಾಯಿ ಅವರ ಪುತ್ರನಾಗಿರುವ ಕೆ.ಪಿ. ಸಂಜೀವ ತಿಳಿಸಿದ್ದಾನೆ. ಕರ್ಪಾಯಿ ತೋಟ ಕಾರ್ಮಿಕರಾಗಿದ್ದಾರೆ.

ಕೆ.ಎ.ಎಸ್. ಮಾಡುವೆ: ದಿವ್ಯಾ

ಡಿಗ್ರಿ ಪಡೆದು ಕೆ.ಎ.ಎಸ್. ಮಾಡುವ ಬಯಕೆ ಹೊಂದಿರುವದಾಗಿ ಸರಗೂರುವಿನ ಕೂಲಿ ಕಾರ್ಮಿಕರಾದ ಕೆಂಪರಸೇಗೌಡ ಹಾಗೂ ಪಾರ್ವತಿ ದಂಪತಿಯ ಪುತ್ರಿ ದಿವ್ಯ ಹೇಳಿದ್ದಾಳೆ.

ಕೆ.ಎ.ಎಸ್. ಮಾಡುವಾಸೆ: ಚೇತನ್

ಶಿರಂಗಾಲ ಸಮೀಪ ನಲ್ಲೂರು ಗ್ರಾಮದ ಕೃಷಿಕ ಚಂದ್ರಪ್ಪ ಹಾಗೂ ಭಾಗ್ಯ ದಂಪತಿಯ ಪುತ್ರನಾಗಿರುವ ಎನ್.ಸಿ. ಚೇತನ್ ಕೆ.ಎ.ಎಸ್. ಪರೀಕ್ಷೆ ಬರೆಯುವ ಗುರಿ ಹೊಂದಿರುವದಾಗಿ ತಿಳಿಸಿದ್ದಾನೆ.