ಸೋಮವಾರಪೇಟೆ,ಏ.16: ಸಮೀಪದ ಹಿರಿಕರ ಮತ್ತು ಚಿಕ್ಕಾರ ಗ್ರಾಮದ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಾಧಿಕಾರಿಗಳು ಕೊನೆಗೂ ಅರಣ್ಯಕ್ಕೆ ಅಟ್ಟಿದ್ದಾರೆ.
ಬಾಣಾವರ ಮೀಸಲು ಅರಣ್ಯದಿಂದ ಮೊನ್ನೆ ರಾತ್ರಿ ಆಹಾರ ಅರಸಿ ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಹಿರಿಕರ ಹಾಗು ಚಿಕ್ಕಾರ ಗ್ರಾಮದ ಕಾಫಿ ತೋಟಗಳಿಗೆ ಲಗ್ಗೆಯಿಟ್ಟ ಕಾಡಾನೆಗಳ ಹಿಂಡು ಮಾರನೆ ದಿನ ಬೆಳಿಗ್ಗೆ ಎಂದಿನಂತೆ ಕಾಡಿಗೆ ವಾಪಾಸ್ಸು ತೆರಳದೆ ಕಾಫಿ ತೋಟದಲ್ಲೇ ಉಳಿದಿದ್ದರಿಂದ ಜನತೆಯಲ್ಲಿ ಆತಂಕ ಮನೆ ಮಾಡಿತ್ತು.
ಕಾಫಿ ಹೂವಿನ ಪೂಜೆ ಮಾಡಲು ಬೆಳಗ್ಗಿನ ಜಾವ ಕಾಫಿ ತೋಟಕ್ಕೆ ತೆರಳಿದ ಹಿರಿಕರ ಗ್ರಾಮದ ಎಚ್.ಪಿ.ಸುರೇಶ್ ದಂಪತಿಗಳು ಪೂಜೆ ಸಲ್ಲಿಸುತ್ತಿದ್ದ ಸಂದರ್ಭ ಕಾಡಾನೆ ಮರಿಯೊಂದು ಇವರ ಸನಿಹಕ್ಕೆ ಬಂದು ಘೀಳಿಟ್ಟಿದೆ. ಇದರಿಂದ ಬೆದರಿದ ದಂಪತಿಗಳು ಅಲ್ಲಿಂದ ಓಡಿ ಬಚಾವಾಗಿದ್ದಾರೆ.
ಶನಿವಾರಸಂತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು, ಗ್ರಾಮಸ್ಥರ ಸಹಾಯದಿಂದ ಪಟಾಕಿ ಸಿಡಿಸಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದ್ದಾರೆ.
ಚುನಾವಣೆ ಹಿನ್ನೆಲೆ ಕೋವಿಗಳನ್ನು ಪೊಲೀಸ್ ಇಲಾಖೆಯಲ್ಲಿ ಠೇವಣಿ ಇಡಲಾಗಿದೆ. ಕೋವಿಗಳು ಇದ್ದಿದ್ದರೆ ಗಾಳಿಯಲ್ಲಿ ಗುಂಡು ಹಾರಿಸಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬಹುದಿತ್ತು. ಮುಂದಿನ ದಿನಗಳಲ್ಲಿ ಕಾಡಾನೆ ಪೀಡಿತ ಗ್ರಾಮಗಳ ನಿವಾಸಿಗಳಿಗೆ ಬಂದೂಕು ಠೇವಣಿಯಿಂದ ವಿನಾಯಿತಿ ನೀಡಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಗಣೇಶ್, ವೆಂಕಟೇಶ್, ದೇವಿಪ್ರಸಾದ್, ಕೀರ್ತಿ, ಭರತ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.