ಮಡಿಕೇರಿ, ಏ. 16: ಕೊಡಗು ಜಿಲ್ಲೆಗೆ ಸಂಸದ ಪ್ರತಾಪ್ ಸಿಂಹ ಅವರ ಕೊಡುಗೆ ಏನು ಇಲ್ಲ ಎನ್ನುವ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಕೊಡಗಿಗೆ ತಾವು ಕೊಟ್ಟ ಕೊಡುಗೆ ಏನು ಎಂಬ ಬಗ್ಗೆ ಬಹಿರಂಗ ಪಡಿಸಲಿ ಎಂದು ಶಾಸಕತ್ರಯರಾದ ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ ಹಾಗೂ ಕೆ.ಜಿ. ಬೋಪಯ್ಯ ಆಗ್ರಹಿಸಿದರು.
ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿಂದು ನಡೆದ ರೋಡ್‍ಶೋನಲ್ಲಿ ಮಾತನಾಡಿದ ಶಾಸಕ ರಂಜನ್, ಅಧಿಕಾರದಲ್ಲಿದ್ದ ಸಂದರ್ಭ ವಿಜಯಶಂಕರ್ ಅವರು ಕೊಡಗಿಗೆ ಮಾರಕವಾದ ಕೆಲಸಗಳನ್ನೇ ಮಾಡಿದ್ದಾರೆ ಹೊರತು ಪೂರಕವಾದ ಯಾವದೇ ಕೆಲಸವನ್ನು ಮಾಡಿಲ್ಲ ಎಂದು ಆರೋಪಿಸಿದರು. ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ವೇಳೆ ಹರಿದು ಬಂದ ಪರಿಹಾರದ ಹಣವನ್ನು ಸಂತ್ರಸ್ತರಿಗೆ ಸೂಕ್ತವಾಗಿ ತಲಪಿಸುವದಾಗಲಿ; ಆಸರೆ ಒದಗಿಸುವ ವಿಚಾರದಲ್ಲಾಗಲಿ ರಾಜ್ಯ ಸಮ್ಮಿಶ್ರ ಸರ್ಕಾರ ಸಫಲವಾಗಿಲ್ಲ ಎಂದು ದೂರಿದರು. ದೇಶದ ರಕ್ಷಣೆಗಾಗಿ ದೇಶದ ಜನರ ರಕ್ಷಣೆಗಾಗಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವ ಅನಿವಾರ್ಯತೆಯಿದ್ದು, ಮತದಾರರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಸಂಸದ ಪ್ರತಾಪ್ ಸಿಂಹ ಸಂಸದರ ನಿಧಿಯನ್ನು ಕ್ಷೇತ್ರಕ್ಕೆ ಸಮರ್ಪಕವಾಗಿ ಸದ್ಬಳಕೆ ಮಾಡಿದ ಸಂಸದರಾಗಿದ್ದು, ಜನತೆ ಈ ಬಾರಿ ಮತ್ತೊಮ್ಮೆ ಪ್ರತಾಪ್ ಸಿಂಹ ಅವರನ್ನೇ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭ, ಸೈನಿಕರ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಲಾಗಿತ್ತು ಎಂದು ದೂರಿದ ಅವರು, ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇಶರಕ್ಷಣೆಗೆ ಸಂಬಂಧಿಸಿದಂತೆ ಸೈನ್ಯಕ್ಕೆ ಸಂಪೂರ್ಣ ಅಧಿಕಾರ ನೀಡಿದ್ದಾರೆ. ಜಾತಿ ಬೇಧವಿಲ್ಲದೆ ಜನತೆಯ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಆದ್ದರಿಂದ ದೇಶದ ಜನತೆ ಮತ್ತೊಮ್ಮೆ ಮೋದಿಯವರಿಗೆ ಅಧಿಕಾರ ನೀಡಲಿದ್ದಾರೆ ಎಂದು ಹೇಳಿದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಅಧಿಕಾರ ಇದ್ದಾಗ ವಿಜಯಶಂಕರ್ ಅವರು ಕೊಡಗಿನ ಹಿತಕ್ಕೆ ಧಕ್ಕೆ ತರುವ ಕೆಲಸ ಮಾಡಿದರು ಎಂದು ಆಪಾದಿಸಿದರಲ್ಲದೆ, ಅಧಿಕಾರದಲ್ಲಿದ್ದಾಗ ಒಳ್ಳೆಯ ಕೆಲಸ ಮಾಡದೆ ಈಗ ಕೊಡಗಿನ ಅಭಿವೃದ್ಧಿಯ ಬಗ್ಗೆ ವಿಜಯಶಂಕರ್ ಮಾತನಾಡುತ್ತಿರುವದು ಹಾಸ್ಯಾಸ್ಪದ ಎಂದು ಕುಟುಕಿದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೋದಿಯವರು ಪ್ರಧಾನಮಂತ್ರಿ ಆದ ಬಳಿಕ ದೇಶದಲ್ಲಿ ಭಯೋತ್ಪಾದನೆಯನ್ನು ಮಟ್ಟ ಹಾಕುವ ಕೆಲಸ ಮಾಡಿದ್ದು, ಒಳ್ಳೆಯ ಕೆಲಸಗಳನ್ನು ಸಹಿಸದ ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ದೇಶದ ಹಿತವನ್ನು ಮರೆತು ಮಾತನಾಡುತ್ತಿದೆ ಎಂದು ಟೀಕಿಸಿದರು.
ಚೌಡೇಶ್ವರಿ ದೇವಾಲಯದ ಬಳಿಯಿಂದ ಆರಂಭವಾದ ರೋಡ್ ಶೋ ಇಂದಿರಾಗಾಂಧಿ ವೃತ್ತ, ದೇವಯ್ಯ ವೃತ್ತದ ಮೂಲಕ ಸಾಗಿ ಜ.ತಿಮ್ಮಯ್ಯ ವೃತ್ತದಲ್ಲಿ ಮುಕ್ತಾಯಗೊಂಡಿತು. ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್, ಪ್ರಧಾನ ಕಾರ್ಯದರ್ಶಿ ರವಿಕುಶಾಲಪ್ಪ, ನಗರಾಧ್ಯಕ್ಷ ಮಹೇಶ್ ಜೈನಿ, ಜಿ.ಪಂ. ಅಧ್ಯಕ್ಷ ಹರೀಶ್, ಬಿಜೆಪಿಯ ಜಿ.ಪಂ. ತಾ.ಪಂ., ನಗರಸಭಾ ಸದಸ್ಯರುಗಳು, ಭಜರಂಗದಳ ಸಂಚಾಲಕ ಚೇತನ್ ಸೇರಿದಂತೆ ಬಿಜೆಪಿ ಹಾಗೂ ಸಂಘ ಪರಿವಾರದ ವಿವಿಧ ಘಟಕಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.