ಸುಂಟಿಕೊಪ್ಪ, ಏ.16: ಲೋಕಸಭಾ ಚುನಾವಣೆಯ ಬ್ಯುಸಿಯಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಚಾಣಕ್ಷ್ಯ ಕಳ್ಳರು ಬ್ರಾಂದಿ ಅಂಗಡಿಗೆ ಕನ್ನ ಹಾಕಿ ನಗದು ಅಪಹರಿಸಿ ಪರಾರಿಯಾದ ಘಟನೆ ನಡೆದಿದೆ.ತಾ. 15ರಂದು ಸುಂಟಿಕೊಪ್ಪದ ಹೃದಯ ಭಾಗದಲ್ಲಿರುವ ಪೂಜಾ ಬಾರ್ ಅಂಡ್ ರೆಸ್ಟೋರೆಂಟ್ ಮೇನೇಜರ್, ಸಿಬ್ಬಂದಿಗಳು ವ್ಯವಹಾರ ಮುಗಿಸಿ ಮನೆಗೆ ತೆರಳಿದ್ದರು. ರಾಷ್ಟ್ರೀಯ ಹೆದ್ದಾರಿ 275 ಬಳಿ ಇರುವ ಬ್ರಾಂದಿ ಅಂಗಡಿಗೆ ರಾತ್ರಿ 1.42ಕ್ಕೆ ಕಾರಿನಲ್ಲಿ ಬಂದ ಮೂವರು ಮುಸುಕು ಧಾರಿಗಳು ಅಂಗಡಿಯ ಶೆಟರ್ಸ್ ಜಖಂಗೊಳಿಸಿ ಒಳನುಗ್ಗಿ ಕ್ಯಾಶ್ ಬಾಕ್ಸ್‍ವಲ್ಲಿದ್ದ ರೂ. 50,200 ಎಗರಿಸಿದ್ದಲ್ಲದೆ, 2 ಕ್ವಾರ್ಟರ್ ಬ್ರಾಂಡಿಯನ್ನು ಜೇಬಿಗೆ ಹಾಕಿಕೊಂಡು ಕ್ಷಣಾರ್ಧದಲ್ಲಿ (4 ನಿಮೀಷದಲ್ಲಿ) ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ.ಈ ಚಿತ್ರಣ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ವೃತ್ತಿ ನಿರತ, ಅದರಲ್ಲೂ ಶೆಟರ್ ಕೆಲಸದ ಪರಿಗಣಿತರೇ ಈ ಕೃತ್ಯ ಎಸಗಿರುವದು ಮೇಲ್ನೋಟಕ್ಕೆ ಕಂಡು ಬಂದಿದೆ. ಬ್ರಾಂಡಿ ಅಂಗಡಿಯ ಶೆಟರ್‍ನ ಬೀಗ ಹಾಗೆಯೇ ಇದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಲಾಗುವದೆಂದು ಠಾಣಾಧಿಕಾರಿ ಜಯರಾಂ ತಿಳಿಸಿದ್ದಾರೆ.
ಬ್ರಾಂದಿ ಅಂಗಡಿಯ ಮೆನೇಜರ್ ಶಿವಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.