ಮಡಿಕೇರಿ, ಏ. 16 : ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಲು ಮತದಾನದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳ ಬೇಕೆಂದು ಸಾಮಾಜಿಕ ಕಾರ್ಯಕರ್ತ ಮತ್ತು ಚಿಂತಕ ಯಾದವ ಕೃಷ್ಣ ಕರೆ ನೀಡಿದ್ದಾರೆ.

ಶನಿವಾರದಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಸಭಾಂಗಣದಲ್ಲಿ “ಪ್ರಜಾಸತ್ಯ” ದಿನಪತ್ರಿಕೆಯ ವತಿಯಿಂದ ನಡೆದ ಮತದಾನ ಜಾಗೃತಿ ಸಮಾವೇಶದ ಕುರಿತಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಗರಿಕ ಸಮಾಜವನ್ನು ಎಚ್ಚರದಲ್ಲಿಡುವ ವ್ಯವಸ್ಥೆಯು ಮತದಾನ ಪ್ರಕ್ರಿಯೆಯಾಗಿದೆ. ಇದು ಮಂಡಲ ಪಂಚಾಯಿತಿಯಿಂದ ಹಿಡಿದು ಲೋಕಸಭೆಯವರೆಗೆ, ಮಹಾ ಚುನಾವಣೆಯು ಈ ಕೆಲಸವನ್ನು ಮಾಡುತ್ತದೆ. ಸಮಾಜವನ್ನು ಎಬ್ಬಿಸಿ ಶೇ. 95ರಷ್ಟು ಜನರನ್ನು ಚುನಾವಣೆ ಮತ್ತು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವದು ಪ್ರಜಾಪ್ರಭುತ್ವದ ವಿಶೇಷತೆಗಳಲ್ಲಿ ಒಂದು ಎಂದು ಅವರು ವಿವರಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಿಕೆಯ ಸಂಪಾದಕ ಡಾ| ಬಿ.ಸಿ. ನವೀನ್ ಕುಮಾರ್ ಅವರು, ಪ್ರಜಾಪ್ರಭುತ್ವದಲ್ಲಿ ಚುನಾವಣೆ ಮತ್ತು ಮತದಾನವು ರಾಷ್ಟ್ರೀಯ ಪರಿಕಲ್ಪನೆಯ ಅಡಿಯಲ್ಲಿ ನಡೆಯಬೇಕಾಗಿದೆ ದುರದೃಷ್ಟವಶಾತ್ ನಮ್ಮಲ್ಲಿ ಪ್ರಾದೇಶಿಕ ಮನೋಭಾವ ಹೆಚ್ಚಾಗುತ್ತಿದ್ದು ಇದರಿಂದ ನಾವು ಒಳ್ಳೆಯ ಆಡಳಿತ ನೀಡಬಲ್ಲ ಸರ್ಕಾರವನ್ನು ನೀಡಲು ಸಾಧ್ಯವಾಗುವದಿಲ್ಲ. ನಾನು ಭಾರತೀಯ ದೇಶದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳುವದು ಅತ್ಯಂತ ಪ್ರಮುಖವಾದ ವಿಚಾರ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ಅವಿನಾಶ್ ಮಾತನಾಡಿ, ಜನರ ಸ್ವಾಸ್ಥ್ಯವನ್ನು ಕಾಪಾಡುವ ವೈದ್ಯರ ತಂಡ ನೀವಾಗಿದ್ದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕೂಡ ನೀವುಗಳು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ಬೇಕೆಂದು ಕರೆ ನೀಡಿದರು. ಪ್ರಜಾಪ್ರಭುತ್ವದ ಹಬ್ಬ ಮತ್ತು ಪ್ರಜಾಸತ್ತಾತ್ಮಕ ಹಕ್ಕು ಮತ್ತು ಕರ್ತವ್ಯಗಳ ಸಮ್ಮಿಶ್ರಣವಾಗಿರುವ ಚುನಾವಣೆ ಮತ್ತು ಮತದಾನದಲ್ಲಿ ಪಾಲ್ಗೊಂಡು ಪ್ರಜಾ ಪ್ರಭುತ್ವದ ಉನ್ನತೀಕರಣಕ್ಕೆ ನಾವೆಲ್ಲರು ಕೈಜೋಡಿಸಬೇಕಾಗಿದೆ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕೊಡಗು ವಿಜ್ಞಾನ ಸಂಸ್ಥೆಗಳ ಡೀನ್ ಡಾ| ಕಾರ್ಯಪ್ಪ ಮತ್ತು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.