ಕೂಡಿಗೆ, ಏ. 16: : ಬಾಣಾವರ ಮೀಸಲು ಅರಣ್ಯದಲ್ಲಿ ಗಾಯಗೊಂಡಿರುವ ಕಾಡಾನೆಗೆ ಕಳೆದ 15 ದಿನಗಳಿಂದ ಚಿಕಿತ್ಸೆ ನೀಡುತ್ತಿರುವ ಹಾಡಿ ಕೇಂದ್ರಕ್ಕೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್.ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು.

ಕಾಡಾನೆ ಚೇತರಿಸಿಕೊಳ್ಳುತ್ತಿದ್ದು, ಇಲಾಖೆ ವತಿಯಿಂದ ನೀಡುತ್ತಿರುವ ಚಿಕಿತ್ಸೆ ಫಲಕಾರಿಯಾಗಿರುವದರಿಂದ ಕಾಡಾನೆ ಶೀಘ್ರದಲ್ಲಿ ಗುಣಮುಖವಾಗಲಿದೆ. ಚುನಾವಣೆಯ ನಂತರ ಮುಂದಿನ ವಾರಗಳಲ್ಲಿ ಕುಶಾಲನಗರದ ಸಮೀಪದ ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ಮುಂದುವರೆಸಲಾಗುವದು ಎಂದು ಡಿಎಫ್‍ಓ ಎಂ.ಎಲ್.ಮಂಜುನಾಥ್ ಹೇಳಿದರು.

ಈ ಸಂದರ್ಭ ಬಾಣಾವರ ಉಪ ವಲಯ ಅರಣ್ಯಾಧಿಕಾರಿ ಮಹದೇವನಾಯಕ್, ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಆನೆ ಮಾವುತರು ಇದ್ದರು.