ಮಡಿಕೇರಿ, ಏ.16 :ಬೆಳೆಗಾರರ ಹಿತಕಾಯಲು ಸಂಸದರನ್ನು ಸಂಬಾರ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡುತ್ತಾರೆ. ಆದರೆ, ಸದಸ್ಯರಾಗಿದ್ದ ಪ್ರತಾಪ ಸಿಂಹ ಅವರು ಬೆಳೆÉಗಾರರ ಹಿತಕಾಯುವಲ್ಲಿ ವಿಫಲರಾದರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳ ಕಾಲ ಲೋಕಸಭಾ ಸದಸ್ಯ ಸ್ಥಾನದಲ್ಲಿದ್ದ ಪ್ರತಾಪಸಿಂಹ ಅವರು ಮನಸ್ಸು ಮಾಡಿದ್ದರೆ ಕಾಳುಮೆಣಸು ಆಮದಿನಿಂದ ಆಗಿದ್ದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿತ್ತು. ಆದರೆ, ಇವರ ನಿರ್ಲಕ್ಷ್ಯದಿಂದ ಕೊಡಗಿನ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಯಿತು ಎಂದು ಆರೋಪಿಸಿದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಟಿ.ಎಂ.ಶಾಹಿದ್ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ಸಂಸದ ಪ್ರತಾಪ ಸಿಂಹ ಅವರು ಜಿಲ್ಲೆಯನ್ನು ಕಡೆಗಣಿಸಿದ ಪರಿಣಾಮ ಈ ಬಾರಿ ಬಿಜೆಪಿಗೆ ಸೋಲಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ ಮಾತನಾಡಿ, ಅಧಿಕಾರಿಗಳು ಬಿಜೆಪಿಯೊಂದಿಗೆ ಶಾಮೀಲಾಗಿದ್ದಾರೆಂದು ಆರೋಪಿಸಿದರು. ಕೆಪಿಸಿಸಿ ಸದಸ್ಯ ಟಿ.ಪಿ.ರಮೇಶ್ ಮಾತನಾಡಿ, ಬಿಜೆಪಿಯನ್ನು ಸೋಲಿಸಲೇ ಬೇಕೆಂದು ಜಾತ್ಯತೀತ ಶಕ್ತಿಗಳು ಒಂದಾಗಿ ಮೈತ್ರಿ ಮಾಡಿಕೊಂಡಿದ್ದು, ಜಿ.ಟಿ. ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರು ಜಂಟಿಯಾಗಿ ಪ್ರಚಾರ ಮಾಡುತ್ತಿರುವದರಿಂದ ವಿಜಯಶಂಕರ್ ಅವರ ಗೆಲವು ಸುಲಭವಾಗಲಿದೆ ಎಂದರು.
ಕಳೆದ ಚುನಾವಣೆಯಲ್ಲಿ ಕೊಡಗು, ಮೈಸೂರು ಲೋಕಸಭಾ ಕ್ಷೇತ್ರದಲ್ಲಿ 17,23,284 ಮತದಾರರಲ್ಲಿ 11,59,596 ಮತ ಚಲಾವಣೆಯಾಗುವ ಮೂಲಕ ಶೇ.71 ರಷ್ಟು ಮತದಾನವಾಗಿತ್ತು. ಈ ಬಾರಿ ಈ ಕ್ಷೇತ್ರದಲ್ಲಿ 20,14,711 ಮತದಾರರಿದ್ದಾರೆ. ಕಳೆದ ಬಾರಿ ಬಿಜೆಪಿಗೆ ಶೇ.43.46, ಕಾಂಗ್ರೆಸ್‍ಗೆ ಶೇ.40.70 ಹಾಗೂ ಜೆಡಿಎಸ್‍ಗೆ ಶೇ.11.95 ರಷ್ಟು ಮತದಾನವಾಗಿತ್ತು. ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿ ಸ್ಪರ್ಧೆಗೆ ಇಳಿದಿರುವದರಿಂದ ಶೇಕಡವಾರು ಮತಗಳು ಮೈತ್ರಿ ಅಭ್ಯರ್ಥಿ ಪರ ಹೆಚ್ಚಾಗಲಿದ್ದು, ಗೆಲವು ಖಚಿತವೆಂದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಮಿಟ್ಟು ಚಂಗಪ್ಪ ಉಪಸ್ಥಿತರಿದ್ದರು.