ಸೋಮವಾರಪೇಟೆ, ಏ.16: ತೋಟದಲ್ಲಿ ಮರಕಸಿ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಮರದಿಂದ ಕೆಳ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಸಮೀಪದ ನೇಗಳ್ಳೆ ಕರ್ಕಳ್ಳಿ ಗ್ರಾಮದಲ್ಲಿ ನೆಡೆದಿದೆ. ನೇಗಳ್ಳೆ ಕರ್ಕಳ್ಳಿ ನಿವಾಸಿ ಕೆ.ಎಲ್. ಚಂಗಪ್ಪ ಹಾಗೂ ಲಲಿತಮ್ಮ ಅವರ ಪುತ್ರ ಕೆ.ಸಿ. ಸೂರ್ಯ ಕುಮಾರ್(51) ಎಂಬವರು ಮೃತಪಟ್ಟ ದುರ್ದೈವಿ. ಇಂದು ಪೂರ್ವಾಹ್ನ 11 ಗಂಟೆ ಸುಮಾರಿಗೆ ತಮ್ಮದೇ ತೋಟದಲ್ಲಿ ಮರ ಕಸಿ ಮಾಡುತ್ತಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ.

ಏಣಿಯ ಸಹಾಯದಿಂದ ಮರ ಹತ್ತಿ ಕೊಂಬೆಯನ್ನು ಕಡಿಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಮರದ ಕೊಂಬೆ ಇವರ ಮೇಲೆಯೇ ಬಿದ್ದಿದ್ದು, ಆಯತಪ್ಪಿದ ಸೂರ್ಯಕುಮಾರ್ ಕೆಳಕ್ಕೆ ಬಿದ್ದಿದ್ದಾರೆ. ಈ ಸಂದರ್ಭ ಕೆಳಗೆ ಬಿದ್ದಿದ್ದ ಮರದ ದಿಮ್ಮಿಗೆ ತಲೆ ಭಾಗ ಬಡಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನೇರುಗಳಲೆ ಗ್ರಾಮ ಪಂಚಾಯಿತಿಯ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಸೂರ್ಯಕುಮಾರ್, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಕಳೆದ 35 ವರ್ಷಗಳಿಂದ ತೊಡಗಿಸಿಕೊಂಡಿದ್ದರು. ಪ್ರಸ್ತುತ ಆರ್‍ಎಸ್‍ಎಸ್‍ನ ಜಿಲ್ಲಾ ವ್ಯವಸ್ಥಾ ಪ್ರಮುಖ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮೃತರು ಪತ್ನಿ ಕವಿತ ಸೇರಿದಂತೆ ಈರ್ವರು ಪುತ್ರರನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. 17ರಂದು (ಇಂದು) ಸ್ವಗ್ರಾಮದಲ್ಲಿ ನಡೆಯಲಿದೆ.

ಸಂತಾಪ: ಸೂರ್ಯಕುಮಾರ್ ಅವರ ನಿಧನಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೇರಿದಂತೆ ಆರ್‍ಎಸ್‍ಎಸ್ ಹಾಗೂ ಸಂಘಪರಿವಾರದ ಮುಖಂಡರುಗಳು ಸಂತಾಪ ಸೂಚಿಸಿದ್ದಾರೆ.