ಒಡೆಯನಪುರ, ಏ. 16: ರೋಟರಿ ಸಂಸ್ಥೆಯು ಸಾರ್ವಜನಿಕರ ಮತ್ತು ಸಮಾಜಿಕ ಸೇವಾ ಕಾರ್ಯಕ್ಕೆ ಮುಡಿಪಾಗಿರುವ ಸೇವಾ ಸಂಸ್ಥೆಯಾಗಿರುವ ಮೂಲಕ ವಿಶ್ವಕ್ಕೆ ಮಾದರಿಯಾಗಿದೆ ಎಂದು ರೋಟರಿ ಕ್ಲಬ್ ಜಿಲ್ಲಾ ರಾಜ್ಯಪಾಲ ಪಿ. ರೋಹಿನಾಥ್ ಅಭಿಪ್ರಾಯ ಪಟ್ಟರು. ಅವರು ಶನಿವಾರಸಂತೆ ಯಶಸ್ವಿ ಕಲ್ಯಾಣ ಮಂಟಪದಲ್ಲಿ ಶನಿವಾರಸಂತೆ ರೋಟರಿ ಕ್ಲಬ್ ಶಾಖೆ ಸದಸ್ಯರ ಕಾರ್ಯಚಟುವಟಿಕೆಗಳ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ರೋಟರಿ ಸಂಸ್ಥೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ ಅಂಥವರಿಗೆ ಸೇವೆ ಸವಲತ್ತು ನೀಡಿ ಸೇವೆ ಮಾಡುತ್ತಿರುವ ಅತ್ಯುತ್ತಮ ಸೇವಾ ಸಂಸ್ಥೆಯಾಗಿದೆ ಎಂದರು. ಈ ನಿಟ್ಟಿನಲ್ಲಿ ಸಂಸ್ಥೆಯು ಸಾರ್ವಜನಿಕರಿಗೆ ಸಾಮಾಜಿಕವಾಗಿ ಸೇವೆ ನೀಡುವ ಚಿಂತನೆಯಡಿಯಲ್ಲಿ ಕಾರ್ಯವನ್ನು ಮಾಡುತ್ತಿದೆ; ರೋಟರಿ ಸಂಸ್ಥೆಯ ಸದಸ್ಯರು ತನ್ನ ಕುಟುಂಬದ ಪತ್ನಿ ಸೇರಿದಂತೆ ತಮ್ಮ ಮಕ್ಕಳನ್ನು ಸದಸ್ಯರನ್ನಾಗಿ ನೋಂದಾವಣೆ ಮಾಡಿಕೊಳ್ಳಬೇಕು. ಈ ಮೂಲಕ ಮತ್ತಷ್ಟು ಸಮಾಜ ಸೇವೆ ಮಾಡಬೇಕೆಂದು ಸಲಹೆ ನೀಡಿದರು. ಸಂಸ್ಥೆಯ ಪದಾಧಿಕಾರಿಗಳು ವೈಯಕ್ತಿಕವಾಗಿ ಎಷ್ಟೆ ಒತ್ತಡಗಳಿದ್ದರೂ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳುತ್ತಿರುವದು ಶ್ಲಾಘನೀಯ ವಾದದ್ದು, ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಸಂಸ್ಥೆ ಜಿಲ್ಲಾ ಸಹಾಯಕ ರಾಜ್ಯಪಾಲ ಧರ್ಮಪುರಿ ನಾರಾಯಣ್ ಮಾತನಾಡಿ, ಶನಿವಾರಸಂತೆ ರೋಟರಿ ಸಂಸ್ಥೆಯು ಆಶಾ ಸ್ಪೂರ್ತಿ ಯೋಜನೆ ಮುಂತಾದ ಕಾರ್ಯಕ್ರಮಗಳ ಮೂಲಕ ಹಲವಾರು ಸಾರ್ವಜನಿಕ, ಸಮಾಜ ಮುಖೇನ ಸೇವೆ ಸಲ್ಲಿಸುತ್ತಿದ್ದು ಈ ಭಾಗದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮೂಲಕ ಶನಿವಾರಸಂತೆ ಶಾಖೆ ಅಲ್ಪ ಅವಧಿಯಲ್ಲೇ ಬಹುದೊಡ್ಡ ಸಾಧನೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಲ್ಲಿ ಒಗ್ಗಟ್ಟು ಶಿಸ್ತು, ತಾಳ್ಮೆ, ಸಂಯಮ, ಸೇವಾ ಮನೋಭಾವನೆ ಮುಂತಾದ ವುಗಳನ್ನು ಅಳವಡಿಸಿಕೊಂಡಲ್ಲಿ ಸಂಸ್ಥೆಯು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭ ಶನಿವಾರಸಂತೆ ರೋಟರಿ ಸಂಸ್ಥೆ ಅಧ್ಯಕ್ಷ ಟಿ.ಆರ್. ಪುರುಷೋತಮ್ ರೋಟರಿ ಸಂಸ್ಥೆಯ ಸಾಧನೆಯ ಕುರಿತಾದ ಮೊದಲ ಹೆಜ್ಜೆ ಕೃತಿಯನ್ನು ಬಿಡುಗಡೆ ಗೊಳಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಪಿಎಚ್‍ಎಫ್ ಭರತ್ ಬೀಮಯ್ಯ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಎ.ಡಿ. ಮೋಹನ್ ಕುಮಾರ್, ನಿಯೋಜಿತ ಅಧ್ಯಕ್ಷ ಸುಬ್ಬು, ನಿಯೋಜಿತ ಕಾರ್ಯದರ್ಶಿ ಚಂದನ್, ಸಂಸ್ಥೆಯ ಪ್ರಮುಖರಾದ ಅರವಿಂದ್‍ರವಿ, ಎಚ್.ಎಸ್. ವಸಂತ್, ದಿವಾಕರ್, ಡಾ.ಪ್ರಶಾಂತ್, ನಾಗೇಶ್, ಉಜ್ವಲ್‍ಕೋಡ್ಸ್, ಪಿ.ಕೆ.ರವಿ, ವಿಶ್ವನಾಥ್ ಮುಂತಾದವರು ಇದ್ದರು.