ಮಡಿಕೇರಿ, ಏ. 16: ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ತಾ. 18ರಂದು (ನಾಳೆ) ನಡೆಯಲಿರುವ ಚುನಾವಣೆ ಸಂದರ್ಭ; ಪೊಲೀಸ್ ಇಲಾಖೆಯೊಂದಿಗೆ ರಕ್ಷಣಾ ನಿರತ ಎಲ್ಲರೂ ಪರಸ್ಪರ ಸಹಕಾರದಿಂದ; ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರೊಂದಿಗೆ ತಾಳ್ಮೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಕಿವಿಮಾತು ಹೇಳಿದರು. ಇಲ್ಲಿನ ಪೊಲೀಸ್ ಕೇಂದ್ರ ಮೈದಾನದಲ್ಲಿ ಸಿಬ್ಬಂದಿಗಳಿಗೆ ಹೊಣೆಗಾರಿಕೆ ಬಗ್ಗೆ ಮಾತನಾಡುತ್ತಿದ್ದ ಅವರು; ಮತಗಟ್ಟೆ ಹಾಗೂ ಇತರೆಡೆಗಳಲ್ಲಿ ಅನಾವಶ್ಯಕ ಗೊಂದಲಗಳಿಗೆ ಅವಕಾಶವಾಗದಂತೆ ಒಬ್ಬರಿಗೊಬ್ಬರು ಹೊಂದಾಣಿಕೆ ಯಲ್ಲಿ ನಡೆದುಕೊಳ್ಳುವಂತೆ ಕರೆ ನೀಡಿದರು. ಪೊಲೀಸ್ ಅಧಿಕಾರಿಗಳು ಮತ್ತು(ಮೊದಲ ಪುಟದಿಂದ) ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವ ಮೂಲಕ; ಜಿಲ್ಲೆಯ ಮತದಾರರು ಕೂಡ ಶಾಂತಿಪಾಲನೆಗೆ ಅಡ್ಡಿಯಾಗದಂತೆ ಇಲಾಖೆ ಯೊಂದಿಗೆ ಸಹಕಾರ ತೋರುವಂತೆ ಅವರು ಕಳಕಳಿ ವ್ಯಕ್ತಪಡಿಸಿದರು. ಚುನಾವಣೆ ಸಂದರ್ಭ ಯಾವದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಎಲ್ಲ ರೀತಿ ಮುನ್ನೆಚ್ಚರಿಕೆ ಅವಶ್ಯಕ ಎಂದು ಎಸ್ಪಿ ಸಿಬ್ಬಂದಿಗಳಿಗೆ ನೆನಪಿಸಿದರು.

ಬಿಎಸ್‍ಎಫ್ ಕಂಪನಿ : ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚುನಾವಣೆ ವೇಳೆ ಯಾವದೇ ಅಡ್ಡಿ - ಆತಂಕ ಎದುರಾದರೆ ಕ್ಷಿಪ್ರವಾಗಿ ಕಾರ್ಯನಿರ್ವಹಿಸಲು ಪಶ್ಚಿಮ ಬಂಗಾಲದಿಂದ ಒಂದು ಕಂಪೆನಿ ಗಡಿ ಭದ್ರತಾಪಡೆ ಯೋಧರನ್ನು ನಿಯೋಜಿಸಿದ್ದು, ಈ ತುಕಡಿ ಕೂಡ ಜಿಲ್ಲಾ ಕೇಂದ್ರದಲ್ಲಿ ಮೊಕ್ಕಾಂ ಹೂಡಿದೆ.ಸಿಬ್ಬಂದಿ ನಿಯೋಜನೆ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಆರು ಮಂದಿ ಡಿವೈಎಸ್ಪಿಗಳು, 12 ವೃತ್ತ ನಿರೀಕ್ಷಕರು, 14 ಸಬ್‍ಇನ್ಸ್‍ಪೆಕ್ಟರ್‍ಗಳು, 35 ಸಹಾಯಕ ಸಬ್‍ಇನ್ಸ್‍ಪೆಕ್ಟರ್‍ಗಳು, 321 ಮುಖ್ಯ ಪೇದೆಗಳು ಸಹಿತ 1200 ಪೊಲೀಸರು, 430 ಗೃಹರಕ್ಷಕ ಸಿಬ್ಬಂದಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಅಲ್ಲದೆ ತುರ್ತು ಸೇವೆಗಾಗಿ 4 ಕೆ.ಎಸ್.ಆರ್.ಪಿ. ತುಕಡಿ, 12 ಡಿಎಆರ್ ತುಕಡಿ, 1 ಕ್ಷಿಪ್ರಪಡೆಯೊಂದಿಗೆ, ನಕ್ಸಲ್ ನಿಗ್ರಹದಳ ಕೂಡ ಭದ್ರತೆ ನೋಡಿಕೊಳ್ಳಲು ನಿಯೋಜನೆ ಗೊಂಡಿವೆ.

ಈ ಸಂಬಂಧ ಈ ಸಂಜೆ ಪೊಲೀಸ್ ಮೈದಾನದಲ್ಲಿ ನಡೆದ ಕರ್ತವ್ಯ ಹಂಚಿಕೆ ಬಳಿಕ, ಮಡಿಕೇರಿಯ ಮುಖ್ಯ ಬೀದಿಗಳಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಪಥ ಸಂಚಲನ ನಡೆಸಲಾಯಿತು. ಡಿವೈಎಸ್ಪಿಗಳಾದ ಕೆ.ಎಸ್. ಸುಂದರರಾಜ್, ನಾಗಪ್ಪ, ಸುಧಾಕರ ಶೆಟ್ಟಿ ಸೇರಿದಂತೆ ವಿವಿಧ ಅಧಿಕಾರಿಗಳು, ಠಾಣಾಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.