ಮಡಿಕೇರಿ, ಏ. 18: ಯಾವದೇ ಅಹಿತಕರ ಘಟನೆಗಳು ಹಾಗೂ ಕಾನೂನು ವ್ಯವಸ್ಥೆಗೆ ಧಕ್ಕೆಯಾಗದಂತೆ ಶಾಂತಿಯುತ ಮತದಾನಕ್ಕಾಗಿ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ. ಜಿಲ್ಲೆಯ ಪೊಲೀಸರು, ಇತರೆಡೆಯಿಂದ ಕರೆಸಿಕೊಂಡ ಭದ್ರತಾ ಪಡೆಯ ಸಿಬ್ಬಂದಿಗಳು, ಗೃಹರಕ್ಷಕ ದಳದವರು ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ.
ಆದರೆ ಈ ಸಹಜ ಪ್ರಕ್ರಿಯೆ ಯೊಂದಿಗೆ ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ಹಲವು ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆಯ ಮುನ್ನೆಚ್ಚರಿಕೆಯಿಂದಾಗಿ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿರುವದು ಒಂದೆಡೆ ಯಾಗಿದೆ.
ಇದರೊಂದಿಗೆ ಜಿಲ್ಲೆಯ ಹಲವಾರು ಭಾಗಗಳಲ್ಲಿ ಮತಗಟ್ಟೆಗಳಿಗೆ ತೆರಳಲು ಕಾಡಾನೆಗಳ ಸಮಸ್ಯೆಯಿಂದಾಗಿ ಈ ಬಾರಿಯ ಚುನಾವಣೆಯಲ್ಲೂ ಇದಕ್ಕಾಗಿ ವಿಶೇಷ ತಂಡಗಳನ್ನು ನಿಯೋಜಿಸಿದ್ದು, ಮತ್ತೊಂದು ವಿಶೇಷ.
ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಮತದಾರರು ಮತಗಟ್ಟೆಗಳಿಗೆ ತೆರಳಲು ರ್ಯಾಪಿಡ್ ರೆಸ್ಪಾನ್ಸ್ ಟೀಮ್‍ನ ಸಿಬ್ಬಂದಿಗಳನ್ನು ರಕ್ಷಣೆ ಒದಗಿಸಲು ಮಡಿಕೇರಿ ಕ್ಷೇತ್ರದ 91 ಮತಗಟ್ಟೆಗಳಿಗೆ ಓರ್ವ ವಲಯ ಅರಣ್ಯಾಧಿಕಾರಿ, ರಕ್ಷಕರು, ವೀಕ್ಷಕರು, ಚಾಲಕ ಸೇರಿ ಐವರು ಮಂದಿಯನ್ನು ಬಂದೂಕು, ಪಟಾಕಿಗಳೊಂದಿಗೆ ವಾಹನ ಸಹಿತ ನಿಯೋಜಿಸಲಾಗಿದ್ದು, ತಂಡವು ಆಯಾ ಮತಗಟ್ಟೆಗಳಿಗೆ ಗಸ್ತು ತಿರುಗುವ ವ್ಯವಸ್ಥೆ ಮಾಡಲಾಗಿತ್ತು. ವೀರಾಜಪೇಟೆ ಕ್ಷೇತ್ರದಲ್ಲೂ 53 ಮತಗಟ್ಟೆಗಳಿಗೆ ತಂಡಗಳನ್ನು ನಿಯೋಜಿಸಲಾಗಿತ್ತು.