ಕುಶಾಲನಗರ, ಏ. 18: ಲೋಕಸಭಾ ಚುನಾವಣೆ ಸಂದರ್ಭ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಮತದಾನ ಶಾಂತಿಯುತವಾಗಿ ನಡೆದರೂ ಕೆಲವು ಮತಗಟ್ಟೆಗಳಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದವು. ಮೂಲಕ ಮತದಾನ ಸ್ವಲ್ಪಕಾಲ ವಿಳಂಭಕ್ಕೆ ಕಾರಣವಾಯಿತು.
ಬೆಳಗ್ಗೆ ಕುಶಾಲನಗರ ಎಚ್‍ಆರ್‍ಪಿ ಕಾಲನಿ ಮತಗಟ್ಟೆ ಸಂಖ್ಯೆ 173, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆ 167, ನಾಡಕಛೇರಿಯ 172, ಮುಳ್ಳುಸೋಗೆ ಸೇರಿದಂತೆ ವಿವಿಧೆಡೆ ವಿವಿ ಪ್ಯಾಟ್ ಕಾರ್ಯನಿರ್ವಹಿಸದಿರುವದು ಗೋಚರಿಸಿ ತಕ್ಷಣ ಬದಲೀ ವಿವಿ ಪ್ಯಾಟ್ ಅಳವಡಿಸಲಾಯಿತು. ನಾಡಕಛೇರಿಯಲ್ಲಿ ಬೆಳಕು ವ್ಯವಸ್ಥೆ ಅಸಮರ್ಪಕವಾಗಿರುವ ಬಗ್ಗೆ ಮತದಾರರು ದೂರು ನೀಡಿದ ಹಿನೆÀ್ನಲೆಯಲ್ಲಿ ವ್ಯವಸ್ಥೆ ಕಲ್ಪಿಸಲಾಯಿತು.
ಕುಶಾಲನಗರ ಮತಗಟ್ಟೆ ಸಂಖ್ಯೆ 167 ರಲ್ಲಿ ಮತಯಂತ್ರಗಳಲ್ಲಿ ಎರಡು ಬಾರಿ ದೋಷ ಕಂಡುಬಂದು ಅಧಿಕಾರಿಗಳು ಬದಲೀ ವ್ಯವಸ್ಥೆ ಕೈಗೊಂಡರು. ಹಾರಂಗಿ ಮತಗಟ್ಟೆ ಸಂಖ್ಯೆ 151 ರಲ್ಲಿ ಮತದಾರರು ಬಿಸಿಲಿನಲ್ಲೇ ನಿಂತು ಮತದಾನ ಮಾಡಲು ಕಾಯಬೇಕಾದ ಪರಿಸ್ಥಿತಿ ಕೂಡ ಉಂಟಾಗಿತ್ತು.
ಮದಲಾಪುರ ಮತಗಟ್ಟೆ ಸಂಖ್ಯೆ 150 ರಲ್ಲಿ ಭುವನಗಿರಿಯ ಮಹಿಳೆ ಜಯಮ್ಮ ಎಂಬವರು ಮತಗಟ್ಟೆಗೆ ತೆರಳಿ ಮತದಾನ ಮಾಡಲು ಹೋದ ಸಂದರ್ಭ ಅವರ ಹೆಸರಿನಲ್ಲಿ ಮತ ಚಲಾಯಿಸಿದ ಬಗ್ಗೆ ತಿಳಿದು ಸ್ವಲ್ಪಕಾಲ ಗೊಂದಲ ಉಂಟಾಯಿತು. ನಂತರ ಅಧಿಕಾರಿಗಳು ಸ್ವಲ್ಪಕಾಲ ಕಾಯುವಂತೆ ಹೇಳಿ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು ಎಂದು ಜಯಮ್ಮ ಅವರ ಪುತ್ರ ಹರೀಶ್ ತಿಳಿಸಿದ್ದಾರೆ. ಜಯಮ್ಮ ಹೆಸರಿನ ಮೂವರು ಮತದಾರರು ಪಟ್ಟಿಯಲ್ಲಿ ಇದ್ದ ಹಿನೆÀ್ನಲೆಯಲ್ಲಿ ಈ ಅವಾಂತರ ನಡೆದಿದೆ.
ಕುಶಾಲನಗರ ಮಹಿಳಾ ಸಮಾಜದ ಮತಗಟ್ಟೆ ಸಂಖ್ಯೆ 164 ರಲ್ಲಿ ರಿಟರ್ನಿಂಗ್ ಅಧಿಕಾರಿ ಗೋಣಿಕೊಪ್ಪದ ಹಾತೂರು ಸರಕಾರಿ ಶಾಲೆಯ ಶಿಕ್ಷಕ ಕೆ.ಎಂ.ಅಪ್ಪಣ್ಣ ಎಂಬವರು ಅನಾರೋಗ್ಯಕ್ಕೆ ಒಳಗಾಗಿ ತಕ್ಷಣ ಅವರನ್ನು ಚಿಕಿತ್ಸೆಗೆ ಮಡಿಕೇರಿಗೆ ಸಾಗಿಸಲಾಯಿತು. ಮತಗಟ್ಟೆ ಒಳಗೆ ಬಿಜೆಪಿ ಏಜೆಂಟ್ ಓರ್ವ ಪಕ್ಷದ ಚಿನ್ನೆ ಇರುವ ಬಟ್ಟೆ ಧರಿಸಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಬೆಳಗ್ಗೆ ಕುಶಾಲನಗರದ ಶ್ರೀ ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ತೆರಳಿದರು. ಮಡಿಕೇರಿ ವಿಧಾನ ಸಭಾ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಕುಶಾಲನಗರ ಸೇರಿದಂತೆ ಸುತ್ತಮುತ್ತಲ ಮತಗಟ್ಟೆಗಳಿಗೆ ಭೇಟಿ ನೀಡಿ ಕಾರ್ಯಕರ್ತರಿಂದ ಮತದಾನದ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭ ಮಾತನಾಡಿದ ಅವರು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ 60 ಸಾವಿರ ಮತಗಳ ಅಂತರದಿಂದ ಜಯಗಳಿಸಲಿದ್ದು ನರೇಂದ್ರ ಮೋದಿ ಮತ್ತೊಮ್ಮ ಪ್ರಧಾನಿಯಾಗಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದರು.