ಮಡಿಕೇರಿ, ಏ. 18: ದೇಶದ 17ನೇ ಲೋಕಸಭೆಗೆ ಇಂದು ನಡೆದ ಚುನಾವಣೆಯಲ್ಲಿ; ಕೊಡಗು - ಮೈಸೂರು 21ನೇ ಕ್ಷೇತ್ರಕ್ಕೆ 68.72ರಷ್ಟು ಮತದಾನ ನಡೆದಿದ್ದು, ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನದೊಂದಿಗೆ ಶೇ. 74.66 ಸಾಧನೆ ಕಂಡು ಬಂದಿದೆ. ಜಿಲ್ಲೆಯಲ್ಲಿ ಯಾವದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಎಲ್ಲ ರಾಜಕೀಯ ಪಕ್ಷಗಳ ಸಹಿತ ಮತದಾರರ ಸ್ಪಂದನಕ್ಕೆ ಜಿಲ್ಲಾಡಳಿತ ಶ್ಲಾಘನೆ ವ್ಯಕ್ತಪಡಿಸಿದೆ. 208ನೇ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 76.74 ಮತದಾನದೊಂದಿಗೆ; 209ನೇ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಶೇ. 72.58 ಸಾಧನೆಯಾಗಿದೆ.ಕೊಡಗಿನ 12 ಮತಗಟ್ಟೆ ವ್ಯಾಪ್ತಿಯ ನಕ್ಸಲ್ ಪೀಡಿತವೆಂದು ಪರಿಗಣಿಸಲಾಗಿದ್ದ ಪ್ರದೇಶವೂ ಸೇರಿದಂತೆ; ಸೂಕ್ಷ್ಮ ಮತಗಟ್ಟೆಗಳ ಸಹಿತ ಬೆಳಿಗ್ಗೆಯಿಂದ ಸಂಜೆಯ ಕೊನೆಯ ಕ್ಷಣದವರೆಗೆ ಶಾಂತಿಪೂರ್ಣ ಮತದಾನವಾಗಿರುವ ಬಗ್ಗೆ ಜಿಲ್ಲಾಡಳಿತ ‘ಶಕ್ತಿ’ಯೊಂದಿಗೆ ಹರ್ಷವ್ಯಕ್ತಪಡಿಸಿದೆ. ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಾ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಹಾಗೂ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಅವರುಗಳು ತಮ್ಮ ತಮ್ಮ ಸಂಸಾರದೊಂದಿಗೆ ಆಗಮಿಸಿ, ಈ ಬೆಳಿಗ್ಗೆ ಮೈಸೂರಿನ ವಿಜಯನಗರದ ವ್ಯಾಪ್ತಿಯ ಮತಗಟ್ಟೆಗಳಲ್ಲಿ ತಮ್ಮ ತಮ್ಮ ಹಕ್ಕು ಚಲಾಯಿಸಿದರು.
ಕೊಡಗು ಜಿಲ್ಲೆಯ 543 ಮತಗಟ್ಟೆಗಳಲ್ಲಿ ಇಂದು ವಿಜಯನಗರದ ವ್ಯಾಪ್ತಿಯ ಮತಗಟ್ಟೆಗಳಲ್ಲಿ ತಮ್ಮ ತಮ್ಮ ಹಕ್ಕು ಚಲಾಯಿಸಿದರು.
ಕೊಡಗು ಜಿಲ್ಲೆಯ 543 ಮತಗಟ್ಟೆಗಳಲ್ಲಿ ಇಂದು (ಮೊದಲ ಪುಟದಿಂದ) ಎಂಟು ಗಂಟೆ ಸುಮಾರಿಗೂ ಮತದಾರರು ಸರದಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ಕಡಮಕಲ್‍ನಿಂದ ಕೊಡ್ಲಿಪೇಟೆ : ಉತ್ತರ ಕೊಡಗಿನ ಕಟ್ಟಕಡೆಯ ಮತಗಟ್ಟೆ ಕಡಮಕಲ್‍ನಿಂದ ಕೊಡ್ಲಿಪೇಟೆವರೆಗಿನ ಎಲ್ಲ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನವಾಗಿದ್ದು, ಇನ್ನೊಂದೆಡೆ ಕರಿಕೆ ಗಡಿಯಿಂದ ಬಿರುನಾಣಿವರೆಗಿನ ದಕ್ಷಿಣ ಕೊಡಗಿನಲ್ಲಿ ಕೂಡ ಉತ್ತಮ ಮತದಾನವಾಗಿರುವದಾಗಿ ಜಿಲ್ಲಾಡಳಿತ ಖಾತರಿಪಡಿಸಿದೆ. ಇಂದು ಕೂಡ ಸಂಜೆಗತ್ತಲೆ ನಡುವೆ ಅಲ್ಲಲ್ಲಿ ಮಳೆಯಾಗಿದ್ದು, ನಿನ್ನೆ ರಾತ್ರಿ ಗಾಳಿ - ಮಳೆ ನಡುವೆ ವಿದ್ಯುತ್ ಕೈಕೊಟ್ಟಿದ್ದರೂ ಸಹ ಜಿಲ್ಲೆಯಲ್ಲಿ ಮತದಾರರು ಉತ್ಸಾಹದಿಂದ ಭಾಗವಹಿಸಿದ್ದು, ವಿಶೇಷ.
ಶೇಕಡ ಮತದಾನ : ಕೊಡಗು - ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮ್ಮ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಇತರ ಆರು ವಿಧಾನಸಭಾ ಸ್ಥಾನಗಳಲ್ಲಿ ಕೂಡ ಉತ್ತಮ ಮತದಾನ ನಡೆದಿರುವ ಬಗ್ಗೆ ಮಾಹಿತಿ ಲಭಿಸಿದೆ. ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ‘ಶಕ್ತಿ’ಗೆ ಲಭಿಸಿರುವ ಮಾಹಿತಿಯಂತೆ ಶೇ. 59.89, ಚಾಮರಾಜ ಕ್ಷೇತ್ರದಲ್ಲಿ ಶೇ. 56 ರಷ್ಟು ಕನಿಷ್ಟ ಮತದಾನ ಕಂಡು ಬಂದಿದೆ. ಇನ್ನುಳಿದಂತೆ ಕೃಷ್ಣರಾಜ ಶೇ. 60.36, ಚಾಮುಂಡೇಶ್ವರಿ ಶೇ. 71.75 ರಷ್ಟು ಮತದಾನ ನಡೆದಿದೆ. ಈ ಕ್ಷೇತ್ರದ ಮತಗಟ್ಟೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹಕ್ಕು ಚಲಾಯಿಸಿದ್ದು, ಗಮನ ಸೆಳೆಯಿತು.
ಅಂತೆಯೇ ಹುಣಸೂರಿನಲ್ಲಿ ಶೇ. 77.45, ಪಿರಿಯಾಪಟ್ಟಣ ಶೇ. 78.6 ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದರು. ಕೊಡಗಿನ ಎರಡು ಕ್ಷೇತ್ರಗಳಾದ ಮಡಿಕೇರಿ ಶೇ. 76.74 ಹಾಗೂ ವೀರಾಜಪೇಟೆ ಶೇ. 72.58 ಸಾಧನೆಯೊಂದಿಗೆ ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಶೇ. 68.72 ರಷ್ಟು ಮತದಾನ ನಡೆದಿದೆ.
ಅಭ್ಯರ್ಥಿ ಪೂಜೆ : ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಚುನಾವಣಾ ಅಂತಿಮ ಕ್ಷಣದಲ್ಲಿ ಈ ಬೆಳಗಿನ ಜಾವ ಮಡಿಕೇರಿಯ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ಹೋಮ - ಹವನದೊಂದಿಗೆ ಪೂಜೆ ಸಲ್ಲಿಸಿದ ಬಳಿಕ ಅಲ್ಲಲ್ಲಿ ಪ್ರವಾಸದೊಂದಿಗೆ ಮೈಸೂರಿಗೆ ತೆರಳಿ ತಮ್ಮ ಮತದಾನ ಮಾಡಿದರು.
ಬಹಿಷ್ಕøತರ ಓಲೈಕೆ : ತಿತಿಮತಿ ಬಳಿ ದೇವರಪುರ ಹಾಡಿಯ ಮತದಾರರು ಚುನಾವಣೆ ಬಹಿಷ್ಕರಿಸುವದಾಗಿ ಪ್ರಕಟಿಸಿದ್ದರಾದರೂ; ಸಂಬಂಧಪಟ್ಟ ಅಧಿಕಾರಿಗಳು ಜನರ ಮನವೊಲಿಸಿ ಮತದಾನದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿದ್ದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದರು.
ವಿಶೇಷ ವ್ಯವಸ್ಥೆ: ನಿನ್ನೆ ಹಾಗೂ ಇಂದು ಸಂಜೆಗತ್ತಲೆ ನಡುವೆ ಮಳೆ ಇತ್ಯಾದಿ ಅಡ್ಡಿ ಆತಂಕಗಳ ನಡುವೆಯೂ, ಜಿಲ್ಲಾಡಳಿತದಿಂದ ಎಲ್ಲ ರೀತಿ ಸುರಕ್ಷತಾ ಕ್ರಮದೊಂದಿಗೆ ವಿಶೇಷ ಚೇತನರು ಹಾಗೂ ವೃದ್ಧರಾಗಿ ತಮ್ಮ ಹಕ್ಕು ಚಲಾಯಿಸಲು ಗಾಲಿಕುರ್ಚಿ (ವ್ಹೀಲ್‍ಚೇರ್) ಸಹಿತ ಅನುಕೂಲ ಕಲ್ಪಿಸಲಾಗಿತ್ತು. ಮತಗಟ್ಟೆ ಸಿಬ್ಬಂದಿ ಮತ್ತು ಸಂಬಂಧಿಸಿದ ಮತಯಂತ್ರ ಸಾಗಾಟಕ್ಕೆ ನಿಯೋಜಿಸಿದ ವಾಹನ ಚಾಲಕರಿಗೆ ತಾವುಗಳಿದ್ದ ಮತಗಟ್ಟೆಗಳಲ್ಲಿ ಮತದಾನ ವ್ಯವಸ್ಥೆ ಮಾಡಲಾಗಿತ್ತು.
ಹೊಸಮುಖಗಳ ಉತ್ಸಾಹ: ಬಹುತೇಕ ಜಿಲ್ಲೆಯ ಮತಗಟ್ಟೆಗಳಲ್ಲಿ ಮೊದಲ ಬಾರಿ ಮತದಾನದಲ್ಲಿ ಪಾಲ್ಗೊಂಡ ಮತದಾರರು, ತಮ್ಮ ಹಕ್ಕು ಚಲಾಯಿಸುವದರೊಂದಿಗೆ ಚುನಾವಣೆಯ ವೇಳೆ ಉತ್ಸಾಹ ತೋರಿದರು. ‘ಶಕ್ತಿ’ ಅಭಿಪ್ರಾಯ ಬಯಸಿದಾಗ ದೇಶಕ್ಕಾಗಿ ನಮ್ಮ ಹಕ್ಕು ಚಲಾಯಿಸುತ್ತಿರುವದಾಗಿ ಹರ್ಷದ ನಗೆ ಬೀರಿದರು.
ಕಾರ್ಯಕ್ರಮಗಳ ನಡುವೆ ಕರ್ತವ್ಯ: ಮಡಿಕೇರಿ ನಗರವೂ ಸೇರಿದಂತೆ ವಿವಿಧೆಡೆಗಳಲ್ಲಿ ವಿವಾಹ ಸಮಾರಂಭ, ದೇವರ ಉತ್ಸವ, ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರೂ ಜಿಲ್ಲೆಯ ಬಹುತೇಕ ಮತದಾರರು ದೇಶಕ್ಕಾಗಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದರು.
ಅನಿವಾಸಿಗಳ ಪಾಲ್ಗೊಳ್ಳುವಿಕೆ: ಇಂದಿನ ಮತದಾನದಲ್ಲಿ ವಿದೇಶದಲ್ಲಿ ನೆಲೆಸಿರುವ ಅನೇಕ ಭಾರತೀಯರು, ಸ್ವದೇಶಕ್ಕೆ ಮರಳುವದರೊಂದಿಗೆ ತಾಯ್ನಾಡಿನ ಭವಿಷ್ಯದ ಸರಕಾರಕ್ಕಾಗಿ ತಮ್ಮ ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನ ಮಾಡಿದ್ದು, ಗಮನ ಸೆಳೆಯಿತು.
ಕಾರ್ಯಕರ್ತರ ಪಾತ್ರ : ಜಿಲ್ಲೆಯ ಗ್ರಾಮೀಣ ಮತಗಟ್ಟೆಗಳಲ್ಲಿ ಬಹುತೇಕ ಬಿಜೆಪಿ ಕಾರ್ಯಕರ್ತರು ಎದುರಾದರೆ, ಪಟ್ಟಣ ಪ್ರದೇಶಗಳಲ್ಲಿ ಬಿಜೆಪಿ ಮಾತ್ರವಲ್ಲದೆ, ಮೈತ್ರಿ ಅಭ್ಯರ್ಥಿ ಪರವಾಗಿ ಕಾಂಗ್ರೆಸ್ - ಜೆಡಿಎಸ್ ಬೆಂಬಲಿಗರು ಪ್ರತ್ಯೇಕ ಗುಂಪುಗಳಲ್ಲಿ ಮತದಾರರ ಸೆಳೆಯುವಲ್ಲಿ ತೊಡಗಿಸಿಕೊಂಡಿದ್ದ ದೃಶ್ಯ ಎದುರಾಯಿತು.
ಪ್ರವಾಸಿಗಳಿಗೆ ಕೊರತೆಯಿರಲಿಲ್ಲ: ಕೊಡಗು ಜಿಲ್ಲೆಯಾದ್ಯಂತ ಬಹುತೇಕ ವಾಣಿಜ್ಯೋದ್ಯಮಿಗಳು ಮತ್ತು ವರ್ತಕರು ಚುನಾವಣೆಗಾಗಿ ದೈನಂದಿನ ವಹಿವಾಟು ಸ್ಥಗಿತಗೊಳಿಸಿ ಮತದಾನಕ್ಕೆ ಆದ್ಯತೆ ನೀಡಿದರೆ, ಜಿಲ್ಲಾ ಕೇಂದ್ರ ಸಹಿತ ಎಲ್ಲೆಡೆ ಪ್ರವಾಸಿಗರ ದಂಡಿಗೆ ಕೊರತೆ ಇರಲಿಲ್ಲ.
ಜಿಲ್ಲಾಡಳಿತಕ್ಕೆ ಪ್ರಶಂಸೆ : ಈ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನದೊಂದಿಗೆ ಅಚ್ಚುಕಟ್ಟು ವ್ಯವಸ್ಥೆಗಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಜಿ.ಪಂ. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕೆ ಲಕ್ಷ್ಮೀಪ್ರಿಯ ಸೇರಿದಂತೆ ಇಡೀ ಜಿಲ್ಲಾಡಳಿತ ವ್ಯವಸ್ಥೆ ಜನವಲಯದಿಂದ ಪ್ರಶಂಸೆಗೆ ಪಾತ್ರಗೊಂಡ ಸನ್ನಿವೇಶ ಎದುರಾಯಿತು.