ಸೋಮವಾರಪೇಟೆ, ಏ. 19: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಕ್ರೈಸ್ತ ಬಾಂಧವರು ಗುಡ್‍ಫ್ರೈಡೆ ದಿನವನ್ನು ಭಕ್ತಿಪೂರ್ವಕವಾಗಿ ಆಚರಿಸಿದರು. ಇಲ್ಲಿನ ಜಯವೀರಮಾತೆ ದೇವಾಲಯದ ಧರ್ಮಗುರು ಎಂ.ರಾಯಪ್ಪ ಅವರ ನೇತೃತ್ವದಲ್ಲಿ ಕ್ರೈಸ್ತಬಾಂಧವರು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.

ಜೇಸಿ ವೇದಿಕೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಮಕ್ಕಳು ಮಹಿಳೆಯರಾಧಿಯಾಗಿ ಚರ್ಚ್‍ವರೆಗೆ ಮೆರವಣಿಗೆ ನಡೆಸಿದರು.

ಧರ್ಮಗುರು ಎಂ. ರಾಯಪ್ಪ ಮಾತನಾಡಿ, ಎರಡು ಸಾವಿರ ವರ್ಷಗಳು ಕಳೆದರೂ, ಪ್ರಸ್ತುತವಾಗಿರುವ ಯೇಸುಕ್ರಿಸ್ತನ ಶಾಂತಿ, ಪ್ರೀತಿ, ಸಹನೆಯ ಸಂದೇಶದಿಂದಲೇ ಗುಡ್‍ಫ್ರೈಡೆಗೆ ಜಾತಿ ಧರ್ಮ ಮೀರಿದ ಮನ್ನಣೆ ಮಹÀತ್ವ ದೊರಕುತ್ತಿದೆ. ವಿಶ್ವದ ಶಾಂತಿ ಹಾಗು ಸಹೋದರತೆಯ ಭಾವದಲ್ಲಿ ಗುಡ್‍ಫ್ರೈಡೇಯ ಸಾರ್ಥಕತೆ ಇದೆ ಎಂದರು. ಧರ್ಮಗುರು ಟೆನ್ನಿ ಕುರಿಯನ್, ಚರ್ಚ್ ಕಾರ್ಯದರ್ಶಿ ಶೀಲಾ ಡಿಸೋಜ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

ಅಬ್ಬೂರುಕಟ್ಟೆಯಲ್ಲಿ: ಅಬ್ಬೂರುಕಟ್ಟೆಯ ಚರ್ಚ್‍ನಲ್ಲೂ ಗುಡ್‍ಫ್ರೈಡೇ ಆಚರಿಸಲಾಯಿತು. ಅಬ್ಬೂರುಕಟ್ಟೆ ಜಂಕ್ಷನ್‍ನಿಂದ ಚರ್ಚ್‍ವರೆಗೆ ಶಿಲುಬೆಯ ಹಾದಿ ಯಾತ್ರೆ ನಡೆಸಲಾಯಿತು. ಧರ್ಮಗುರು ಜೋಸೆಫ್ ಅಲೆಕ್ಸಾಂಡರ್ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಪ್ರಮುಖರಾದ ಎಸ್.ಎಂ. ಡಿಸಿಲ್ವಾ, ಸಿಂಥಿಯಾ ಡಿಸಿಲ್ವಾ, ಕ್ಲೀಟಸ್, ಖಾಲಿಸ್ತಾ ಡಿಸಿಲ್ವಾ ಸೇರಿದಂತೆ ನೂರಾರು ಮಂದಿ ಹಾಜರಿದ್ದರು.

ಮಡಿಕೇರಿ : ಶುಭ ಶುಕ್ರವಾರದ ಪ್ರಯುಕ್ತ ಉಪವಾಸ ವ್ರತಾಚರಣೆಯ ಮೂಲಕ ಕ್ರೈಸ್ತ ಬಾಂಧವರು ಚೆಟ್ಟಳ್ಳಿಯ ಸಂತ ಸಬಾಸ್ಟಿನ್ ಚರ್ಚ್‍ನಲ್ಲಿ ಶ್ರದ್ಧಾಭಕ್ತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಇದಕ್ಕೂ ಮೊದಲು ಚರ್ಚ್‍ನ ಧರ್ಮಗುರು ಸ್ಟೀಫನ್ ಜೋಸೆಫ್ ಅವರ ನೇತೃತ್ವದಲ್ಲಿ ಒಂಟಿಯಂಗಡಿಯಿಂದ ಚೆಟ್ಟಳ್ಳಿಯವರೆಗೆ ಮೆರವಣಿಗೆ ನಡೆಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು. ಯೇಸುಕ್ರಿಸ್ತನು ಶಿಲುಬೆಗೇರಿದ ದಿನವನ್ನು ‘ಶುಭ ಶುಕ್ರವಾರ’ವೆಂದು ಆಚರಿಸಲಾಗುತ್ತಿದ್ದು, ಶಾಂತಿ ಮತ್ತು ಕ್ಷಮೆಯ ಸಂದೇಶವನ್ನು ಧರ್ಮಗುರುಗಳು ನೀಡಿದರು.

ಚರ್ಚ್‍ನ ಅಧ್ಯಕ್ಷ ಡೆನ್ನಿ ಬರೋಸ್, ಪ್ರಮುಖರಾದ ಸವೇರ, ಸ್ಟೀಫನ್, ಸಜಿಜೇಕಪ್, ಪ್ಯಾಟ್ರಿಕ್ ಲೋಬೋ, ರಮ್ಮಿ ಸರ್ವೊ, ಥೋಮಸ್, ಪೈಲಿ ಮತ್ತಿತರರು ಮೆರವಣಿಗೆ ಮತ್ತು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ಹಣ್ಣು ಹಂಪಲು ವಿತರಣೆ

ವೀರಾಜಪೇಟೆ: ಪ್ರಭು ಯೇಸು ಕ್ರಿಸ್ತರನನು ಶಿಲುಬೆಗೆರಿಸಿದ ನಂತರ ಮರು ಜನ್ಮ ಪಡೆದು ಭಕ್ತರಿಗೆ ಹರಸಿದ ದಿನವನ್ನು ಇಂದು ಸಂತ ಅನ್ನಮ್ಮ ದೇವಾಲಯ ದೀನ ಬಂಧುಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಅಚರಿಸಲಾಯಿತು.

ಸಂತ ಅನ್ನಮ್ಮ ದೇವಾಲಯ ಮತ್ತು ಮತ ಬಾಂಧವರು ಸರ್ಕಾರಿ ಅಸ್ಪತ್ರೆಯಲ್ಲಿ ದಾಖಲಾದ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಮಲಬಾರ್ ರಸ್ತೆಯಲ್ಲಿರುವ ಅನ್ವರುಲ್ ಹುದ ಅನಾಥ ಆಶ್ರಮ ಮತ್ತು ಹೆಗ್ಗಳ ಗ್ರಾಮದಲ್ಲಿರುವ ಅನಾಥ ಅಶ್ರಮ, ವಿಶೇಷವಾಗಿ ಪಟ್ಟಣ ಪಂಚಾಯಿತಿಯ ಸಫಾಯಿ ಕಾರ್ಮಿಕರಿಗೆ ಹಣ್ಣು ಹಂಪಲು ವಿತರಿಸಿ ಗುಡ್ ಫ್ರೈಡೆ ಅಚರಿಸಿಕೊಂಡರು.

ಕಾರ್ಯಕ್ರಮದಲ್ಲಿ ಮಾತನಾಡಿದ ದೇವಾಲಯ ಧರ್ಮಗುರು ಫಾ. ರೋಷನ್ ಬಾಬು ಅವರು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಶ್ರೀಘ್ರದಲ್ಲಿ ಗುಣಮುಖವಾಗಿ ಹಿಂದಿರುಗಲು ದೇವರಲ್ಲಿ ಪ್ರಾರ್ಥನೆ ಮಾಡಬೇಕು; ದೇವರ ನಾಮದಲ್ಲಿ ಮಾಡುವ ಸೇವೆಯು ದೇವರಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳಿದರು.

ದೇವಾಲಯದ ಕನ್ಯಾಸ್ತ್ರಿಗಳಾದ ಜಾನೇಟ್, ಫಿಲೋಮಿನಾ, ಮತ್ತು ಅನ್ನಾ ಮೇರಿ, ಪ್ರಮುಖರಾದ ಮರ್ವೀನ್ ಲೊಬೊ, ಸ್ಟೇನ್ಲಿ, ಜೋಕಿಮ್ ರೋಡ್ರಿಗ್ರಸ್ ಮತ್ತು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ. ಹಾಗೂ ಸಿಬ್ಬಂದಿಗಳು ಹಾಜರಿದ್ದರು.