ಮಡಿಕೇರಿ, ಏ.18: ಇಂದು ನಡೆದ ಲೋಕಸಭಾ ಚುನಾವಣೆ ವೇಳೆ ಉತ್ತರ ಕೊಡಗಿನ ಗ್ರಾಮೀಣ ಪ್ರದೇಶದಲ್ಲಿರುವ ಪುಷ್ಪಗಿರಿ ತಪ್ಪಲಿನ ಗ್ರಾಮಗಳಾದ ಹಮ್ಮಿಯಾಲ, ಮುಟ್ಲು, ಸೂರ್ಲಬ್ಬಿ, ಬೆಟ್ಟದಳ್ಳಿ, ಶಾಂತಳ್ಳಿ ಹಾಗೂ ಇತರೆಡೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಕಾನೂನು ಸುವ್ಯವಸ್ಥೆ ಸಲುವಾಗಿ ಸ್ವತಃ ಕುಶಾಲನಗರ ಡಿವೈಎಸ್ಪಿ ದಿನಕರ ಶೆಟ್ಟಿ ನೇತೃತ್ವದಲ್ಲಿ ಪೊಲೀಸ್ ಗಸ್ತು ಕಂಡು ಬಂತು.ಬೆಳಿಗ್ಗೆಯಿಂದಲೇ ಆಯಾ ಗ್ರಾಮೀಣ ನಿವಾಸಿಗಳು ಸ್ವಯಂ ಪ್ರೇರಿತರಾಗಿ ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸಿ ಹಿಂತೆರಳುತ್ತಿದ್ದ ಸಾಮಾನ್ಯ ದೃಶ್ಯ ಅಲ್ಲಲ್ಲಿ ಎದುರಾಯಿತು. ಈ ಬಾರಿಯ ಚುನಾವಣೆಯಲ್ಲಿ ಎಲ್ಲಿಯೂ ಯಾವದೇ ರಾಜಕೀಯ ಮೇಲಾಟಕ್ಕೆ ಅವಕಾಶವಿರಲಿಲ್ಲ.ಎಲ್ಲ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ, ರಕ್ಷಣಾ ತಂಡ ಸಹಿತ ಪ್ರತಿಯೊಬ್ಬರು ಮತದಾರರೊಂದಿಗೆ ಸೌಜನ್ಯಪೂರ್ವಕವಾದ ಸ್ಪಂದನ ಗೋಚರಿಸಿದರೆ, ಸಾರ್ವಜನಿಕರು ಸೇರಿದಂತೆ ರಾಜಕೀಯ ಮಂದಿ ಕೂಡ ಚುನಾವಣೆ ಆಯೋಗದ ನಿರ್ದೇಶನದಂತೆ ಮತಗಟ್ಟೆ ಬಳಿ 100 ಮೀ ಹಾಗೂ 200 ಮೀ. ಅಂತರದಿಂದ ಹೊರಗೆ ವಿನಯಪೂರ್ವಕವಾಗಿ ನಡೆದುಕೊಳ್ಳುತ್ತಿದ್ದ ಬೆಳವಣಿಗೆ ಎದುರಾಯಿತು.

‘ಶಕ್ತಿ’ ಪಯಣಿಸಿದ ಹಾದಿಯುದ್ದಕ್ಕೂ ಆಯಾ ಮತಗಟ್ಟೆ ವ್ಯಾಪ್ತಿಯ ಮತದಾರರ ಹೊರತಾಗಿ ರಾಜಕೀಯ ರಂಗು ಎದುರಾಗಲಿಲ್ಲ; ಬದಲಾಗಿ ಶಾಂತಳ್ಳಿ ಮತಗಟ್ಟೆ ಬಳಿ ಮಾತ್ರ ಬಿಜೆಪಿ ಮುಖಂಡ ಎಸ್.ಜಿ. ಮೇದಪ್ಪ ಹಾಗೂ ಕಾರ್ಯಕರ್ತರು; ಕಾಂಗ್ರೆಸ್ ಮುಖಂಡ ಕೆ.ಎಂ. ಲೋಕೇಶ್; ಬೆಂಬಲಿಗರು ಪ್ರತ್ಯೇಕ ಗುಂಪುಗಳಲ್ಲಿ ನಿರ್ದಿಷ್ಟ ಅಂತರ ಕಾಯ್ದುಕೊಂಡು ಮತಯಾಚನೆಯಲ್ಲಿ ಗೋಚರಿಸಿದರು.

(ಮೊದಲ ಪುಟದಿಂದ) ಸಾಮಾನ್ಯ ಮತದಾರರ ನಡುವೆ ಸೂರ್ಲಬ್ಬಿ ಮತಗಟ್ಟೆಯಲ್ಲಿ 82ರ ವೃದ್ಧ ನಾಪಂಡ ಬೆಳ್ಯಪ್ಪ, ಶಾಂತಳ್ಳಿಯಲ್ಲಿ 83ರ ಅಜ್ಜಿ ಗಂಗಮ್ಮ ಮತದಾನಕ್ಕೆ ಆಗಮಿಸಿ ಇತರರಿಗೆ ಸ್ಪೂರ್ತಿಯಾದ್ದರು. ಇದೇ ಮತಗಟ್ಟೆಯಲ್ಲಿ ಪ್ರಗತಿ ಎಂಬಾಕೆ ಪ್ರಥಮ ಬಾರಿ ಮತ ಚಲಾಯಿಸಿದರು.

ಮಾದಾಪುರ ಮತಗಟ್ಟೆಯಲ್ಲಿ ಕೂಡ ಮೂವತ್ತೊಕ್ಲುವಿನ ಸಹೋದರಿಯರಾದ ನಿರೀಕ್ಷಾ ಹಾಗೂ ನಿರೀಷ್ಮಾ ತಮ್ಮ ತಾಯಿಯೊಂದಿಗೆ ಬಂದು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಿದ್ದು ಗೋಚರಿಸಿತು. ಒಟ್ಟಿನಲ್ಲಿ ಪುಷ್ಪಗಿರಿ ತಪ್ಪಲು ಬೆಟ್ಟ ಸಾಲಿನ ಗ್ರಾಮಗಳ ಮತದಾರರು ಉತ್ಸಾಹದಿಂದ ಯುವ ಮತದಾರರ ಸಹಿತ ಇಳಿ ವಯಸ್ಸಿನವರು ಮತದಾನದಲ್ಲಿ ತೊಡಗಿದ್ದ ದೃಶ್ಯ ‘ಶಕ್ತಿ’ಗೆ ಎದುರಾಯಿತು. ಗರ್ವಾಲೆಯಂತಹ ಗ್ರಾಮೀಣ ಮಂದಿ ಮತದಾನದಲ್ಲಿ ಪಾಲ್ಗೊಳ್ಳಲು ತಮಗೆ ಹೆಮ್ಮೆಯಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು. ಈ ಮತಗಟ್ಟೆಯಲ್ಲಿ ವಿಶೇಷ ಚೇತನ ಯುವಕ ಕೂಡ ಪೋಷಕರ ಸಹಕಾರದಿಂದ ಅಮೂಲ್ಯ ಹಕ್ಕು ಚಲಾಯಿಸಿದ್ದು ಕಂಡುಬಂತು.