ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಹುತೇಕ ಸರಕಾರಿ ಬಸ್‍ಗಳೆಲ್ಲವೂ ಚುನಾವಣಾ ಕರ್ತವ್ಯಕ್ಕೆ ಬಳಸಲ್ಪಟ್ಟ ಕಾರಣ ಮಡಿಕೇರಿ ಸರಕಾರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಬಸ್‍ಗಳ ಕೊರತೆಯಿಂದಾಗಿ ಪರದಾಡುತ್ತಿದ್ದ ದೃಶ್ಯ ಕಂಡುಬಂತು.ಸ್ಥಳಕ್ಕೆ ತೆರಳಿದ್ದ ‘ಶಕ್ತಿ’ಯೊಂದಿಗೆ ಸಾಕಷ್ಟು ಪ್ರಯಾಣಿಕರು ಈ ಕುರಿತು ಅಳಲು ತೋಡಿಕೊಂಡರು. ‘ಸುಳ್ಯ, ಮಂಗಳೂರು, ಮೈಸೂರು ಮತ್ತಿತರ ಕಡೆಗಳಿಗೆ ತೆರಳಲು ಪ್ರತಿನಿತ್ಯ ನಿಗದಿತ ಸಮಯಕ್ಕೆ ಬರುತ್ತಿದ್ದ ಬಸ್‍ಗಳು ಇಂದು ಬಂದಿಲ್ಲ. ಇದರಿಂದಾಗಿ ತಮ್ಮ ಊರುಗಳಿಗೆ ತೆರಳಲು ಸಾಧ್ಯವಾಗದೆ (ಮೊದಲ ಪುಟದಿಂದ) ಕಾದು ಸುಸ್ತಾಗಿದ್ದೇವೆ’ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು. ಪ್ರಯಾಣಿಕರಿಗೆ ಉಂಟಾದ ಸಮಸ್ಯೆ ಕುರಿತು ‘ಶಕ್ತಿ’ ಸಾರಿಗೆ ಸಿಬ್ಬಂದಿಯನ್ನು ವಿಚಾರಿಸಿದಾಗ ‘ಚುನಾವಣೆ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಬಸ್‍ಗಳು ಚುನಾವಣಾ ಕಾರ್ಯಕ್ಕೆ ನಿಯೋಜಿಸಲ್ಪಟ್ಟಿವೆ. ಇದರಿಂದಾಗಿ ಶೇ. 100 ರಲ್ಲಿ 20 ರಷ್ಟು ಬಸ್‍ಗಳು ಮಾತ್ರ ಇಂದು ಪ್ರಯಾಣಿಕರಿಗಾಗಿ ಸಂಚರಿಸುತ್ತಿವೆ. ಬಸ್‍ಗಳು ಬರುವ ಸಮಯದಲ್ಲಿ ವ್ಯತ್ಯಾಸ ಉಂಟಾಗುತ್ತಿದೆಯಾದರೂ ಇರುವ ಬಸ್‍ಗಳಲ್ಲೇ ಪ್ರಯಾಣಿಕರನ್ನು ಕಳುಹಿಸಲು ವ್ಯವಸ್ಥೆ ಮಾಡಲಾ ಗುತ್ತಿದೆ’ ಎಂದು ಸ್ಪಷ್ಟನೆ ನೀಡಿದರು. ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಹಲವಾರು ಅಂಗಡಿಗಳು ಮುಚ್ಚಲ್ಪಟ್ಟು ‘ಬಂದ್’ನಂತೆ ಭಾಸವಾಯಿತು.