ಮಡಿಕೇರಿ, ಏ. 18: ಕಳೆದ ಆಗಸ್ಟ್ ತಿಂಗಳು ಕೊಡಗಿನ ಪಾಲಿಗೆ ಕರಾಳ ಅಧ್ಯಾಯ.., ಆ ಮಳೆಗಾಲದಲ್ಲಿ ಸಂಭವಿಸಿದ ದುರಂತ ಯಾರಿಂದಲೂ ಮರೆಯಲಾಗದು. ಜಲಪ್ರಳಯ, ಭೂಕುಸಿತಕ್ಕೆ 840 ಕುಟುಂಬಗಳು ತಮ್ಮ ನೆಲೆಯನ್ನು ಕಳೆದುಕೊಂಡು ಬೀದಿಗೆ ಬಿದ್ದರು. ಸಹೃದಯ ದಾನಿಗಳ ನೆರವು ಮಹಾಪೂರದಂತೆ ಹರಿದು ಬಂದವು. ಸರಕಾರ ಕೂಡ ಸಂತ್ರಸ್ತರ ಬೆನ್ನಿಗೆ ಸಹಾಯ ಹಸ್ತವಾಗಿ ನಿಂತಿತು.., ನೆಲೆ ಕಳೆದುಕೊಂಡವರಿಗೆ ಸೂರು ಕಲ್ಪಿಸಲು ಯೋಜನೆ ರೂಪಿಸಿತು. ಆದರೆ ದುರಂತ ನಡೆದು 7 ತಿಂಗಳುಗಳು ಕಳೆದರೂ ಇನ್ನು ಕೂಡ ಸೂರು ದೊರಕದೆ ಸಂತ್ರಸ್ತರಾದವರು ಎಲ್ಲೆಲ್ಲೋ ಚದುರಿ ಹೋಗಿದ್ದಾರೆ. ಬದುಕಿನ ನೆಲೆ ಕಳೆದುಕೊಂಡಿರುವ ದುಃಖ, ನೋವಿನಲ್ಲಿದ್ದರೂ ದೇಶದ ಹಿತರಕ್ಷಣೆಗಾಗಿ ಇಂದು ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು.ಆಗಸ್ಟ್‍ನಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತಕ್ಕೆ ಮಕ್ಕಂದೂರು, ಗಾಳಿಬೀಡು, ಮಾದಾಪುರ, ಮದೆನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಮಂದಿ ಮನೆ, ತೋಟ, ಗದ್ದೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿ ವಿವಿಧೆಡೆಗಳಲ್ಲಿ ಬಾಡಿಗೆ ಮನೆಗಳಲ್ಲಿ ನೆಲೆಸಿದ್ದಾರೆ. ಯಾರು ಎಲ್ಲಿ, ಯಾವ ಮನೆಯಲ್ಲಿ ವಾಸವಿದ್ದಾರೆಂಬದೂ ಕೂಡ ಸರಿಯಾಗಿ ತಿಳಿದಿಲ್ಲ. ಆದರೂ ಬಹುತೇಕ ಎಲ್ಲರೂ ಇಂದು ತಮ್ಮ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿದರು. ಜಿಲ್ಲೆಯ ಇತರ ಮತಗಟ್ಟೆಗಳಿಗೆ ಹೋಲಿಸಿದರೆ ಪ್ರಕೃತಿ ವಿಕೋಪಕ್ಕೆ ಒಳಗಾದ ಮತಗಟ್ಟೆಗಳಲ್ಲೇ ಹೆಚ್ಚಿನ ಮತದಾನ ಆಗಿರುವದು ಮತದಾರರಿಗೆ ದೇಶದ ಮೇಲಿರುವ ರಾಷ್ಟ್ರಭಕ್ತಿಗೆ ಸಾಕ್ಷಿಯಾಗಿದೆ.
(ಮೊದಲ ಪುಟದಿಂದ) ಅತಿ ಹೆಚ್ಚು ಭೂಕುಸಿತಕ್ಕೆ ಒಳಗಾಗಿ ನಷ್ಟ ಉಂಟಾಗಿರುವ ಪ್ರದೇಶಗಳೆಂದರೆ ಮಕ್ಕಂದೂರು, ಹೆಮ್ಮೆತ್ತಾಳು, ಉದಯಗಿರಿ, ಹೆಬ್ಬೆಟ್ಟಗೇರಿ, ಕಾಲೂರು, ಎರಡನೇ ಮೊಣ್ಣಂಗೇರಿ, ಜೋಡುಪಾಲ, ಕಾಂಡನಕೊಲ್ಲಿ, ಮುಕ್ಕೋಡ್ಲು ಗ್ರಾಮಗಳು, ಮಕ್ಕಂದೂರು ಹಾಗೂ ಹೆಮ್ಮೆತ್ತಾಳು ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು.
ಮನೆ ಕಳೆದುಕೊಂಡು ಬೇರೆ ಕಡೆಗಳಲ್ಲಿ ನೆಲೆಸಿರುವವರಿಗೆ ಕಂದಾಯ ಇಲಾಖೆ, ಪಂಚಾಯಿತಿ ವತಿಯಿಂದ ಮತ ಗುರುತಿನ ಚೀಟಿಗಳನ್ನು ತಲಪಿಸುವ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಅವರುಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮತದಾನಕ್ಕೆ ಆಗಮಿಸುವಂತೆ ತಿಳಿಸಲಾಗಿತ್ತು. ಹಾಗಾಗಿ ಮತ ಚೀಟಿ ದೊರಕದೇ ಇದ್ದು, ಮತದಾನಕ್ಕೆ ಬಂದವರಿಗೆ ಮತಗಟ್ಟೆಯ ಬಳಿ ಕಂದಾಯ ಇಲಾಖೆ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಅವರುಗಳ ಹೆಸರು ಹುಡುಕಿ ಗುರುತಿನ ಚೀಟಿಯನ್ನು ನೀಡುವ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಂದೂರು ಮತಗಟ್ಟೆಯಲ್ಲಿ ಶೇ. 80, ಹೆಮ್ಮೆತ್ತಾಳು ಮತಗಟ್ಟೆಯಲ್ಲಿ ಶೇ. 78 ರಷ್ಟು ಮತದಾನವಾಗಿದೆ. ಮದೆ ಗ್ರಾ.ಪಂ. ವ್ಯಾಪ್ತಿಯ ಎರಡನೇ ಮೊಣ್ಣಂಗೇರಿಯಲ್ಲಿಯೂ ವಿವಿಧೆಡೆ ನೆಲೆಸಿರುವ ಸಂತ್ರಸ್ತ ಮತದಾರರನ್ನು ಮತಗಟ್ಟೆಗೆ ವಾಹನಗಳ ಮೂಲಕ ಕರೆತಂದು ಮತದಾನದ ಅವಕಾಶ ನೀಡಲಾಗಿದೆ. ಇಲ್ಲಿಯೂ ಶೇ. 87 ರಷ್ಟು ಮತದಾನವಾಗಿದೆ. ಕಾಲೂರಿನಲ್ಲೂ ಉತ್ತಮ ಮತದಾನವಾಗಿದ್ದು, ಅದರಲ್ಲೂ ಮಹಿಳೆಯರು ಅತ್ಯಂತ ಆಸಕ್ತಿಯಿಂದ ಮತದಾನದಲ್ಲಿ ಪಾಲ್ಗೊಂಡಿದ್ದುದು ಕಂಡು ಬಂದಿತು.
ಹೆಬ್ಬೆಟ್ಟಗೇರಿಯಲ್ಲಿ ಕೂಡ ಉತ್ತಮ ರೀತಿಯ ಮತದಾನವಾಗಿದೆ. ಮಾದಾಪುರ ವ್ಯಾಪ್ತಿಯ ಕಾಂಡನಕೊಲ್ಲಿಯಲ್ಲಿ ಶೇ. 76 ರಷ್ಟು ಮತದಾನವಾಗಿದೆ. ಇನ್ನುಳಿದಂತೆ ವಿಕೋಪಕ್ಕೆ ತುತ್ತಾದ ಗ್ರಾಮಗಳಲ್ಲಿ ಉತ್ತಮ ಮತದಾನವಾಗಿದೆ.