ಸೋಮವಾರಪೇಟೆ, ಏ. 19: ತಾಲೂಕಿನ ಅಂಕನಳ್ಳಿ ಸಮೀಪದ ಶ್ರೀ ಕ್ಷೇತ್ರ ಮನೆಹಳ್ಳಿ ತಪೋವನದಲ್ಲಿ ವಾರ್ಷಿಕ ಮಹಾ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಗಿದೆ.
ತಾ. 21ರವರೆಗೆ ಸನ್ನಿಧಿಯಲ್ಲಿ ಆಜ್ಞಾಧಾರಕ ಶ್ರೀ ತಪೋಕ್ಷೇತ್ರ ಅಭಿವೃದ್ಧಿ ಸೇವಾ ಟ್ರಸ್ಟ್ ಹಾಗೂ ಶ್ರೀ ಗುರುಸಿದ್ದವೀರಸ್ವಾಮಿಯವರ ದಿವ್ಯ ಪ್ರಕಾಶದಲ್ಲಿ ಶ್ರೀ ಸ್ವಾಮಿಯವರ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಪ್ರಾರಂಭಗೊಂಡಿದ್ದು, ಮಠದ ಆವರಣದಲ್ಲಿ ಧ್ವಜಾರೋಹಣ ನಡೆಸುವ ಮೂಲಕ ಕ್ಷೇತ್ರಾಧ್ಯಕ್ಷರಾದ ಶ್ರೀ ಮಹಾಂತ ಶಿವಲಿಂಗಸ್ವಾಮಿಗಳು ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಮನೆಹಳ್ಳಿ ಮಠದ ಕ್ಷೇತ್ರದಲ್ಲಿ ಏಳನೇ ವರ್ಷದ ಜಾತ್ರೋತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ನೂರಾರು ಭಕ್ತಾದಿಗಳು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ತಾ. 21ರ ಸಂಜೆ ರಥೋತ್ಸವದ ನಂತರ ಪ್ರಸಕ್ತ ವರ್ಷದ ಜಾತ್ರೋತ್ಸವಕ್ಕೆ ತೆರೆ ಬೀಳಲಿದೆ.
ಇಂದು ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಜೆ 6.30 ಗಂಟೆಗೆ ಶ್ರೀ ಸ್ವಾಮಿಯವರಿಗೆ ಕಂಕಣ ಧಾರಣೆ, ಮಹಾಮಂಗಳಾತಿ ನಡೆಯಿತು. ತಾ. 20 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಮದನಾಧಿ ಅನಘ ನಿರಂಜನ ಜಂಗಮ ಪೂಜೆ, ಸಂಜೆ 6.30 ಗಂಟೆಗೆ ಶ್ರೀ ಸ್ವಾಮಿಯವರ ಸೂರ್ಯ ಮಂಡಲೋತ್ಸವ, ರಾತ್ರಿ 8.30 ಗಂಟೆಗೆ ದಾಸೋಹ ನಡೆಯಲಿದೆ ಎಂದು ಕ್ಷೇತ್ರಾಧ್ಯಕ್ಷರಾದ ಮಹಾಂತ ಶಿವಲಿಂಗ ಸ್ವಾಮೀಜಿಗಳು ತಿಳಿಸಿದ್ದಾರೆ.
ತಾ. 21ರಂದು ಬೆಳಿಗ್ಗೆ 5 ಗಂಟೆಗೆ ಶ್ರೀ ಕ್ಷೇತ್ರನಾಥ ವೀರಭದ್ರೇಶ್ವರಸ್ವಾಮಿಯವರ ಪ್ರೀತ್ಯರ್ಥ ದುಗ್ಗುಳ ಹಾಗೂ ಅಗ್ನಿಕೊಂಡೋತ್ಸವ ಸೇವೆ ನಡೆಯಲಿದೆ. 7 ಗಂಟೆಗೆ ಶ್ರೀ ಸ್ವಾಮಿಯವರ ಸಣ್ಣ ಚಂದ್ರ ಮಂಡಲೋತ್ಸವ, 9 ಗಂಟೆಗೆ ಶ್ರೀ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. 11 ಗಂಟೆಗೆ ಶ್ರೀ ಪ್ರಸನ್ನ ತಪೋವನೇಶ್ವರಿ ಅಮ್ಮನವರ ಪ್ರೀತ್ಯರ್ಥ ಮುತ್ತೈದೆ ಸೇವೆ ‘ಸುಮಂಗಲಿಯವರಿಗೆ ಮಡಿಲು ತುಂಬುವ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ದಾಸೋಹ ಸೇವೆ, 1 ಗಂಟೆಗೆ ಶ್ರೀ ಸ್ವಾಮಿಯವರ ದೊಡ್ಡ ಚಂದ್ರಮಂಡಲೋತ್ಸವ, ಸಂಜೆ 5.30 ಗಂಟೆಗೆ ಶ್ರೀ ಸ್ವಾಮಿಯವರ ಪ್ರಾಕಾರ ಪಲ್ಲಕ್ಕಿ ಉತ್ಸವದೊಂದಿಗೆ ಶ್ರೀ ಸ್ವಾಮಿಯವರ ರಥೋತ್ಸವಕ್ಕೆ ಭಿಜಯಂಗೈವದು. ಸಂಜೆ 6.30 ಗಂಟೆಗೆ ಶ್ರೀ ಸ್ವಾಮಿಯವರ ಮಹಾರಥೋತ್ಸವ, 8 ಗಂಟೆಗೆ ಶ್ರೀ ವೃಷಭಲಿಂಗೇಶ್ವರಸ್ವಾಮಿಯವರ ಸನ್ನಿದಾನದಲ್ಲಿ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ. ಸ್ವಾಮೀಜಿಗಳೊಂದಿಗೆ ಶ್ರೀ ಕ್ಷೇತ್ರ ತಪೋವನದ ಕಾರ್ಯದರ್ಶಿ ಕೆ.ಹೆಚ್. ಮಂಜುನಾಥ್, ಪದಾಧಿಕಾರಿಗಳಾದ ಚಂದ್ರಕಾಂತ್, ಓಂಕಾರಮೂರ್ತಿ, ರಾಜಶೇಖರ್ ಸೇರಿದಂತೆ ಇತರರು ಜಾತ್ರಾ ಮಹೋತ್ಸವದ ಉಸ್ತುವಾರಿ ವಹಿಸಿದ್ದಾರೆ.
ಅತ್ತೂರು ದುರ್ಗಾಪರಮೇಶ್ವರಿ ಉತ್ಸವ
ಗೋಣಿಕೊಪ್ಪ ವರದಿ : ಅತ್ತೂರು ಶ್ರೀ ದುರ್ಗಾಪರಮೇಶ್ವರಿ ದೇವರ ವಾರ್ಷಿಕ ಉತ್ಸವ ತಾ. 20 ರಿಂದ (ಇಂದಿನಿಂದ) 24 ರ ವರೆಗೆ ನಡೆಯಲಿದೆ. 20 ರಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮ, ಮಹಾಪೂಜೆ, ಸಂಜೆ 6 ಗಂಟೆಗೆ ಕೊಡಿಮರ ಶಾಸ್ತ್ರ, ಅಂದಿ ಬೆಳಕು ನಡೆಯಲಿದೆ.
21 ರಂದು 11 ಗಂಟೆಗೆ ಸಂಕಲ್ಪ ಇರ್‍ಬೊಳಕ್, ಸಂಜೆ 6 ಗಂಟೆಗೆ ತಂತ್ರಸುತ್ತು ಬಲಿ ಮೂರ್ತಿ ಪ್ರದಕ್ಷಿಣೆ, ಅಂದಿ ಬೆಳಕು, ಸಾಮೂಹಿಕ ಅಲಂಕಾರ ಪೂಜೆ. 22 ರಂದು ಬೆಳಗ್ಗೆ 5.30 ಗಂಟೆಗೆ ದೇವರ ದರ್ಶನ, ಸಂಜೆ 6 ಗಂಟೆಗೆ ತಂತ್ರಸುತ್ತು, ದೇವರ ಪ್ರದಕ್ಷಿಣೆ, ರಂಗಪೂಜೆ ನಡೆಯಲಿದೆ.
23 ರಂದು ಬೆಳಗ್ಗೆ 5.30 ಗಂಟೆಗೆ ದೇವರ ದರ್ಶನ, 6.30 ಗಂಟೆಗೆ ಉಷಾಪೂಜೆ, ಸಂಜೆ 6 ಗಂಟೆಗೆ ತಂತ್ರಸುತ್ತು, ದೇವರ ಪ್ರದಕ್ಷಿಣೆ, ವಸಂತ ಪೂಜೆ. 24 ರಂದು ಮಧ್ಯಾಹ್ನ ಮಹಾಪೂಜೆ, ಸಂಜೆ 4.30 ಗಂಟೆಗೆ ದೇವರ ಮೆರವಣಿಗೆ ಅವಭೃತ ಸ್ನಾನ, ಸಂಜೆ 7.30 ಗಂಟೆಗೆ ನೃತ್ಯ ಸುತ್ತು ನಡೆಯಲಿದೆ. ಪ್ರತಿದಿನ ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಹೆಗ್ಗಳ ಅಯ್ಯಪ್ಪ ಭಗವತಿ ಉತ್ಸವ
ವೀರಾಜಪೇಟೆ: ವೀರಾಜಪೇಟೆ ಬಳಿಯ ಹೆಗ್ಗಳ ಗ್ರಾಮದ ಅಯ್ಯಪ್ಪ ಭಗವತಿ ದೇವರ ವಾರ್ಷಿಕೋತ್ಸ್ಸವವು 20 ರಿಂದ (ಇಂದಿನಿಂದ) 24ರ ವರೆಗೆ ನಡೆಯಲಿದೆ. ತಾ. 13 ರಂದು ದೇವರ ಕಟ್ಟು ಬಿದ್ದಿದ್ದು ತಾ. 20 ರಂದು ಪಟ್ಟಣಿ, 21 ರಂದು ದೊಡ್ಡ ಹಬ್ಬ, 24 ರಂದು ಶುದ್ದ ಕಳಸ ನಡೆಯಲಿದೆ. ಹಬ್ಬದ ಎಲ್ಲ ದಿನಗಳಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ನಾರಮನೇಶ್ವರ ಉತ್ಸವ
ಬಾಳೆಲೆ: ತಾ. 20 ರಂದು (ಇಂದು) ಮತ್ತು 21 ರಂದು ಬಾಳೆಲೆಯ ನಾರಮನೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ನಡೆಯಲಿದೆ. 20 ರಂದು ಸಂಜೆ 4 ಗಂಟೆಗೆ ದೇವರ ಭಂಡಾರ ಇಳಿಸುವದು, 6 ಗಂಟೆಗೆ ವನದುರ್ಗಿಗೆ ಪೂಜೆ, 7 ಗಂಟೆಗೆ ದೇವರ ಜಳಕ, ಪುಷ್ಪಾರ್ಚನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಲಿದೆ. 21 ರಂದು ಬೆಳಿಗ್ಗೆ 10.30 ಗಂಟೆಗೆ ಗಣಪತಿ ಹೋಮ, ರುದ್ರಾಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಹನುಮ ಜಯಂತಿ ಆಚರಣೆ
ವೀರಾಜಪೇಟೆ: ವೀರಾಜಪೇಟೆಯ ಛತ್ರಕೆರೆ ಬಳಿಯಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಹನುಮ ಜಯಂತಿ ಅಂಗವಾಗಿ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಆಂಜನೇಯ ಸ್ವಾಮಿಗೆ ಅಲಂಕಾರ ಪೂಜೆ, ವಿಶೇಷ ಪೂಜೆ, ಅಭಿಷೇಕಗಳು ನಡೆದು ಮದ್ಯಾಹ್ನ 1 ಗಂಟೆಗೆ ಮಹಾಪೂಜಾ ಸೇವೆ ಜರುಗಿತು. ಬಳಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಹಾಜರಿದ್ದರು. ವೀರಾಜಪೇಟೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಂದಲೂ ಭಕ್ತಾದಿಗಳು ಆಗಮಿಸಿದ್ದರು.