ವೀರಾಜಪೇಟೆ, ಏ. 18: ಲೋಕಸಭೆಗೆ ಇಂದು ನಡೆದ ಚುನಾವಣೆಯಲ್ಲಿ ಕೊಡಗು - ಮೈಸೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ವ್ಯಾಪ್ತಿಯ ವೀರಾಜಪೇಟೆ ಕ್ಷೇತ್ರದಲ್ಲಿ ಒಂದೆರಡು ಕಡೆಗಳಲ್ಲಿ ಮತಯಂತ್ರಗಳಲ್ಲಿ ಕಂಡುಬಂದಿದ್ದ ಲೋಪ-ದೋಷಗಳನ್ನು ಹೊರತುಪಡಿಸಿದರೆ ಮತದಾನ ಪ್ರಕ್ರಿಯೆ ಶಾಂತ ರೀತಿಯಲ್ಲಿ ನಡೆದಿದೆ.ಪೊನ್ನಂಪೇಟೆ : 17ನೇ ಲೋಕಸಭೆ ಚುನಾವಣೆಯು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ದ.ಕೊಡಗಿನಲ್ಲಿ ಗುರುವಾರ ಶಾಂತಿಯುತವಾಗಿ ನಡೆಯಿತು. ಬೆಳಗಿನಿಂದಲೇ (ಮೊದಲ ಪುಟದಿಂದ) ಆರಂಭಗೊಂಡ ಮತದಾನ ಬಿರುಸಿನಿಂದ ನಡೆಯಿತಾದರೂ, ಮಧ್ಯಾಹ್ನದ ನಂತರ ಕೆಲವೆಡೆ ನಿಧಾನಗತಿಯ ಮತದಾನ ಕಂಡುಬಂತು. ಮತ್ತೆ ಕೆಲವು ಮತಗಟ್ಟೆಗಳಲ್ಲಿ ಮಧ್ಯಾಹ್ನ 3 ರ ನಂತರ ಬಿರುಸಿನ ಮತದಾನ ನಡೆಯಿತು. ಇದರಿಂದಾಗಿ ಈ ಮತಗಟ್ಟೆಗಳಲ್ಲಿ ಮತದಾರರ ಸರತಿಯ ಸಾಲು ಕಂಡುಬಂತು. ಎಲ್ಲಿಯೂ ಯಾವದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.ಬುಧವಾರ ಸಂಜೆ ಈ ಭಾಗದಲ್ಲಿ ಮಳೆಯಾಗಿದ್ದು, ಕೆಲವೆಡೆ ವಿದ್ಯುತ್ ಕೈಕೊಟ್ಟ ಪರಿಣಾಮ ಮತಗಟ್ಟೆ ಸಿಬ್ಬಂದಿಗಳು ಸಮಸ್ಯೆ ಎದುರಿಸಬೇಕಾಯಿತು. ಆದರೂ ಗುರುವಾರ ಬೆಳಿಗ್ಗೆ ನಿಗದಿತ ಸಮಯದಲ್ಲಿ ಮತದಾನಕ್ಕೆ ವ್ಯವಸ್ಥೆ ಕಲ್ಪಿಸುವಲ್ಲಿ ಯಶಸ್ವಿಯಾದರು. ಟಿ.ಶೆಟ್ಟಿಗೇರಿಯ ಮತಗಟ್ಟೆ ಸಂಖ್ಯೆ 257ರಲ್ಲಿ ಬೆಳಿಗ್ಗೆ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದರೂ ಅದು ಇತ್ಯರ್ಥಗೊಂಡು ಇಲ್ಲಿ ಮತದಾನ ಆರಂಭಗೊಂಡಾಗ 30 ನಿಮಿಷ ತಡವಾಯಿತು. ಇದರಿಂದಾಗಿ ಮತದಾರರ ಸಾಲು ಉದ್ದಗೊಳ್ಳತೊಡಗಿತು. ನಂತರ ಬೆಳಿಗ್ಗೆ 7.30ಕ್ಕೆ ಇಲ್ಲಿ ಮತದಾನ ಸಹಜ ಸ್ಥಿತಿಯಲ್ಲಿ ಆರಂಭಗೊಂಡಿತ್ತು. ತಿತಿಮತಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಬಲ ಪಾಶ್ರ್ಚದ ಸಂಖ್ಯೆ 204 ಮತಗಟ್ಟೆಯಲ್ಲಿ ಸಿಬ್ಬಂದಿಗಳ ನಿಧಾನಗತಿಯ ಪ್ರಕ್ರಿಯೆಗಳಿಂದಾಗಿ ಮತದಾರರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಯಿತು. ಇದರಿಂದಾಗಿ ಈ ಮತಗಟ್ಟೆಯಲ್ಲಿ ಮಧ್ಯಾಹ್ನದವರೆಗೂ ಮಂದಗತಿಯ ಮತದಾನ ಕಂಡುಬಂದಿತು.

ಟಿ.ಶೆಟ್ಟಿಗೇರಿಯ ಮತ್ತೊಂದು ಮತಗಟ್ಟೆಯಾದ ಅಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ. 259ರಲ್ಲಿ ಮಧ್ಯಾಹ್ನದ ವೇಳೆ ವಿ.ವಿ. ಪ್ಯಾಟ್ ಯಂತ್ರ ಅರ್ಧ ಗಂಟೆ ಸಮಯ ತನ್ನ ಕಾರ್ಯ ಸ್ಥಗಿತಗೊಳಿಸಿದ ಕಾರಣ ಕೆಲ ಕಾಲ ಗೊಂದಲ ನಿರ್ಮಾಣ ವಾಯಿತು. ಅಲ್ಲದೆ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆ ಏರುತ್ತಾ ಬಂದ ಕಾರಣ ಮತಗಟ್ಟೆ ಅಧಿಕಾರಿಗಳ ಮೇಳೆ ಒತ್ತಡ ಹೆಚ್ಚಾಗತೊಡಗಿತು. ಬಳಿಕ ಸೆಕ್ಟರ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದು ವಿ.ವಿ. ಪ್ಯಾಟ್ ಯಂತ್ರ ಬದಲಿಸಿ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಿದ್ದರಿಂದ ಮತದಾರರು ಮತ್ತು ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಯಿತು.

ಪಟ್ಟಣ ಪ್ರದೇಶಗಳಾದ ಗೋಣಿಕೊಪ್ಪಲು, ಪೊನ್ನಂಪೇಟೆ, ಶ್ರೀಮಂಗಲ, ಕುಟ್ಟ ಭಾಗಗಳ ಬಹುತೇಕ ಮತಗಟ್ಟೆಗಳಲ್ಲಿ ಮಧ್ಯಾಹ್ನದವರೆಗೆ ಜನದಟ್ಟಣೆ ಅಧಿಕವಾಗಿತ್ತು. ಪಟ್ಟಣ ಭಾಗದ ಜನರು ಬೆಳಿಗ್ಗೆಯೇ ಮತದಾನ ಮಾಡಲು ಮತಗಟ್ಟೆಗೆ ಧಾವಿಸುತ್ತಿದ್ದ ಕಾರಣ ಮತಗಟ್ಟೆಯಲ್ಲಿನ ಸಾಲು ಹೆಚ್ಚಾಗುತ್ತಿತ್ತು. ಕೆಲವು ಗ್ರಾಮೀಣ ಭಾಗದಲ್ಲೂ ಜನರು ಬೆಳಿಗ್ಗೆಯೇ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿ ಅವರವರ ಕೆಲಸಗಳಿಗೆ ಮರಳುತ್ತಿದ್ದರು. ಸರಕಾರಿ ಬಸ್ಸುಗಳು ಚುನಾವಣೆ ಕಾರ್ಯನಿಮಿತ್ತ ನಿಯೋಜನೆಗೊಂಡಿದ್ದರಿಂದ ಮೈಸೂರು ಕಡೆಗೆ ತೆರಳಬೇಕಿದ್ದ ಪ್ರಯಾಣಿಕರು ಗೋಣಿಕೊಪ್ಪಲುವಿನಲ್ಲಿ ತಾಸುಗಟ್ಟಲೆ ಕಾಯಬೇಕಾಯಿತು.

ವೀರಾಜಪೇಟೆ ತಾಲೂಕಿನ ರಾಜಕೀಯ ಪ್ರಮುಖರು ಕೂಡ ಸರತಿಯ ಸಾಲಿನಲ್ಲಿ ನಿಂತು ಮತದಾನ ಮಾಡಿದ ದೃಶ್ಯ ಕಂಡುಬಂತು. ಮಾಜಿ ಸಚಿವೆ ಸುಮಾವಸಂತ್ ಅವರು ಬೆಳಿಗ್ಗೆ ತಿತಿಮತಿಯ ಮಾದರಿ ಪ್ರಾಥಮಿಕ ಶಾಲೆಯ ಎಡಪಾಶ್ರ್ಚದ ಮತಗಟ್ಟೆ ಸಂಖ್ಯೆ.205 ರಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದರೆ, ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಸಿ.ಎಸ್. ಅರುಣ್ ಮಾಚಯ್ಯ ಅವರು ಮಾಯಮುಡಿಯ ಗ್ರಾ.ಪಂ. ಕಚೇರಿಯಲ್ಲಿನ ಮತಗಟ್ಟೆ ಯಲ್ಲಿ ಬೆಳಿಗ್ಗೆ 8.15ರ ಸಮಯದಲ್ಲಿ ಮತದಾನ ಮಾಡಿದರು. ಹಿರಿಯ ರಾದ ದೇವರಪುರದ ಎಂ.ಡಬ್ಲೂ. ಅಯ್ಯಪ್ಪ ಅವರು ತಮ್ಮ ಇಳಿ ವಯಸ್ಸಿನಲ್ಲಿಯೂ ಪುತ್ರನ ಸಹಾಯದೊಂದಿಗೆ ನೆಲ್ಲಿಕಾಡ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆಗೆ ತೆರಳಿ ಮತ ಹಾಕಿದರು. ಪ್ರತಿ ಚುನಾವಣೆಗೆ ಬೆಂಗಳೂರಿನಿಂದ ಬೆಳ್ಳೂರಿನ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದ ಹಿರಿಯ ಮುಖಂಡರಾದ ಮಾಜಿ ಶಾಸಕ ಎ.ಕೆ. ಸುಬ್ಬಯ್ಯ ಅವರು ಅನಾರೋಗ್ಯ ದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಮತದಾನದಲ್ಲಿ ಭಾಗವಹಿಸು ವದಕ್ಕೆ ಸಾಧ್ಯವಾಗಲಿಲ್ಲ.

ವೀರಾಜಪೇಟೆ ವಿಭಾಗದಲ್ಲಿ...

ವೀರಾಜಪೇಟೆ : ಇಂದು ನಡೆದ ಲೋಕಸಭಾ ಚುನಾವಣೆಯಲ್ಲಿ ವೀರಾಜಪೇಟೆ ವ್ಯಾಪ್ತಿಯಲ್ಲಿ ಬಹುತೇಕ ಶಾಂತಿಯುತ ಮತದಾನವಾಗಿದೆ. ಸಣ್ಣ ಪುಟ್ಟ ಲೋಪಗಳನ್ನು ಹೊರತು ಪಡಿಸಿದರೆ ಮತದಾನ ಶಾಂತಿಯುತ ವಾಗಿತ್ತು. ವೀರಾಜಪೇಟೆ ನಗರ ವ್ಯಾಪ್ತಿಯ ಮಲಬಾರು ರಸ್ತೆ, ಗೋಣಿಕೊಪ್ಪ ರಸ್ತೆಯ ಪಂಜರಪೇಟೆ, ಆರ್ಜಿ- ಬೇಟೋಳಿ ಗ್ರಾಮ, ಚರ್ಚ್ ಬೀದಿ, ತೆಲುಗರ ಬೀದಿ, ಅರಸುನಗರ ಮುಂತಾದೆಡೆಗಳಲ್ಲಿ ಬಿರುಸಿನ ಮತದಾನವಾಗಿದೆ. ಬೆಳಿಗ್ಗೆಯಿಂದಲೇ ಮತದಾರರು ಮತಗಟ್ಟೆ ಮುಂದೆ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬರುತ್ತಿತ್ತು. ಮಧ್ಯಾಹ್ನದ ವೇಳೆಗೇ ಬಹುತೇಕ ಮತಗಟ್ಟೆಗಳಲ್ಲಿ ಶೇ.50 ಸಮೀಪದಲ್ಲಿ ಮತದಾನವಾಗಿದ್ದು ಕಂಡು ಬಂದಿತ್ತು.

ವೀರಾಜಪೇಟೆ ಮುನ್ಸಿಪಲ್ ಶಾಲೆ, ಆರ್ಜಿ ಬೇಟೋಳಿ ಗ್ರಾಮಗಳ ಮತಗಟ್ಟೆ ಕೇಂದ್ರಗಳಲ್ಲಿ ಅಲ್ಪ ಸಂಖ್ಯಾತರು ಅಧಿಕವಾಗಿ ಆಸಕ್ತಿ ಯಿಂದ ಮತ ಚಲಾಯಿಸುತ್ತಿದ್ದರು. ವೀರಾಜಪೇಟೆ ಪಟ್ಟಣ ಸೇರಿದಂತೆÉ ಸುತ್ತಮುತ್ತಲಿನ ಮತಗಟ್ಟೆಗಳಲ್ಲಿ ಮತದಾರರು ಗುರುತಿನ ಚೀಟಿ ದೊರೆತಿಲ್ಲವೆಂದು ದೂರುತ್ತಿದ್ದರು.

ತಾಲೂಕಿನ ಗೋಣಿಕೊಪ್ಪ ,ಪೊನ್ನಂಪೇಟೆ, ಪಾಲಿಬೆಟ್ಟ , ಬಾಳೆಲೆ, ತಿತಿಮತಿ, ಚೆನ್ನಂಗಿ, ಸಿದ್ದಾಪುರ ಹಾಗೂ ಅಮ್ಮತ್ತಿಯಲ್ಲಿ ಬಿರುಸಿನ ಮತದಾನವಾಗಿದೆ. ತೋಟ ಕಾರ್ಮಿಕರು ಮತ್ತು ಬುಡಕಟ್ಟು ಮತದಾರರ ಕೇಂದ್ರವಾದ ತಿತಿಮತಿ, ನೆಲ್ಲಿಕಾಡು ಮುಂತಾದೆಡೆಗಳಲ್ಲಿ ಕಾರ್ಮಿಕರು ಕೆಲಸಕ್ಕೆ ರಜೆ ಹಾಕಿ ಮತದಾನದಲ್ಲಿ ಪಾಲ್ಗೊಂಡಿದ್ದರು. ಕೇರಳ- ಕರ್ನಾಟಕ ಗಡಿ ಪ್ರದೇಶವಾದ ಮಾಕುಟ್ಟ ಹಾಗೂ ಕುಟ್ಟದಲ್ಲಿ ಶಾಂತಿಯುತ ಮತದಾನಕ್ಕೆ ಎಲ್ಲಾ ಸಿದ್ಧತೆಗಳು ಕೈಗೊಳ್ಳಲಾಗಿದ್ದು ಅಲ್ಲಿಯೂ ಮತದಾನ ಶಾಂತಿಯುತವಾಗಿ ನಡೆದಿದೆ. ಗಿರಿಜನ ಹಾಡಿಗಳ ಬುಡಕಟ್ಟು ಜನಾಂಗದ ಮತದಾರರು ಮತದಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ವೀರಾಜಪೇಟೆ ಪಟ್ಟಣ

ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳಗಿನಿಂದಲೇ ಬಿರುಸಿನ ಮತದಾನ ಕಂಡುಬಂತು.

ಸಂತ ಅನ್ನಮ್ಮ ಶಾಲೆಯ “ಸಖಿ” ಮತದಾನ ಕೇಂದ್ರದಲ್ಲಿ ಬೆಳಗಿನ 7-30ರಿಂದಲೇ ಮತದಾರರು ಸರದಿ ಪ್ರಕಾರ ಮತದಾನ ಮಾಡಿದರು. ಆರ್ಜಿ ಬೇಟೋಳಿ ಗ್ರಾಮ ಪಂಚಾಯಿತಿಯ ಮಹಿಳಾ ಸಮಾಜದ ಮತಗಟ್ಟೆ ಸಂಖ್ಯೆ 165ರಲ್ಲಿ ಬೆಳಿಗ್ಗೆ 11-30 ರ ವೇಳೆಗೆ ಒಟ್ಟು 837 ಮತದಾರರ ಪೈಕಿ 442 ಮಂದಿ ಮತ ಚಲಾಯಿಸಿ ಶೇಕಡ 53.4 ಮತದಾನವಾಗಿತ್ತು.

ಕಲ್ಲುಬಾಣೆಯ ಬದ್ರಿಯಾ ಶಾಲೆಯ ಗುರುತಿನ ಚೀಟಿ ವಿತರಣೆಯಾಗದ್ದರಿಂದ ನೀರಸ ಮತದಾನಕ್ಕೆ ಕಾರಣವಾಗಿದೆ ಎಂದು ಕಲ್ಲುಬಾಣೆಯ ಮತದಾರರು ಹಾಗೂ ಕಾಂಗ್ರೆಸ್ ಪಕ್ಷದ ಅಶ್ರಫ್, ರಹೀಂ, ಆರ್ಜಿ ಗ್ರಾಮ ಪಂಚಾಯಿತಿಯ ಸದಸ್ಯ ಜಾಫರ್ ದೂರಿದರು. ಈ ಮತಗಟ್ಟೆಯ ಬಿ.ಎಲ್.ಒ ಮತದಾರರಿಗೆ ಸರಿಯಾದ ರೀತಿಯಲ್ಲಿ ಗುರುತಿನ ಚೀಟಿ ವಿತರಣೆ ಮಾಡಲಿಲ್ಲ. ಇದರಿಂದ ಇಂದು ಈ ಮತಗಟ್ಟೆಯಲ್ಲಿ ಒಂದು ಗಂಟೆಗಳ ಕಾಲ ಮತದಾನ ತಡವಾಗಿ ಆರಂಭವಾಗಿದೆ ಎಂದು ಆಕ್ಷೇಪ ಕೇಳಿಬಂತು.

ಕಲ್ಲುಬಾಣೆ ಮತಗಟ್ಟೆಯಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಾಂಗ್ರೆಸ್ ಪಕ್ಷದ ಕೆಲವು ಕಾರ್ಯಕರ್ತರು ಹಾಗೂ ಬಿಎಲ್‍ಒ ಇತರ ಚುನಾವಣಾಧಿಕಾರಿ ಗಳ ನಡುವೆ ಮಾತುಕತೆ ನಡೆದು ವಿಕೋಪಕ್ಕೆ ತೆರಳಿದಾಗ ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ಶಾಂತವಾಯಿತು.

ಸಂತ ಅನ್ನಮ್ಮ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಇಲ್ಲಿನ ಪಟ್ಟಣದ ರುಬೀನಾಬಾನು ಎಂಬುವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದ್ದರೆ ಈಗ ಮತದಾರರ ಪಟ್ಟಿಯಲ್ಲಿಅವರ ಹೆಸರು ನಾಪತ್ತೆಯಾದುದರಿಂದ ಅವರಿಗೆ ಮತದಾನ ಮಾಡಲು ಮತಗಟ್ಟೆ ಅಧಿಕಾರಿ ಅವಕಾಶ ನೀಡಲಿಲ್ಲ. ವೀರಾಜಪೇಟೆ ವಿಭಾಗದ ಸಾಕಷ್ಟು ಮತಗಟ್ಟೆಗಳಲ್ಲಿ ಮತದಾರರ ಗುರುತಿನ ಚೀಟಿ ವಿತರಣೆಯಾಗದ್ದರಿಂದ ಗುರುತಿನ ಚೀಟಿ ಇಲ್ಲದ ಮತದಾರರನ್ನು ಹೊರಗೆ ಕಳುಹಿಸಬಹುದು ಎಂಬ ಭಯದಿಂದ ಕೆಲವರು ಮತಗಟ್ಟೆಗಳಿಗೆ ಹೋಗದೆ ಮತದಾನದಿಂದ ವಂಚಿತರಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅಶ್ರಫ್ ದೂರಿದರು.

ವೀರಾಜಪೇಟೆ ವಿಭಾಗದ ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ಅಂಗವಿಕಲರು ವಿಕಲಚೇತನರಿಗಾಗಿ ಮತಗಟ್ಟೆಗಳಲ್ಲಿ ಸ್ವಯಂ ಸೇವಕರು ಹಾಗೂ ವ್ಹೀಲ್‍ಛೇರ್‍ಗಳನ್ನು ಹೊಸದಾಗಿ ವ್ಯವಸ್ಥೆಗೊಳಿಸಲಾಗಿತ್ತು. ಎಲ್ಲಾ ಕೇಂದ್ರಗಳಲ್ಲಿ ಮಹಿಳಾ ಪೊಲೀಸರು, ಹೋಮ್ ಗಾರ್ಡ್‍ಗಳು ಸೇರಿದಂತೆ ಇತರ ಪೊಲೀಸರು ಬಂದೋಬಸ್ತ್‍ನಲ್ಲಿದ್ದರು.

ಗೋಣಿಕೊಪ್ಪ ವರದಿ

ದಕ್ಷಿಣ ಕೊಡಗಿನಲ್ಲಿ ಶಾಂತಿಯುತ ಮತದಾನವಾಗಿದೆ. ಬಹುತೇಕ ಬೂತ್‍ಗಳಲ್ಲಿ ಬೆಳಗ್ಗಿನಿಂದಲೇ ಮತದಾರರು ಸಾಲು ನಿಂತು ಮತ ಚಲಾಯಿಸಿದರು.

ಕಿರುಗೂರು ಮತಕೇಂದ್ರದಲ್ಲಿ ವಿಳಂಬವಾಗಿ ಮತದಾನವಾಯಿತು. ಬೆಳಗ್ಗೆ 7 ಗಂಟೆಗೆ ಕೇಂದ್ರಕ್ಕೆ ಆಗಮಿಸಿದರೂ ನಿಧಾನಗತಿಯ ಮತದಾನದಿಂದ 11 ಗಂಟೆವರೆಗೆ ಕಾಯುವ ಪರಿಸ್ಥಿತಿ ಎದುರಾಯಿತು. ಮತಯಂತ್ರ ನಿಧಾನವಾಗಿ ಕಾರ್ಯನಿರ್ವಹಿಸಿದ ಕಾರಣ ವಿಳಂಬವಾಯಿತು ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.

ತಿತಿಮತಿ, ಮಾಯಮುಡಿ, ದೇವರಪುರ ವ್ಯಾಪ್ತಿಯಲ್ಲಿ ಕಾಡಾನೆ ಸಮಸ್ಯೆ ಕಾರಣ ತಿತಿಮತಿ ಆರ್‍ಆರ್‍ಟಿ ತಂಡ ಮತದಾರರಿಗೆ ಬೆಂಗಾವಲು ಮೂಲಕ ಪ್ರೋತ್ಸಾಹ ನೀಡಿದರು. ಆರ್‍ಆರ್‍ಟಿ ತಂಡದ ಮುಖ್ಯಸ್ಥ ಸಂಜು ಸಂತೋಷ್ ಹಾಗೂ ಸಿಬ್ಬಂದಿ ವಾಹನದ ಮೂಲಕ ಮತದಾರರನ್ನು ಮತಗಟ್ಟೆಗೆ ಕರೆ ತರುವ ವ್ಯವಸ್ಥೆ ಮಾಡಿದರು.

ದೇವರಪುರ ದೇವರಕಾಡು ಹಾಡಿ ನಿವಾಸಿಗಳು ಮತದಾನದಿಂದ ದೂರವಿದ್ದ ಕಾರಣ ಅರಣ್ಯ ಇಲಾಖೆ ಸ್ಥಳದಲ್ಲಿ ಬೀಡು ಬಿಟ್ಟಿತ್ತು. ಕಾಡಾನೆ ಓಡಾಡುವ ಜಾಗವಾದ ಕಾರಣ ಹೆಚ್ಚು ಮುತುವರ್ಜಿ ವಹಿಸಿದ್ದರು. ಸಂಜೆ 5.30 ರವರೆಗೂ ಪಕ್ಷದ ಪ್ರಮುಖರು ಹಾಗೂ ಅಧಿಕಾರಿ ವರ್ಗ ಮತದಾನ ಮಾಡುವಂತೆ ಮನವೊಲಿಕೆ ನಡೆಸಿದ್ದು ಕಂಡು ಬಂತು.

ಕುರ್ಚಿ ಗ್ರಾಮದಲ್ಲಿ ಬುಧವಾರ ಕಾಡಾನೆ ದಾಳಿಗೆ ಒಳಗಾದ ಗಾಯಾಳು ಮಾರಾ ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾರಣ ಮತದಾನದಿಂದ ವಂಚಿತ ರಾದರು. ಗ್ರಾಮದಲ್ಲಿ ಅರಣ್ಯ ಇಲಾಖೆ ಕಾಡಾನೆಗಳಿಂದ ರಕ್ಷಿಸಲು ಮತದಾರರಿಗೆ ಪ್ರತ್ಯೇಕವಾಗಿ ರಕ್ಷಣೆ ನೀಡದಿದ್ದರೂ ಗ್ರಾಮಸ್ಥರು ಬಂದು ಮತ ಚಲಾವಣೆ ಮಾಡಿದರು.ಬೆಳಗ್ಗೆ ಹೆಚ್ಚು ಜನರು ಕುಟುಂಬ ಸಮೇತ ಮತದಾನದಲ್ಲಿ ಪಾಲ್ಗೊಂಡಿರುವದು ಕಂಡು ಬಂತು.

ಶ್ರೀಮಂಗಲ ವರದಿ

ಶ್ರೀಮಂಗಲ, ಟಿ.ಶೆಟ್ಟಿಗೇರಿ, ನಾಲ್ಕೇರಿ, ಬಿರುನಾಣಿ ಪಂಚಾಯಿತಿ ವ್ಯಾಪ್ತಿಗಳಲ್ಲಿಯೂ ಮತದಾರರು ತಮ್ಮ ಹಕ್ಕು ಚಲಾವಣೆಗಾಗಿ ಉತ್ಸಾಹ ದಿಂದಲೇ ತೊಡಗಿಸಿಕೊಂಡಿದ್ದರು.

ಯುವ ಮತದಾರರ ಉತ್ಸಾಹ

ವೀರಾಜಪೇಟೆ: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಯುವ ಮತದಾರರು ಹೊಸ ಹುರುಪಿನಿಂದ ಮತದಾನ ಮಾಡಿದ್ದು ಕಂಡುಬಂದಿತ್ತು ಮೊದಲ ಬಾರಿ ಚುನಾವಣೆಯಲ್ಲಿ ಮತದಾನದ ಮಾಡಿದ ಹುಮ್ಮನಸ್ಸಿ ನಿಂದ ಬಂದ ಯುವ ಮತದಾರರು ತಮ್ಮ ಹಕ್ಕು ಚಲಾವಣೆಯ ಸಂತಸದಲ್ಲಿದ್ದರು. ವೀರಾಜಪೇಟೆ ನಗರದಲ್ಲಿ ಲೋಕಸಭಾ ಚುನಾವಣೆಯ ಪ್ರಯುಕ್ತ ಒಟ್ಟು ನಗರದ ಸಂತ ಅನ್ನಮ್ಮ ಶಾಲೆ, ಪಂಜಾರ್ ಪೇಟೆ ಕುಶಾಲಪ್ಪ ಮೆಮೋರಿಯಲ್ ಅಂಗನವಾಡಿ ಕೇಂದ್ರ, ಮತ್ತು ದಖ್ಖನಿ ಮೊಹಲ್ಲ ಅಂಗನವಾಡಿ ಕೇಂದ್ರದಲ್ಲಿ ಪಿಂಕ್ ಬೂತ್ ಅಳವಡಿಕೆ ಮಾಡಲಾಗಿತ್ತು. ಚುನಾವಣಾ ಅಯೋಗವು ವಿಶೇಷ ಚೇತನರಿಗೆ ಆಟೋಗಳಲ್ಲಿ ಚುನಾವಣಾ ಕೇಂದ್ರಕ್ಕೆ ಪ್ರಯಾಣಿಸಿ ಮತದಾನ ಮಾಡಲು ಅನುಕೂಲ ಮಾಡಿಕೊಟ್ಟಿತ್ತು. ಇದರಿಂದ ಹಲವು ವಿಶೇಷ ಚೇತನರು ಮತ್ತು ವಯೋವೃದ್ಧರಿಗೆ ಉಪಯೋಗ ವಾಗಿತ್ತು. ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮೇರಿ ಮತಗಟ್ಟೆಯಲ್ಲಿ 90 ವರ್ಷ ಪ್ರಾಯದ ಬಡಕಂಡ ಪಾರ್ವತಿ ಅವರು ಮತ್ತು ಅಚ್ಚಮ್ಮ (82) ತಮ್ಮ ಮಗಳು ಮತ್ತು ಮೊಮ್ಮಕಳೊಂದಿಗೆ ಅಗಮಿಸಿ ಮತ ಚಲಾವಣೆ ಮಾಡಿದರು.

ವೀರಾಜಪೇಟೆ ನಗರದ ಗಾಂಧಿನಗರ ಬ್ಲಾಕ್ ನಲ್ಲಿ ಮತದಾರ ಪಟ್ಟಿಯಿಂದ ಮತದಾರರ ಹೆಸರು ತೆಗೆದುಹಾಕಿರುವ ಬಗ್ಗೆ ಮತದಾರರು ಅಕ್ರೋಶ ವ್ಯಕ್ತಪಡಿಸಿದರು, ಬೆಂಗಳೂರು ಮತ್ತು ಮಂಗಳೂರಿ ನಿಂದ ಅಗಮಿಸಿದ ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಇಲ್ಲದಿರುವ ಬಗ್ಗೆ ಚುನಾವಣಾಧಿಕಾರಿಗಳ ಮೇಲೆ ಕಿಡಿಕಾರಿದರು.