ಸೋಮವಾರಪೇಟೆ, ಏ.18: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಇಂದು ನಡೆದ ಮತದಾನ ಸೋಮವಾರಪೇಟೆಯಾದ್ಯಂತ ಶಾಂತಿಯುತವಾಗಿ ನಡೆಯಿತು. ಒಂದೆರಡು ಬೂತ್‍ಗಳಲ್ಲಿ ಮತ ಯಂತ್ರದ ದೋಷದಿಂದ ತಡವಾಗಿ ಮತದಾನ ಪ್ರಕ್ರಿಯೆ ಆರಂಭವಾಯಿತು.ಇಂದು ಬೆಳಿಗ್ಗೆ 6.30ಕ್ಕೆ ಮತಗಟ್ಟೆಯಲ್ಲಿ ಹಾಜರಿದ್ದ ಅಧಿಕಾರಿಗಳು ಹಾಗೂ ವಿವಿಧ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಮತ ಯಂತ್ರಗಳ ಕಾರ್ಯಕ್ಷಮತೆಯ ಪರಿಶೀಲನೆ ನಡೆಯಿತು. ನಂತರ 7 ಗಂಟೆಗೆ
(ಮೊದಲ ಪುಟದಿಂದ) ಸರಿಯಾಗಿ ಮತದಾನ ಆರಂಭವಾಯಿತು.ತಾಲೂಕಿನ ಗೌಡಳ್ಳಿ, ಮಸ ಗೋಡು-ತಣ್ಣೀರುಹಳ್ಳ, ತೋಳೂರುಶೆಟ್ಟಳ್ಳಿ ಮತಗಟ್ಟೆಗಳಲ್ಲಿ ಅಳವಡಿಸಲಾಗಿದ್ದ ಮತಯಂತ್ರಗಳು ದೋಷಪೂರಿತವಾಗಿದ್ದು, ಅರ್ಧ ಗಂಟೆಗೂ ಅಧಿಕ ಕಾಲ ಮತದಾನ ಮಾಡಲು ಸಾಧ್ಯವಾಗಲಿಲ್ಲ. ಮತದಾರರು ಮತಗಟ್ಟೆಯ ಹೊರಗೆ ಸರದಿಸಾಲಿನಲ್ಲಿ ನಿಂತು ಕಾಯುವಂತಾಯಿತು.ಬೆಳಗ್ಗೆ ಬೇಗನೇ ಮತಚಲಾಯಿಸಿ ಕೆಲಸ ಕಾರ್ಯಗಳಿಗೆ ತೆರಳಲು ಸಿದ್ಧತೆ ಕೈಗೊಂಡಿದ್ದ ಕೂಲಿಕಾರ್ಮಿಕರು 7 ಗಂಟೆಯ ವೇಳೆಗಾಗಲೇ ಮತಗಟ್ಟೆಯಲ್ಲಿ ಹಾಜರಿದ್ದರು. ಆದರೆ ಮತಯಂತ್ರದಲ್ಲಿ ದೋಷ ಕಂಡುಬಂದು ಮತದಾನಕ್ಕೆ ಅವಕಾಶ ಸಿಗದ ಹಿನ್ನೆಲೆ ತೊಂದರೆ ಅನುಭವಿಸಿದರು.ಮತದಾರರ ಅಸಮಾಧಾನ: ತಾಲೂಕಿನ ತೋಳೂರುಶೆಟ್ಟಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಿದ್ದ ಮತಯಂತ್ರದಲ್ಲಿ ದೋಷ ಕಂಡುಬಂದಿದ್ದರಿಂದ ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರು, ಮತಗಟ್ಟೆ ಅಧಿಕಾರಿಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಇವಿಎಂ ಯಂತ್ರದಲ್ಲಿ ಬ್ಯಾಟರಿ ಸಮಸ್ಯೆ ಕಂಡುಬಂದಿದ್ದರಿಂದ ಮತದಾನ ತಡವಾಯಿತು. ಇದರೊಂದಿಗೆ ಯಂತ್ರಕ್ಕೆ ಅಳವಡಿಸಿದ್ದ ವಿದ್ಯುತ್ ವಯರ್ ಕಾಲಿಗೆ ತಗುಲಿ ಆಗಾಗ್ಗೆ ಮತಯಂತ್ರದಲ್ಲಿ ದೋಷ ಉಂಟಾಗುತ್ತಿತ್ತು. ಇದರಿಂದ ಬೇಸತ್ತ ಸುಮಾರು 50ಕ್ಕೂ ಅಧಿಕ ಮಂದಿ ಮತದಾರರು ಮನೆಯತ್ತ ಹೆಜ್ಜೆ ಹಾಕಿದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ಬಿ.ಜೆ. ದೀಪಕ್ ಅವರು ದೂರವಾಣಿ ಮುಖಾಂತರ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ಮಾಹಿತಿ ಒದಗಿಸಿದರು. ನೂತನ ಇವಿಎಂ ಅಳವಡಿಸಲು ಸಾಧ್ಯವಿಲ್ಲ. ಜಿಲ್ಲೆಯಾದ್ಯಂತ ಈರ್ವರೇ ತಂತ್ರಜ್ಞರಿದ್ದು, ಸಂಜೆ 6 ಗಂಟೆಯ ಒಳಗೆ ಮತಗಟ್ಟೆ ಕೇಂದ್ರದ ಒಳಗಿರುವವರಿಗೆ ಮತದಾನಕ್ಕೆ ಅವಕಾಶ ಕಲ್ಪಿಸುವದಾಗಿ ಭರವಸೆ ನೀಡಿದರು.
ಅಷ್ಟರಲ್ಲಿ ಮತಯಂತ್ರದಲ್ಲಿ ಮತದಾನ ಪ್ರಾರಂಭವಾಯಿತು. ಇಷ್ಟೆಲ್ಲಾ ಗೊಂದಲಗಳ ನಡುವೆ ಮಧ್ಯಾಹ್ನದ ವೇಳೆಗೆ ಶೇ.35ರಷ್ಟು ಮತದಾನವಾಗಿದ್ದರೆ, ಮತಗಟ್ಟೆಯ ಒಳಗೆ 100ಕ್ಕೂ ಅಧಿಕ ಮಂದಿ ಮತದಾರರು ಸರತಿಯಲ್ಲಿ ನಿಂತಿದ್ದರು. ಆಗಾಗ್ಗೆ ಉಂಟಾಗುತ್ತಿದ್ದ ತಾಂತ್ರಿಕ ತೊಂದರೆಯ ನಡುವೆಯೂ ಮತದಾನ ನಡೆಯಿತು.
ಮತ ಚಲಾಯಿಸಲು ಒಂದೂವರೆ ಗಂಟೆ: ಇಲ್ಲಿನ ಬೇಳೂರು ರಸ್ತೆಯ ಬೂತ್ 65ರಲ್ಲಿ ಮತದಾನ ನಿಧಾನ ಗತಿಯಲ್ಲಿ ಸಾಗಿತು. ಪಟ್ಟಣದ ಹಲವಷ್ಟು ವಾರ್ಡ್‍ಗಳನ್ನು ಈ ಬೂತ್‍ಗೆ ಸೇರಿಸಿರುವದರಿಂದ 1400ಕ್ಕೂ ಅಧಿಕ ಮತದಾರರಿದ್ದು, ಮತ ಚಲಾಯಿಸಲು ಒಂದೂವರೆ ಗಂಟೆಗಳ ಕಾಲ ಮತಗಟ್ಟೆಯಲ್ಲಿ ಕಾಯುವಂತಾಯಿತು.
ಹಾನಗಲ್ಲು ಶೆಟ್ಟಳ್ಳಿ ಬೂತ್‍ನಲ್ಲಿ ಮಧ್ಯಾಹ್ನದ ವೇಳೆಗೆ ಶೇ. 76ರಷ್ಟು ಮತದಾನವಾಯಿತು. ಕಾನ್ವೆಂಟ್ ಶಾಲೆಯಲ್ಲಿ ತೆರೆದಿರುವ ಬೂತ್‍ನಲ್ಲಿ ಮಧ್ಯಾಹ್ನ 1 ಗಂಟೆಗೆ ಶೇ. 52, ಬೇಳೂರಿನಲ್ಲಿ ಶೇ.51, ತಣ್ಣೀರುಹಳ್ಳದಲ್ಲಿ ಶೇ. 65ರಷ್ಟು ಮತದಾನ ನಡೆಯಿತು.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕುಂಬೂರು ಶಾಲೆಯಲ್ಲಿ ತೆರೆದಿರುವ ಬೂತ್‍ನಲ್ಲಿ ಬೆಳಿಗ್ಗೆ 7 ಗಂಟೆಗೆ ಪ್ರಥಮವಾಗಿ ಮತ ಚಲಾಯಿಸಿದರು. ಇವರೊಂದಿಗೆ ಪತ್ನಿ ಶೈಲಾ, ಮಗಳು ಕ್ಷೀರ ಅವರುಗಳು ಜೊತೆಗೂಡಿದರು. ಮಾಜೀ ಸಚಿವ ಬಿ.ಎ. ಜೀವಿಜಯ ಅವರು ಬಿಳಿಗೇರಿ ಗ್ರಾಮದ ಬೂತ್‍ನಲ್ಲಿ ಪತ್ನಿ ಸರೋಜ ಅವರೊಂದಿಗೆ ಮತ ಚಲಾಯಿಸಿದರು. ಶಾಂತಳ್ಳಿಯಲ್ಲಿ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರುಗಳು ಮತದಾನ ಮಾಡಿದರು.
ಮತಗಟ್ಟೆಗಳ ಸುತ್ತಮುತ್ತ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತಯಾಚನೆಯಲ್ಲಿ ತೊಡಗಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಜಂಟಿಯಾಗಿ ಪ್ರಚಾರ ನಡೆಸಿದರೆ, ಬಿಜೆಪಿ ಕಾರ್ಯಕರ್ತರು ಪ್ರತ್ಯೇಕವಾಗಿದ್ದರು.
ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿದ್ದರೂ ಮಧ್ಯಾಹ್ನದ ವೇಳೆಗೆ ಬಿರುಸು ಕಂಡಿತು. ಮತಗಟ್ಟೆಗೆ ಆಗಮಿಸಿದ ಹಲವಷ್ಟು ಮಂದಿ ಮತದಾರರು ಗುರುತಿನ ಚೀಟಿ, ಆಧಾರ್ ಸೇರಿದಂತೆ ಇನ್ನಿತರ ಅಗತ್ಯ ದಾಖಲಾತಿಗಳನ್ನು ಮನೆಯಲ್ಲೇ ಬಿಟ್ಟು ಬಂದಿದ್ದರು. ಸರತಿ ಸಾಲಿನಲ್ಲಿ ನಿಂತು ಮತಗಟ್ಟೆ ಕೇಂದ್ರದೊಳಗೆ ತೆರಳಿದ ಸಂದರ್ಭ ಅಧಿಕಾರಿಗಳು ಗುರುತಿನ ಚೀಟಿ ಕೇಳುತ್ತಿದ್ದರು. ಇದರಿಂದಾಗಿ ವಾಪಸ್ ಬಂದು ಎರಡೆರಡು ಬಾರಿ ಮತಗಟ್ಟೆಗೆ ಹೋಗಬೇಕಾಯಿತು.
ಚುನಾವಣಾ ಸಿಬ್ಬಂದಿಗಳು ಮತದಾರರ ಗುರುತಿನ ಚೀಟಿಯನ್ನು ಮನೆ ಮನೆಗೆ ತಲಪಿಸುವ ಸಂದರ್ಭ ಅಗತ್ಯ ದಾಖಲಾತಿಗಳ ಬಗ್ಗೆ ಸಮರ್ಪಕವಾಗಿ ಮಾಹಿತಿ ನೀಡದೇ ಇರುವದರಿಂದ ಇಂತಹ ಗೊಂದಲ ಉಂಟಾಯಿತು. ದೂರದ ಊರುಗಳಿಂದ ದಾಖಲಾತಿ ಇಲ್ಲದೇ ಆಗಮಿಸಿದ್ದ ಮತದಾರರು ಮತದಾನ ಮಾಡದೇ ವಾಪಸ್ ತೆರಳಬೇಕಾಯಿತು.
ಸೋಮವಾರಪೇಟೆ ತಾಲೂಕಿನ 203 ಬೂತ್‍ಗಳ ಪೈಕಿ 12 ಸೂಕ್ಷ್ಮ, 13 ಅತೀ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿತ್ತು. ಕಳೆದ ಚುನಾವಣೆ ಸಂದರ್ಭ ಹರಗ ಬೂತ್‍ನ್ನು ನಕ್ಸಲ್ ಪೀಡಿತ ಎಂದು ಗುರುತಿಸಲಾಗಿದ್ದು, ಈ ಬಾರಿ ನಕ್ಸಲ್ ಪೀಡಿತ ಎಂಬದನ್ನು ಕೈಬಿಡಲಾಗಿತ್ತು.
ಒಟ್ಟಾರೆ ಒಂದೆರಡು ಬೂತ್‍ಗಳಲ್ಲಿ ಅಳವಡಿಸಿದ್ದ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಉಂಟಾಗಿದ್ದನ್ನು ಹೊರತುಪಡಿಸಿದರೆ ಉಳಿದಂತೆ ಗೊಂದಲ ರಹಿತ ಮತದಾನ ನಡೆಯಿತು.