ಮಡಿಕೇರಿ, ಏ. 18: ಹಾಕಿ ಕೂರ್ಗ್ ಸಂಸ್ಥೆಯ ವತಿಯಿಂದ ಈ ಬಾರಿ ಕಾಕೋಟುಪರಂಬುವಿನಲ್ಲಿ ಕೊಡವ ಕುಟುಂಬಗಳ ನಡುವೆ ಏರ್ಪಡಿಸಲಾಗಿರುವ ಚಾಂಪಿಯನ್ ಮತ್ತು ಚಾಂಪಿಯನ್‍ಶಿಪ್ ಟ್ರೋಫಿ ಕೌಟುಂಬಿಕ ಹಾಕಿ ಪಂದ್ಯಾಟ ತಾ. 20 ರಿಂದ (ನಾಳೆಯಿಂದ) ಆರಂಭಗೊಳ್ಳಲಿದೆ.

ತಾ. 20 ರಿಂದ ಮೇ 10 ರ ತನಕ ಈ ಪಂದ್ಯಾವಳಿ ಜರುಗಲಿದ್ದು, 149 ಕುಟುಂಬಗಳು ಭಾಗವಹಿಸಲಿವೆ. ಇದರೊಂದಿಗೆ ನಡೆಯಲಿರುವ ಇಲ್ಲಿಯವರೆಗೆ ನಡೆದಿರುವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಪ್ರಶಸ್ತಿ ಸುತ್ತಿಗೆ ಬಂದಿರುವ 10 ಪ್ರತ್ಯೇಕ ತಂಡಗಳಿಗೆ ಏರ್ಪಡಿಸಿರುವ ಚಾಂಪಿಯನ್ಸ್ ಲೀಗ್ ಪಂದ್ಯವೂ ಜರುಗಲಿದ್ದು, ಈ ಪಂದ್ಯಾವಳಿಗಾಗಿ ಕಾಕೋಟುಪರಂಬುವಿನಲ್ಲಿ ಅಗತ್ಯ ಸಿದ್ಧತೆಗಳು ನಡೆದಿವೆ. ಎರಡು ಮೈದಾನಗಳಲ್ಲಿ ಪಂದ್ಯಾಟ ನಡೆಯಲಿದ್ದು, ನಾಳೆಯಿಂದ ಹಾಕಿ ಕಲರವ ಆರಂಭವಾಗಲಿದೆ.

ತಾ. 20 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಾಕಿ ಕರ್ನಾಟಕದ ಗೌರವ ಕಾರ್ಯದರ್ಶಿ ಡಾ. ಅಂಜಪರವಂಡ ಬಿ. ಸುಬ್ಬಯ್ಯ, ಫೀ.ಮಾ. ಕಾರ್ಯಪ್ಪ - ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ, ಬೆಳೆಗಾರ ಮುದ್ದುರ ತಮ್ಮಯ್ಯ, ಹಾಕಿ ಕೂರ್ಗ್ ಸಂಸ್ಥೆಯ ಅಧ್ಯಕ್ಷ ಪೈಕೇರಿ ಕಾಳಯ್ಯ ಹಾಗೂ ಪಂದ್ಯಾವಳಿಯ ನಿರ್ದೇಶಕರಾದ ಮೊಳ್ಳೆರ ಸುಬ್ಬಯ್ಯ ಅವರುಗಳು ಭಾಗವಹಿಸಲಿದ್ದಾರೆ ಎಂದು ಹಾಕಿ ಕೂರ್ಗ್‍ನ ಹಿರಿಯ ಉಪಾಧ್ಯಕ್ಷ ಬಲ್ಯಾಟಂಡ ಪಾರ್ಥ ಚಂಗಪ್ಪ ತಿಳಿಸಿದ್ದಾರೆ. ಫೈನಲ್ ಪಂದ್ಯ ಮೇ 10 ರಂದು ಜರುಗಲಿದೆ.