ಕೂಡಿಗೆ, ಏ. 20: ಕರ್ನಾಟಕ ರಾಜ್ಯದಲ್ಲೇ ಪ್ರಥಮವಾಗಿ ಪ್ರಾರಂಭ ಗೊಂಡ ಕೂಡಿಗೆಯ ಕೃಷಿ ಕ್ಷೇತ್ರದ ಆವಣದಲ್ಲಿರುವ ಸರಕಾರಿ ಕ್ರೀಡಾ ಪ್ರೌಢಶಾಲೆಯಲ್ಲಿ ಹಾಕಿ ಕ್ರೀಡಾ ಪಟುಗಳಿಗೆ ಅನುಕೂಲವಾಗುವಂತೆ ಹಾಗೂ ಬಹುದಿನಗಳ ಬೇಡಿಕೆಯಾಗಿ ರುವ ಹಾಕಿ ಟರ್ಫ್ ಮೈದಾನದ ಕಾಮಗಾರಿಯು ಪ್ರಾರಂಭಗೊಂಡು ಏಳು ವರ್ಷ ಕಳೆದಿದೆ. ಶೇ. 90 ರಷ್ಟು ಕಾಮಗಾರಿ ನಡೆದು ಸರಕಾರ ದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ನೆಪದಲ್ಲಿ ಕಾಮಗಾರಿ ಸ್ಥಗಿತ ಗೊಂಡಿತ್ತು. ಇದೀಗ ಕಾಮಗಾರಿ ನಡೆಸಲು ಹಣ ಬಿಡುಗಡೆಯಾಗಿ ರಾಜ್ಯಮಟ್ಟದ ಮೇಲಧಿಕಾರಿಗಳಿಂದ ಗುತ್ತಿಗೆದಾರರನಿಗೆ ಸೂಚನೆ ಬಂದರೂ ಸಹ ಆಮೆಗತಿಯಲ್ಲಿ ಕಾಮಗಾರಿಯನ್ನು ನಡೆಸಲಾಗುತ್ತಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆದು ದೆಹಲಿಯ ಸಿನ್ಹೋ ಕೋಡ್ ಕಂಪೆನಿಯವರು ಟೆಂಡರ್ ಪಡೆದಿದ್ದು, ಟೆಂಡರ್ ಪಡೆದ ಸಂದರ್ಭ ವತಿಯಿಂದ ಅಂದಾಜು ರೂ. 4.5 ಕೋಟಿ ಮಂಜೂರಾಗಿದೆ. ಈ ಕಾಮಗಾರಿಯೂ ನಾಲ್ಕು ವರ್ಷಗಳ ನಂತರ ಹಾಕಿ ಟರ್ಫ್ ತಳಭಾಗಕ್ಕೆ ಡಾಂಬರೀಕರಣ ನಡೆದು, ಸ್ಥಗಿತಗೊಂಡಿದ್ದ ಕಾಮಗಾರಿ ಮತ್ತೆ ಪ್ರಾರಂಭವಾಗಿತ್ತು. ಈಗಾಗಲೇ ಇಟಲಿಯಿಂದ ತರಿಸಲಾಗಿರುವ ಕೃತಕ ಹುಲ್ಲಿನ ಹಾಸಿಗೆಯನ್ನು ಶೇ. 95 ರಷ್ಟು ಹಾಸಲಾಗಿದ್ದರೂ ಸಣ್ಣ ಮಟ್ಟದ ಕಾಮಗಾರಿಯನ್ನು ನಡೆಸಲು ಹಿಂದೇಟು ಹಾಕುತ್ತಿರುವದು ಕಂಡುಬರುತ್ತಿದೆ.
ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಹಾಕಿ ಅಭ್ಯಾಸ ಮಾಡುತ್ತಿರುವ ಈ ಶಾಲಾ ಆವರಣಕ್ಕೆ ಇದೀಗ ಹಾಕಿ ಟರ್ಫ್ (ಕೃತಕ ಹುಲ್ಲಿನ ಮೈದಾನ) ದೊರೆತಿದ್ದು, ಇಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಮೇಲ್ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಸಂದರ್ಭ ಹಾಕಿ ಟರ್ಫ್‍ನ ಅವಶ್ಯಕತೆ ಬಹು ಮುಖ್ಯವಾಗಿದೆ. ಇದೀಗ ಬಹುದಿನಗಳ ಬೇಡಿಕೆ ಈಡೇರಿ ದಂತಾಗುತ್ತಿದ್ದರೂ ಕಾಮಗಾರಿಯಲ್ಲಿ ಹಿನ್ನೆಡೆಯಾಗಿದೆ. ಈ ಮೈದಾನ ನಿರ್ಮಾಣಕ್ಕೆ ಇಲಾಖೆಯ ವತಿಯಿಂದ ಸ್ಥಳ ಹಾಗೂ ವ್ಯವಸ್ಥಿತ ಕಾಮಗಾರಿಯು ನಡೆಯಲು ಅನುಕೂಲ ಮಾಡಿ ಕೊಡಲಾಗಿದ್ದು, ಟರ್ಫ್ ಕಾಮಗಾರಿ ಯೂ ವ್ಯವಸ್ಥಿತವಾಗಿ ಹಾಗೂ ಉತ್ತಮವಾಗಿ ನಡೆಸಿ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಬೇಕೆಂಬದು ಈ ವ್ಯಾಪ್ತಿಯ ಗ್ರಾಮಸ್ಥರ ಬಹುದಿನಗಳ ಕೋರಿಕೆಯಾಗಿದೆ.
ಅದೇ ರೀತಿಯಲ್ಲಿ ಸರಕಾರ ಮತ್ತು ಕ್ರೀಡಾ ಇಲಾಖೆ ಹಂತ ಹಂತವಾಗಿ ಕಾಮಗಾರಿಗೆ ಹಣ ಬಿಡುಗಡೆ ಮಾಡುವ ಮೂಲಕ ಹಾಕಿ ಕ್ರೀಡಾ ಕಲಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಹಾಗೂ ಅಂತರರಾಷ್ಟ್ರೀಯ ಮಟ್ಟದ ತಂತ್ರಜ್ಞಾನದ ವ್ಯವಸ್ಥೆಯಲ್ಲಿ ಉತ್ತಮ ತಾಂತ್ರೀಕತೆಯೊಂದಿಗೆ ಹಾಕಿ ಟರ್ಫ್ ಅನ್ನು ಹಾಕಲು ಸೂಚಿಸ ಲಾಗಿತ್ತು. ಆದರೆ, ಈಗ ಶೇ.90 ಭಾಗ ಕಾಮಗಾರಿ ಮುಗಿದಿದ್ದು, ಹಾಕಿ ಟ್ರರ್ಫ್‍ನ ಸುತ್ತಲು ಸ್ಪಿಂಕ್ಲರ್ ನೀರಿನ ವ್ಯವಸ್ಥೆ ಮತ್ತು ಜಿಲ್ಲೆಯಲ್ಲಿ ಹೆಚ್ಚು ಮಳೆ ಬೀಳುವದರಿಂದ ಮಳೆ ನೀರು ಸುಲಲಿತವಾಗಿ ಹೊರ ಹೋಗುವ ವ್ಯವಸ್ಥೆಯ ಕಾಮಗಾರಿ, ಹಾಕಿ ಟರ್ಫ್ ಸುತ್ತಲು ಟೈಲ್ಸ್ ಅಳವಡಿಕೆ ಮತ್ತು ಇನ್ನುಳಿದ ಸಣ್ಣಪುಟ್ಟಣ ಕಾಮಗಾರಿ ಗಳು ಆಗಬೇಕಾಗಿದೆ.
ಖಾಲಿ ಟರ್ಫ್ ಹಾಕಿ ಎರಡು ತಿಂಗಳೇ ಕಳೆದರೂ ಇದುವರೆಗೂ ಇದರತ್ತ ಗುತ್ತಿಗೆದಾರ ಗಮನಹರಿಸಿಲ್ಲ. ಇದೇ ರೀತಿ ಗುತ್ತಿಗೆದಾರ ಮತ್ತು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಕಾಮಗಾರಿ ಪ್ರಾರಂಭಗೊಂಡು ಏಳು ವರ್ಷಗಳೇ ಕಳೆದರೂ ಪೂರ್ಣಗೊಳ್ಳುವ ಹಂತಕ್ಕೆ ತಲಪಿಲ್ಲ.
ಜಿಲ್ಲೆಯ ಕ್ರೀಡಾಶಾಲೆಯ ವಿದ್ಯಾರ್ಥಿಗಳು ಮಣ್ಣಿನ ಮೈದಾನದಲ್ಲಿ ಹಾಕಿ ಅಭ್ಯಾಸಿಸಿ, ರಾಜ್ಯ ಮತ್ತು ಅಂತರರಾಜ್ಯ ಮಟ್ಟದಲ್ಲಿ ಕೀರ್ತಿ ತರುವದರ ಜೊತೆಗೆ ದೇಶವನ್ನು ಪ್ರತಿನಿಧಿಸಿರುವ ಕ್ರೀಡಾಪಟುಗಳು ಈ ಶಾಲೆಯ ಕ್ರೀಡಾಪಟುಗಳು ಎಂಬ ಹೆಗ್ಗಳಿಕೆಗೆ ಕೂಡಿಗೆ ಕ್ರೀಡಾಶಾಲೆ ಪಾತ್ರವಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಪೊನ್ನಂಪೇಟೆ ಮತ್ತು ಮಡಿಕೇರಿಯಲ್ಲಿ ಹಾಕಿ ಟರ್ಫ್ ಮೈದಾನಗಳು ಇದ್ದು, ಇದೀಗ ಕೂಡಿಗೆಯಲ್ಲಿಯೂ ಸುಸಜ್ಜಿತವಾಗಿ ನಿರ್ಮಾಣಗೊಂಡು ಕ್ರೀಡಾಪಟುಗಳಿಗೆ ಅಭ್ಯಸಿಸಲು ಅತೀ ಶೀಘ್ರದಲ್ಲಿ ಪೂರ್ಣಗೊಳಿಸುವ ಮೂಲಕ ಹಾಕಿ ಕಲಿಗಳಿಗೆ ಅವಕಾಶ ನೀಡಲು ಇಲಾಖೆಯ ಅಧಿಕಾರಿಗಳು ಸಮರ್ಪಕ ಪ್ರಯತ್ನ ಮಾಡಬೇಕೆಂದು ಈ ಶಾಲೆಯ ವಿದ್ಯಾರ್ಥಿಗಳ ಪೋಷಕರ ಆಗ್ರಹ. ಜಿಲ್ಲೆಯು ಹಾಕಿ ಪಟುಗಳ ತವರೂರು ಆಗಿ ದೇಶದಲ್ಲೇ ಹೆಸರು ಮಾಡಿರುವದರಿಂದ ಯುವಕರಿಗೆ ಅನುಕೂಲವಾಗುವಂತೆ ಹಾಗೂ ಹಾಕಿ ಕ್ರೀಡೆಗೆ ಹೆಚ್ಚು ಉತ್ತೇಜನೆ ನೀಡುತ್ತಿರು ವದರಿಂದ ಶಾಲಾ ವಿದ್ಯಾರ್ಥಿಗಳಿಗೂ ಹಾಗೂ ಹಾಕಿ ಕ್ರೀಡಾಪಟುಗಳಿಗೆ ಸಹಕಾರಿಯಾಗ ಬೇಕಿದೆ. ಈ ಹಾಕಿ ಟರ್ಫ್‍ನಿಂದ ಜಿಲ್ಲೆಯಲ್ಲಿ ನಡೆಯುವ ಹಾಕಿ ಕ್ರೀಡಾಕೂಟಗಳು, ಶಿಕ್ಷಣ ಇಲಾಖೆ ನಡೆಸುವ ಕ್ರೀಡಾಕೂಟಗಳು, ದಸರಾ ಮತ್ತು ಯುವಜನೋತ್ಸವ ಕ್ರೀಡಾಕೂಟಗಳಿಗೆ ಈ ಹಾಕಿ ಕ್ರೀಡಾಂಗಣ ಸದುಪಯೋಗ ವಾಗಬೇಕಾಗಿದೆ. ಆದ್ದರಿಂದ ಸಂಬಂಧಪಟ್ಟ ಕ್ರೀಡಾ ಇಲಾಖೆಯ ಮೇಲ್ಮಟ್ಟದ ಅಧಿಕಾರಿಗಳು ಗುತ್ತಿಗೆ ದಾರರಿಗೆ ಹಣ ಬಿಡುಗಡೆ ಮಾಡುವ ಮೂಲಕ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಂದಿನ ಶೈಕ್ಷಣಿಕ ವರ್ಷಕ್ಕಾದರೂ ಕ್ರೀಡಾ ಶಾಲೆ ವಿದ್ಯಾರ್ಥಿಗಳಿಗೆ ಹಾಕಿ ಟರ್ಫ್ ನಲ್ಲಿ ಅಭ್ಯಸಿಸುವ ಭಾಗ್ಯವನ್ನು ಒದಗಿಸಬೇಕೆಂದು ಕುಶಾಲನಗರ, ಕೂಡಿಗೆ ಕ್ರೀಡಾ ಪ್ರೇಮಿಗಳ ಆಗ್ರಹ ವಾಗಿದೆ.
- ಕೆ.ಕೆ. ನಾಗರಾಜಶೆಟ್ಟಿ