ಸೋಮವಾರಪೇಟೆ, ಏ. 20: ಸ್ವಚ್ಛತೆಯ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದ್ದರೂ ಸಹ ದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸ್ವಚ್ಛತೆ ಕಾಣುತ್ತಿಲ್ಲ. ಇದಕ್ಕೆ ಜೀವಂತ ಉದಾಹರಣೆಯೊಂದು ಬೇಳೂರು ಗ್ರಾಮ ಪಂಚಾಯಿತಿಯ ಬಜೆಗುಂಡಿ ಗ್ರಾಮದಲ್ಲಿ ಕಾಣಸಿಗುತ್ತದೆ.

ಬಜೆಗುಂಡಿ ಗ್ರಾಮದ ಮೂಲಕ ಹಾದುಹೋಗಿರುವ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯೇ ಇಲ್ಲಿ ಕಸದ ತೊಟ್ಟಿಯಾಗಿದೆ. ಪಂಚಾಯಿತಿ ಆಡಳಿತ ಮಾತ್ರ ಈ ಬಗ್ಗೆ ಗಮನಹರಿಸದೇ ತ್ಯಾಜ್ಯ ವಿಲೇವಾರಿಯಿಂದ ಹಿಂದೆ ಸರಿದಿದೆ.

3 ರಿಂದ 4 ತಿಂಗಳಿಗೊಮ್ಮೆ ಇಲ್ಲಿ ಬೆಟ್ಟದಷ್ಟು ತ್ಯಾಜ್ಯ ಶೇಖರಣೆಗೊಂಡ ನಂತರ ಪಂಚಾಯಿತಿಯಿಂದ ಟ್ರ್ಯಾಕ್ಟರ್ ಮೂಲಕ ಸಾಗಿಸಿ, ಗ್ರಾಮದ ಸಮುದಾಯ ಭವನದ ಬಳಿಯಿರುವ ಖಾಲಿ ಜಾಗದಲ್ಲಿ ವಿಲೇವಾರಿ ಮಾಡುವ ಕಾರ್ಯ ದಶಕಗ ಳಿಂದಲೂ ನಡೆಯುತ್ತಿದ್ದು, ತ್ಯಾಜ್ಯ ವಿಲೇವಾರಿಗೆ ಶಾಶ್ವತ ಕ್ರಮ ಕೈಗೊಳ್ಳುವಲ್ಲಿ ಮಾತ್ರ ಆಡಳಿತ ಯಂತ್ರ ವಿಫಲವಾಗಿದೆ. ಸೋಮವಾರಪೇಟೆ-ಮಡಿಕೇರಿ ಮುಖ್ಯರಸ್ತೆಯ ಒಂದು ಬದಿಯಲ್ಲಿ ಬಜೆಗುಂಡಿ ಗ್ರಾಮದ ಮನೆಗಳಿದ್ದು, ಮತ್ತೊಂದು ಬದಿಯಲ್ಲಿ ಕಾಫಿ ತೋಟವಿದೆ. ಬಜೆಗುಂಡಿ ಜಂಕ್ಷನ್‍ನಲ್ಲಿಯೇ ಅಯ್ಯಪ್ಪ ದೇವಾಲಯ, ಮಸೀದಿಗಳಿದ್ದು, ಇದರ ಸನಿಹವೇ ಕಸದ ಗುಡ್ಡೆಗಳು ದಿನದಿಂದ ದಿನಕ್ಕೆ ಮೇಲೇಳುತ್ತಿವೆ. ಇರುವ ಅಲ್ಪ ಜಾಗದಲ್ಲಿಯೇ ಇಲ್ಲಿ ಸಾರ್ವಜನಿಕರು ಮನೆ ಕಟ್ಟಿಕೊಂಡಿದ್ದು, ಮನೆಯಲ್ಲಿ ಉತ್ಪಾದನೆಗೊಳ್ಳುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಜಾಗದ ಕೊರತೆಯಿದೆ. ಇದನ್ನೇ ಕಾರಣ ವಾಗಿಟ್ಟುಕೊಂಡು ಮುಖ್ಯರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ಕಸವನ್ನು ಎಸೆಯಲಾಗುತ್ತಿದೆ. ಗಾಳಿ ಬರುವ ಸಂದರ್ಭ ಪ್ಲಾಸ್ಟಿಕ್‍ಗಳು ಎಲ್ಲೆಂದರಲ್ಲಿ ಹಾರಾಡುತ್ತಿದ್ದರೆ, ಮಳೆ ಬರುವ ಸಂದರ್ಭ ಕೊಳೆತ ತ್ಯಾಜ್ಯ ರಸ್ತೆಯ ಮೇಲೆಯೇ ಹರಿಯುತ್ತಿರುತ್ತವೆ.

ಇದರೊಂದಿಗೆ ಪ್ಲಾಸ್ಟಿಕ್‍ಗಳಲ್ಲಿ ತ್ಯಾಜ್ಯವನ್ನು ತುಂಬಿ ಬಳಗುಂದ ಗಣಪತಿ ದೇವಾಲಯದ ಮುಂಭಾಗದ ರಸ್ತೆಯಲ್ಲಿ ಎಸೆಯಲಾಗುತ್ತಿದೆ. ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅನೇಕ ಬಾರಿ ಬೇಳೂರು ಗ್ರಾಮ ಪಂಚಾಯಿತಿಯನ್ನು ಒತ್ತಾಯಿಸಿದ್ದರೂ ಸಹ ಯಾವದೇ ಪ್ರಯೋಜನವಾಗಿಲ್ಲ. ಗ್ರಾಮ ಸಭೆಗಳಲ್ಲಿ ಪ್ರಸ್ತಾಪಿಸಿದ್ದರೂ ಸ್ಪಂದನೆ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚನ್ನಕೇಶವ ಅವರು ‘ಶಕ್ತಿ’ಯೊಂದಿಗೆ ಮಾತನಾಡಿ, ‘ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಪಂಚಾಯಿತಿ ವ್ಯಾಪ್ತಿಯಲ್ಲಿ ಪೈಸಾರಿ ಜಾಗವೇ ಇಲ್ಲ. ಹಣ ಕೊಟ್ಟು ಖರೀದಿಸೋಣ ಎಂದರೆ ಸರ್ಕಾರ ನಿಗದಿ ಪಡಿಸಿರುವ ಮೌಲ್ಯಕ್ಕೆ ಜಾಗ ದೊರೆಯುತ್ತಿಲ್ಲ. ಈ ಹಿನ್ನೆಲೆ ಲೋಕಸಭಾ ಚುನಾವಣೆ ನಂತರ ಬೇಳೂರು ಮಠದವರೊಂದಿಗೆ ಮಾತುಕತೆ ನಡೆಸಿ, ತ್ಯಾಜ್ಯ ವಿಲೇವಾರಿಗೆ ಜಾಗ ನೀಡುವಂತೆ ಮನವಿ ಮಾಡುತ್ತೇವೆ’ ಎಂದರು.

‘ಗ್ರಾಮದೊಳಗೆ ಕಸದ ತೊಟ್ಟಿಗಳನ್ನು ಇಟ್ಟರೆ ಸತ್ತ ನಾಯಿ, ಬೆಕ್ಕುಗಳ ಕಳೇಬರವನ್ನು ಹಾಕುತ್ತಾರೆ. ಅದು ಕೊಳೆತು ಇಡೀ ಪ್ರದೇಶ ಗಬ್ಬೆದ್ದು ನಾರುತ್ತದೆ. ತೊಟ್ಟಿಯಲ್ಲಿ ಶೇಖರಣೆ ಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲೂ ಸಹ ಅಸಾಧ್ಯವಾಗುತ್ತದೆ. ಈ ಹಿನ್ನೆಲೆ ತೊಟ್ಟಿಗಳನ್ನು ಅಳವಡಿಸಿಲ್ಲ’ ಎಂದು ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

ಒಟ್ಟಾರೆ ಗ್ರಾಮ ಪಂಚಾಯಿತಿ ಯಲ್ಲಿ ಆಡಳಿತ ನಡೆಸುತ್ತಿರುವ ಜನಪ್ರತಿನಿಧಿಗಳು ಒಟ್ಟಾಗಿ ತ್ಯಾಜ್ಯ ವಿಲೇವಾರಿ ಬಗ್ಗೆ ಗಂಭೀರ ಚಿಂತನೆ ಹರಿಸಿದರೆ ಮಾತ್ರ ಕಸದ ಸಮಸ್ಯೆಯಿಂದ ಮುಕ್ತಿ ಕಾಣಬಹುದು. ಜನಪ್ರತಿನಿಧಿಗಳು ಈ ಬಗ್ಗೆ ಕಾರ್ಯೋನ್ಮುಖರಾಗಬೇಕಷ್ಟೇ. ಇಲ್ಲಸಲ್ಲದ ಸಬೂಬುಗಳನ್ನು ನೀಡುವ ಬದಲು ಇಚ್ಚಾಶಕ್ತಿ ಪ್ರದರ್ಶಿ ಸಬೇಕು ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.

- ವಿಜಯ್ ಹಾನಗಲ್