ಮಡಿಕೇರಿ, ಏ. 20: ಭಾರೀ ಗಾಳಿ-ಮಳೆಗೆ ಕುಂಡಾಮೇಸ್ತ್ರಿ ನೀರು ಸಂಗ್ರಹಗಾರದ ಕಟ್ಟೆಯೊಡೆದ ಭಾಗವನ್ನು ಈಗಾಗಲೇ ಬಿರುಸಿನ ಕಾಮಗಾರಿ ಆರಂಭಿಸಿ ನಗರಕ್ಕೆ ಕುಡಿಯುವ ನೀರಿನ ಸರಬರಾಜು ಆರಂಭಿಸಲಾಗಿದೆ ಎಂದು ನಗರಸಭಾ ಆಯುಕ್ತ ಎಂ.ಎಲ್.ರಮೇಶ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
ಕುಂಡಾಮೇಸ್ತ್ರಿ ನೀರು ಸಂಗ್ರಹಗಾರಕ್ಕೆ ನಿರ್ಮಿಸಿದ್ದ ತಾತ್ಕಾಲಿಕ ಕಟ್ಟೆಯ ಒಂದು ಪಾಶ್ರ್ವದ ಬರೆ ಮಣ್ಣು ಕುಸಿದುದರಿಂದ ಕಟ್ಟೆ ಸಹಿತ ಮಣ್ಣು ನೀರಿನಲ್ಲಿ ಕೊಚ್ಚಿ ಹೋಗಿ ಸಂಗ್ರಹಗೊಂಡಿದ್ದ ನೀರು ತೋಡಿನಲ್ಲಿ ಹರಿದು ಕಟ್ಟೆ ಬರಿದಾಗಿತ್ತು ಎಂದು ಆಯುಕ್ತರು ತಿಳಿಸಿದರು.
ಮುಂಜಾನೆಯಿಂದ ತಾನು ಮತ್ತು ನಗರಸಭೆಯ ಸುಮಾರು 20ಕ್ಕೂ ಹೆಚ್ಚು ಕಾರ್ಮಿಕ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಕೂಡಲೇ ಕಾರ್ಯಪ್ರವೃತ್ತರಾಗಿ ಕಟ್ಟೆಯನ್ನು ಸ್ವಚ್ಚಗೊಳಿಸಿದ ಬಳಿಕ ಶನಿವಾರ ಹಿಟಾಚಿ ಕೊಂಡೊಯ್ದು ಕಾಮಗಾರಿ ಆರಂಭಿಸಿ ಮರಳು ಚೀಲ ತುಂಬಿಸಿ ಕೊಚ್ಚಿ ಹೋದಲ್ಲಿಗೆ ಇರಿಸಲಾಗಿದೆ. ಈಗಾಗಲೇ ನೀರು ಸಂಗ್ರಹವಾಗುತ್ತಿದೆ.
ಸಿಡಿಲಿನ ಆರ್ಭಟಕ್ಕೆ ವಿದ್ಯುತ್ ಕಂಬಗಳ ಮೇಲೆ ಬಿದ್ದ ಮರಗಳ ಕೊಂಬೆಗಳನ್ನು ಈಗಾಗಲೇ ತೆರವುಗೊಳಿಸಿ ಕುಂಡಾ ಮೇಸ್ತ್ರಿಗೆ ವಿದ್ಯುತ್ ಸಂಪರ್ಕವನ್ನು ಸಂಪರ್ಕಿಸಲಾಗಿದೆ ಎಂದು ರಮೇಶ್ ತಿಳಿಸಿದ್ದಾರೆ.
- ಶ್ರೀವತ್ಸ