ಮಡಿಕೇರಿ, ಏ. 20: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಅಭ್ಯರ್ಥಿಗಳ ಸಹಿತ ಕಾರ್ಯಕರ್ತರು ಮತ ಕೇಳುತ್ತಿರುವದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವಾದರೂ, ಭಾರತದ ಭವಿಷ್ಯದ ದೃಷ್ಟಿಯಿಂದ ವ್ಯಕ್ತಿ ಪೂಜೆ ಒಳಿತಲ್ಲ ಎಂದು ಆರ್.ಎಸ್.ಎಸ್. ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಸಂಬಂಧಿಸಿದವರಿಗೆ ಕಿವಿಮಾತು ಹೇಳಿದ್ದಾರೆ.

ಇಲ್ಲಿನ ಬಾಲಭವನದಲ್ಲಿ ಇಂದು ಸೇವಾಭಾರತಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಳಿಕ, ಮಾಧ್ಯಮಗಳೊಂದಿಗೆ ಅಭಿಪ್ರಾಯ ಹಂಚಿಕೊಂಡ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ವ್ಯಕ್ತಿ ಪೂಜೆಗೆ ಮಾನ್ಯತೆ ಇಲ್ಲವೆಂದು ಸೂಚ್ಯವಾಗಿ ಹೇಳಿದರು. ದೇಶದೆಲ್ಲೆಡೆ ಬಿಜೆಪಿ ಅಭ್ಯರ್ಥಿಗಳು ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರಲ್ಲಾ? ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಮೋದಿ ಅವರ ಸಾಧನೆ ಮತ್ತು ಆಲೋಚನೆಗಳ ನಡುವೆ ಮಿಕ್ಕವರ ಸಾಧನೆ ಗೌಣವೆಂದು ವ್ಯಾಖ್ಯಾನಿಸಿದರು.

ಅಲ್ಲದೆ ಪ್ರಸಕ್ತ ರಾಷ್ಟ್ರೀಯ ವಿಚಾರಧಾರೆ ಮತ್ತು ಭವಿಷ್ಯದ ಭಾರತದ ಪ್ರಗತಿಗಾಗಿ ಪ್ರಧಾನಿ ಮೋದ ನಾಯಕತ್ವದಲ್ಲಿ ಚುನಾವಣೆ ನಡೆಯುತ್ತಿರುವದು ಹೆಮ್ಮೆಯ ವಿಷಯ ಎಂದು ನೆನಪಿಸಿದ ಡಾ. ಭಟ್, ಒಂದೆಡೆ ಪ್ರಧಾನಿ ಮೋದಿ ಮತ್ತು ಜನರಿದ್ದರೆ; ಮಿಕ್ಕೆಲ್ಲರು ಕಾಣಿಸಿಕೊಂಡರೂ ಅವರುಗಳಿಗೆ ಯಾವದೇ ಸೈದ್ಧಾಂತಿಕ ವಿಚಾರಗಳು ಇಲ್ಲವೆಂದರು ಟೀಕಿಸಿದರು.

ಸೈನಿಕರು ದೈವೀ ಸ್ವರೂಪರು : ಭಾರತದ ಸೈನ್ಯದ ಸಾಧನೆಯನ್ನು ಬಿಜೆಪಿ ಬಳಸಿಕೊಂಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ ಅವರು; ಈ ಹಿಂದೆ ಮುಂಬೈ ಮೇಲಿನ ಪಾಕ್ ಧಾಳಿಯಲ್ಲಿ ಅನೇಕರು ಸತ್ತಾಗ; ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಭಾರತದ ಸೈನಿಕರು ಪ್ರತಿ ಧಾಳಿ ನಡೆಸಲು ಅವಕಾಶ ನೀಡಿರಲಿಲ್ಲವೆಂದು ನೆನಪಿಸಿದರು. ಆದರೆ ಪುಲ್ವಾಮ ಧಾಳಿಯಾದಾಗ 44 ಸೈನಿಕರ ಬಿಲಿದಾನ ವ್ಯರ್ಥವಾಗಬಾರದೆಂದು ದೇಶದ ಜನ ಆಗ್ರಹಿಸಿದಾಗ ಇಂದಿನ ಪ್ರಧಾನಿ ಅವಕಾಶ ನೀಡಿ ದೈವೀ ಸ್ವರೂಪ ಸೈನಿಕರಿಗೆ ಸ್ಥೈರ್ಯ ತುಂಬಿದ್ದಾಗಿ ಪ್ರತಿಪಾದಿಸಿದರು.

ಈಗಿನ ಪ್ರದಾನಿ ದೇಶದ 130 ಕೋಟಿ ಜನತೆ ತಲೆಯೆತ್ತಿ - ಎದೆ ಸೆಟೆದು ಬಾಳುವಂತೆ ನೋಡಿಕೊಳ್ಳುವದಾಗಿ ವಾಗ್ದಾನ ನೀಡಿದ್ದು, ಹಾಗಾಗಿ ಸಹಜವಾಗಿ ಸೈನಿಕರ ಸಾಧನೆಯನ್ನು ಮೋದಿ ಮುಖಾಂತರ ಶ್ಲಾಘಿಸುವದರಲ್ಲಿ ತಪ್ಪಾಗದು ಎಂದು ಡಾ. ಪ್ರಭಾಕರ್ ಭಟ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

1971 ಏನಾಯಿತು ? : ವಿರೋಧಿಗಳ ಈ ಬಗ್ಗೆ ಟೀಕೆಗೆ ತಿರುಗೇಟು ನೀಡಿದ ಪ್ರಭಾಕರ್ ಭಟ್, 1971ರ ಬಾಂಗ್ಲಾ ವಿಮೋಚನೆ ಸಂದರ್ಭ ಇದೇ ಕಾಂಗ್ರೆಸ್ಸಿಗರು ಭಾರತ ಸೇನೆಯ ಸಾಧನೆಯನ್ನು ಗೌಣವಾಗಿಸಿ, ಅಂದಿನ ಪ್ರಧಾನಿ ಇಂದಿರಾ ಗಾಂಧಿಯನ್ನು ಹೊಗಳುತ್ತಾ, ಬೇಕಾದಂತೆ ‘ದುರ್ಗೆ’ ಎಂಬಿತ್ಯಾದಿ ಬಿಂಬಿಸಲಿಲ್ಲವೆ ಎಂದು ಮರು ಪ್ರಶ್ನಿಸಿದರು.