ಶನಿವಾರಸಂತೆ, ಏ. 20: ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಹಸಿರು ಮೆಣಸಿನಕಾಯಿ ಸಂತೆ ಬಿರುಸಾಗಿ ನಡೆಯಿತು. 16-18 ಕೆ.ಜಿ. ಮೆಣಸಿನಕಾಯಿ ತುಂಬಿದ ಚೀಲಕ್ಕೆ ರೂ. 550-600 ದೊರೆತರೂ ರೈತರ ಮೊಗದಲ್ಲಿ ಮಂದಹಾಸ ಕಾಣಲಿಲ್ಲ. ನ್ಯಾಯವಾದ ಬೆಲೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೆಣಸಿನಕಾಯಿ ಸಂತೆ ಆರಂಭವಾಗಿ 4 ವಾರಗಳಾದವು. ದರ ಮಾತ್ರ ರೂ. 500-600 ರಲ್ಲೇ ತೂಗಾಡುತ್ತಿದೆ. ಸಂತೆಗೆ 1 ಲೋಡ್ ಮೆಣಸಿನಕಾಯಿ ಬಂದಿತ್ತು. ಸಕಲೇಶಪುರ, ಸೋಮವಾರಪೇಟೆ, ನೆರೆ ತಾಲೂಕುಗಳ ಗ್ರಾಮಗಳಿಂದ ರೈತರು ಮುಂಜಾನೆ 4 ಗಂಟೆಯಿಂದಲೇ ಮೆಣಸಿನಕಾಯಿ ತುಂಬಿ ಚೀಲಗಳನ್ನು ವಿವಿಧ ವಾಹನಗಳಲ್ಲಿ ತರುತ್ತಾರೆ. 1 ಚೀಲಕ್ಕೆ ರೂ. 10 ರಂತೆ ಸುಂಕ ತೆತ್ತು ವ್ಯಾಪಾರ ಮಾಡಬೇಕು. ಮಧ್ಯವರ್ತಿಗಳು ಹೇಳಿದ ಬೆಲೆಗೆ ಮಾರಲೇಬೇಕು. ಅರಕಲಗೂಡು, ಮೈಸೂರು, ಮಂಗಳೂರು, ಶಿವಮೊಗ್ಗ, ಚಿತ್ರದುರ್ಗ ಮತ್ತಿತರ ಊರುಗಳಿಂದ ವ್ಯಾಪಾರಿಗಳು ಬಂದರೂ ರೈತರಿಂದ ನೇರ ಖರೀದಿಸದೆ ಮಧ್ಯವರ್ತಿಗಳ ಮೂಲಕವೇ ಖರೀದಿಸುತ್ತಾರೆ.
ಮಧ್ಯವರ್ತಿಗಳ ಹಾವಳಿಯಿಂದ ರೈತರಾದ ನಮಗೆ ತುಂಬಾ ತೊಂದರೆಯಾಗುತ್ತಿದೆ. ಬೆಂಬಲ ಬೆಲೆ ಸಿಗುತ್ತಿಲ್ಲ. 16-18 ಕೆ.ಜಿ. ಮೆಣಸಿನಕಾಯಿ ತುಂಬಿದ ಚೀಲಕ್ಕೆ ಒಂದು ಸಾವಿರ ಆದರೂ ಸಿಗಲೇಬೇಕು. ಗದ್ದೆಯಲ್ಲಿ ದುಡಿದು ಪಡುವ ಶ್ರಮ, 15 ದಿನಗಳಿಗೊಮ್ಮೆ ಮೆಣಸಿನಕಾಯಿ ಕುಯ್ಯಲು ಕಾರ್ಮಿಕರಿಗೆ ಕೊಡುವ ಕೂಲಿ, ಸಾಗಾಟದ ಸಮಸ್ಯೆ, ವೆಚ್ಚ ಎಲ್ಲವೂ ಅಧಿಕವಾಗಿದ್ದು, ಸಿಗುತ್ತಿರುವ ಬೆಲೆ ನಿರಾಸೆ ಉಂಟು ಮಾಡಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.