ಸೋಮವಾರಪೇಟೆ, ಏ.20: ಹೆಗ್ಗಡದೇವನ ಕೋಟೆಯಲ್ಲಿ ಅಕ್ರಮವಾಗಿ ಕಾಡು ಹಂದಿಯನ್ನು ಬೇಟೆ ಯಾಡಿ ಸೋಮವಾರಪೇಟೆಯಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖಾ ಸಿಬ್ಬಂದಿಗಳು, ಈರ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹೆಚ್.ಡಿ.ಕೋಟೆಯಲ್ಲಿ ಕಾಡುಹಂದಿಯನ್ನು ಬೇಟೆಯಾಡಿ ಪಟ್ಟಣ ಸಮೀಪದ ಆಲೇಕಟ್ಟೆ ರಸ್ತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ತಾಲೂಕಿನ ತಲ್ತರೆಶೆಟ್ಟಳ್ಳಿ ಗ್ರಾಮದ ನಿವಾಸಿಗಳಾದ ಅಶ್ವತ್ ಮತ್ತು ಟಿ.ಬಿ. ನಿಶಾಂತ್ ಅವರುಗಳನ್ನು ಸೋಮವಾರಪೇಟೆ ಅರಣ್ಯ ಇಲಾಖಾ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳಿಂದ 40 ಕೆ.ಜಿ.ಯಷ್ಟು ಕಾಡುಹಂದಿ ಮಾಂಸ, ಕೃತ್ಯಕ್ಕೆ ಬಳಸಲ್ಪಟ್ಟಿದ್ದ ಮಾರುತಿ 800 ವಾಹನ, ಹೀರೋ ಹೋಂಡ ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಧೀಶರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್, ಉಪ ವಲಯ ಅರಣ್ಯಾಧಿಕಾರಿ ಮಹದೇವ ನಾಯಕ್, ಅರಣ್ಯ ರಕ್ಷಕ ಶ್ರೀಕಾಂತ್, ಚಾಲಕ ಸಂದೀಪ್ ಅವರುಗಳು ಭಾಗವಹಿಸಿದ್ದರು.