ಗೋಣಿಕೊಪ್ಪ ವರದಿ, ಏ. 22 : ಕುಮಟೂರು ಗ್ರಾಮದಲ್ಲಿ ಕಾಡಾನೆ ಹಿಂಡು ದಾಳಿಗೆ 5 ಎಕರೆಯಷ್ಟು ಬಾಳೆ ತೋಟ ಸಂಪೂರ್ಣವಾಗಿ ನಾಶವಾಗಿದೆ.

ತೋಟಕ್ಕೆ ಲಗ್ಗೆ ಇಟ್ಟಿರುವ 16 ಕಾಡಾನೆಗಳ ಹಿಂಡು ಸುಮಾರು 5 ಏಕರೆ ಬಾಳೆ ಬೆಳೆ ನಾಶ ಮಾಡಿವೆ. ಸುಮಾರು 10 ಲಕ್ಷದಷ್ಟು ನಷ್ಟ ಉಂಟಾಗಿದೆ ಎಂದು ನೊಂದ ರೈತರು ಹೇಳಿಕೊಂಡಿದ್ದಾರೆ.ಕುಮಟೂರು ಗ್ರಾಮದ ಕೋಟ್ರಂಗಡ ಮಂದಣ್ಣ, ಹರೀಶ್ ಹಾಗೂ ನಂಜಪ್ಪ ಎಂಬವರಿಗೆ ಸೇರಿದ ಬಾಳೆ ತೋಟದಲ್ಲಿ ನಿರಂತರ ದಾಳಿ ಮಾಡುತ್ತಿವೆ. ರಾತ್ರಿ ದಾಳಿ ಮಾಡಿರುವ ಆನೆಗಳು 20 ಏಕರೆ ತೋಟದಲ್ಲಿ 5 ಏಕರೆ ಬೆಳೆಯನ್ನು ಸಂಪೂರ್ಣವಾಗಿ ತಿಂದು ಹಾಕಿವೆ

ಅಂದಾಜು 25 ಲಕ್ಷ ವೆಚ್ಚದಲ್ಲಿ 20 ಏಕರೆ ಬಾಳೆ ತೋಟ ಮಾಡಿದ್ದರು. ಇದರಲ್ಲಿ ಕಳೆದ (ಮೊದಲ ಪುಟದಿಂದ) ರಾತ್ರಿ ನುಗ್ಗಿರುವ ಕಾಡಾನೆಗಳ ಹಿಂಡು ತುಳಿದು, ತಿಂದು ನಾಶ ಮಾಡಿವೆ. ಬಾಳೆ ಫಸಲು ಬಿಟ್ಟಿರುವದರಿಂದ ಹೆಚ್ಚಿನ ನಷ್ಟ ಉಂಟಾಗಿದೆ. ಇದರೊಂದಿಗೆ ಮಿಶ್ರ ಬೆಳೆಯಾಗಿ ಬೆಳೆದಿದ್ದ ಕಾಪಿ, ಅಡಿಕೆ ಗಿಡಗಳನ್ನು ಕೂಡ ನಾಶಮಾಡಿವೆ.ತೋಟಕ್ಕೆ ನೀರು ಹಾಯಿಸಲು ಅಲ್ಯುಮಿನಿಯಂ ಪೈಪ್ ನೆಲದಲ್ಲಿ ಅಳವಡಿಸಲಾಗಿದ್ದು ಆನೆ ತುಳಿತಕ್ಕೆ ಒಳಗಾಗಿ ಸುಮಾರು 20 ಪೈಪ್‍ಗಳು ನಾಶವಾಗಿದೆ. ಬಳಕೆಗೆ ಯೋಗ್ಯವಾಗದ ರೀತಿಯಲ್ಲಿದೆ. ರೈತ ಸಂಘ ಹೋರಾಟ ಎಚ್ಚರಿಕೆ ರಾತ್ರಿ ದಾಳಿಗೆ ಇಳಿಯುವ ಆನೆಗಳ ಹಿಂಡಿನ ದಾಂಧಲೆಗೆ ಹೈರಾಣವಾಗಿರುವ ಕೃಷಿಕನಿಗೆ ಇಲಾಖೆಯಿಂದ ಪರಿಹಾರ ನೀಡುವಂತೆ ಹಾಗೂ ಆನೆಗಳನ್ನು ಕಾಡಿಗಟ್ಟುವಂತೆ ರೈತ ಸಂಘ ಅಧ್ಯಕ್ಷ ಚಿಮ್ಮಂಗಡ ಗಣೇಶ್ ಮತ್ತು ತಂಡ ಸ್ಥಳಕ್ಕೆ ಬೇಟಿ ನೀಡಿ ಆಗ್ರಹಿಸಿತು.

ವೀರಾಜಪೇಟೆ ಡಿಎಫ್‍ಒ ಮರಿಯಾ ಕ್ರೈಸ್ತರಾಜ್ ಅವರಿಗೆ ದೂರವಾಣಿ ಮೂಲಕ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಲಾಯಿತು. ಕಾಡಾನೆಗಳನ್ನು ನಿಯಂತ್ರಿಸಲು ಅರಣ್ಯ ಗಡಿಗಳಲ್ಲಿ ರೈಲ್ವೆ ಕಂಬಿ ನಿರ್ಮಿಸಬೇಕು ಎಂದು ರೈತ ಸಂಘ ಅಧ್ಯಕ್ಷ ಚಿಮ್ಮಂಗಡ ಗಣೇಶ್ ಆಗ್ರಹಿಸಿದ್ದರು.

ರೈತ ಮುಖಂಡರುಗಳಾದ ಚಂಗುಲಂಡ ರಾಜಪ್ಪ, ಕುಂಞಂಗಡ ಸಿದ್ದು, ಕಳ್ಳಿಚಂಡ ಧನು, ಮಚ್ಚಮಾಡ ರಂಜಿ, ಐಯ್ಯಮಾಡ ಹ್ಯಾರಿ, ಮಾಣೀರ ದೇವಯ್ಯ, ದೇಕಮಾಡ ವಿನು, ಚೊಟ್ಟೆಯಂಡಮಾಡ ಮಂಜು, ಪ್ರವೀಣ್, ಚೆಟ್ಟಂಗಡ ಲೋಹಿತ್, ಗಗನ್ ಇದ್ದರು.

ಕಾರ್ಯಾಚರಣೆ

ರೈತ ಸಂಘದ ಒತ್ತಾಯಕ್ಕೆ ಮಣಿದು ಕುಮಟೂರು ಭಾಗದಲ್ಲಿ ಕಾಡಾನೆ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ತೋಟಗಳಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಪತ್ತೆ ಹಚ್ಚಿ ಕಾಡಿಗೆ ಅಟ್ಟಲು ಯೋಜನೆ ರೂಪಿಸಲಾಗಿದೆ. ಇದರಂತೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆನೆಗಳ ಹಿಂಡು ತೋಟ ಅಥವಾ ಹೊಳೆ, ಕೆರೆಗಳ ಬದಿಯಲ್ಲಿ ಹಗಲು ಕಳೆಯುವ ಮೂಲಕ ರಾತ್ರಿ ಆಗಮಿಸುತ್ತದೆ. ಇದರಿಂದಾಗಿ ಪತ್ತೆ ಕಾರ್ಯ ವಿಳಂಭವಾಗುತ್ತಿದೆ. -ಸುದ್ದಿಪುತ್ರ