ಮಡಿಕೇರಿ, ಏ. 22: ಕಡಂಗ ಅರಪಟ್ಟು ಗ್ರಾಮದ ವಿವಾಹಿತ ಗೃಹಿಣೆಯೊಬ್ಬಳನ್ನು ಆಕೆಯ ಪತಿ ಹಾಗೂ ಅತ್ತೆ, ಮಾವ, ನಾದಿನಿ ಪೂರ್ವ ನಿಯೋಜಿತ ಸಂಚು ರೂಪಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಲ್ಲಿನ ಮಹಿಳಾ ಸಂಘಟನೆಗಳು ಆಗ್ರಹಿಸಿವೆ.ಈ ಸಂಬಂಧ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಮಹಿಳಾ ಸಂಘಟನೆಗಳ ಪ್ರಮುಖರು, ಅರಪಟ್ಟು ನಿವಾಸಿ ನಾರಾಯಣಸ್ವಾಮಿ ಹಾಗೂ ಗೌರಮ್ಮ ಯಾನೆ ಸರೋಜದೇವಿ ಎಂಬವರ ಪುತ್ರ ಚೇತನ್ ಅಲಿಯಾಸ್ ಹರೀಶ್ಕುಮಾರ್ ವಿರುದ್ಧ ಗಂಭೀರ ಆರೋಪ ವ್ಯಕ್ತಪಡಿಸಿದ್ದಾರೆ.
ನಾಲ್ಕು ವರ್ಷ ಹಿಂದೆ ಮಂಡ್ಯ ಮೂಲದ ಪ್ರಮೀಳ (24) ಎಂಬ ಯುವತಿಯನ್ನು ವಿವಾಹವಾಗಿರುವ ಚೇತನ್ ಅಲಿಯಾಸ್ ಹರೀಶ್ಕುಮಾರ್, ಒಂದು ಮಗುವಿನ ತಾಯಿಯಾಗಿರುವ ಪತ್ನಿಗೆ ವಂಚಿಸಿದಲ್ಲದೆ, ಬೇರೊಬ್ಬ ಳೊಂದಿಗೆ ಸಂಸಾರ ನಡೆಸುತ್ತಾ, ಮನೆ ಮಂದಿ ಸೇರಿ ಗೃಹಿಣಿಗೆ ಕಿರುಕುಳ ನೀಡುತ್ತಿದ್ದುದಾಗಿ ಬಹಿರಂಗ ಗೊಳಿಸಿದ್ದಾರೆ.
(ಮೊದಲ ಪುಟದಿಂದ) ಅಲ್ಲದೆ, ಪತಿಯು ಕೆಲವು ಸಮಯದಿಂದ ಮತ್ತೊಬ್ಬಾಕೆಯೊಂದಿಗೆ ಬೆಂಗಳೂರಿನಲ್ಲಿ ಸಂಸಾರ ಹೂಡಿದ್ದು, ತಾ. 18 ರಂದು ಚುನಾವಣೆಗೆ ಬಂದಿದ್ದ ವೇಳೆ ಪತ್ನಿಯನ್ನು ಸಾಯಿಸಿ; ನೇಣುಬಿಗಿದ ಸ್ಥಿತಿಯಲ್ಲಿ ತೂಗು ಹಾಕಿ ಪರಾರಿಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಅಂದು ಪ್ರಮಿಳ ಸೇರಿದಂತೆ ಮನೆ ಮಂದಿಯೆಲ್ಲ ಮತಗಟ್ಟೆಗೆ ಬಂದು ಮತ ಚಲಾಯಿಸಿ ವಾಪಾಸಾಗಿದ್ದು, ಈ ಸಂದರ್ಭ ಆಕೆ ಎಲ್ಲರೊಂದಿಗೆ ಮಾತನಾಡಿದ್ದು, ಬಳಿಕ ಕೊಲೆ ಮಾಡಿರುವ ಶಂಕೆಯನ್ನು ಮಹಿಳಾ ಸಂಘಟನೆಗಳು ವ್ಯಕ್ತಪಡಿಸಿದ್ದು, ಇಲ್ಲಿ ಸಾಕಷ್ಟು ಸಂಶಯಗಳು ಹುಟ್ಟಿಕೊಂಡಿವೆ.
ಮತದಾನದಂದು ಚೇತನ್ ಸಹೋದರಿ ಕೂಡ ಜತೆಯಲ್ಲಿ ಮತಗಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಪಕ್ಕದ ಪರಿಚಿತರೊಬ್ಬರಿಗೆ ಕರೆ ಮಾಡಿ ‘ಅತ್ತಿಗೆ ಪ್ರಮಿಳ ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ ನೋಡಿ ತಿಳಿಸಿ’ ಎಂದಿದ್ದಳಂತೆ, ಆ ಮೇರೆಗೆ ಆಕೆ ಹೋಗಿ ನೋಡಲಾಗಿ ನೇಣುಬಿಗಿದ ಸ್ಥಿತಿಯಲ್ಲಿ ಪ್ರಮಿಳಾಳ ಶವ ಗೋಚರಿಸಿದೆ. ಈ ಸಂದರ್ಭ ಮೃತೆಯ ಮೂರು ವರ್ಷದ ಗಂಡು ಮಗುವನ್ನು ಕೂಡ ಪತಿ ಹಾಗೂ ಮನೆ ಮಂದಿ ಎಲ್ಲಿಗೋ ಕರೆದೊಯ್ದಿದ್ದು, ಬಳಿಕ ನಾಟಕೀಯವಾಗಿ ಮನೆಗೆ ವಾಪಾಸಾಗುವ ಮೂಲಕ ‘ಆತ್ಮಹತ್ಯೆ’ಯೆಂದು ಬಿಂಬಿಸಲು ಯತ್ನಿಸಲಾಗಿದೆ ಎಂಬ ಆರೋಪವಿದೆ.
ಇಲ್ಲಿ ಮೃತೆಯ ಕಾಲುಗಳು ನೆಲಕ್ಕೆ ತಾಗಿರುವದರೊಂದಿಗೆ, ಕೈ ಕೂಡ ಹಾಸಿಗೆಗೆ ಮುಟ್ಟಿಕೊಂಡಿದ್ದು, ಆತ್ಮಹತ್ಯೆಯಲ್ಲವೆಂಬ ಸುಳಿವು ಮೇಲ್ನೋಟಕ್ಕೆ ಗೋಚರಿಸಿದೆ. ಅಲ್ಲದೆ ತೀರಾ ಸ್ನೇಹಜೀವಿಯಾಗಿದ್ದು, ಮುಗ್ಧೆಯಾಗಿದ್ದವಳು ಯಾವದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ ಎಂದು ಸಂಬಂಧಿಕರು ಮತ್ತು ಮಹಿಳಾ ಸಂಘಟನೆಗಳ ಒಡನಾಡಿಗಳು ಪ್ರತಿಪಾದಿಸಿದ್ದಾರೆ.
ಒಟ್ಟಿನಲ್ಲಿ ಇದೊಂದು ಪೂರ್ವ ನಿಯೋಜಿತ ಕೊಲೆಯಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ಅಲ್ಲಿನ ಲೋಪಮುದ್ರಾ, ಬನಶಂಕರಿ, ಚಾಮುಂಡೇಶ್ವರಿ, ಶ್ರೀದೇವಿ, ಭುವನೇಶ್ವರಿ, ರಾಜರಾಜೇಶ್ವರಿ ಹಾಗೂ ಕಾವೇರಿ ಸ್ವಸಹಾಯ ಸಂಘಗಳು ಮತ್ತು ಸ್ತ್ರೀ ಶಕ್ತಿ ಬಳಗದ ಸದಸ್ಯೆಯರು ಹೆಚ್ಚುವರಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸುವ ಮುಖಾಂತರ ತನಿಖೆಗೆ ಒತ್ತಾಯಿಸಿದ್ದಾರೆ.