ಗೋಣಿಕೊಪ್ಪ ವರದಿ, ಏ. 22 : ಕಳತ್ಮಾಡು, ಹೊಸೂರು, ಬೆಟ್ಟಗೇರಿ ಹಾಗೂ ಹೊಸಕೋಟೆ ಗ್ರಾಮಗಳಲ್ಲಿ ನಿರಂತರ ಮರ ಹನನ ನಡೆಯುತ್ತಿದ್ದು, ಇದಕ್ಕೆ ಪೊಲೀಸ್ ಹಾಗೂ ಅರಣ್ಯ ಇಲಾಖೆ ಕೈವಾಡವಿದೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕೊಲ್ಲೀರ ಧರ್ಮಜ ಆರೋಪಿಸಿದ್ದಾರೆ.

ಈ ಗ್ರಾಮಗಳಲ್ಲಿ ನಿರಂತರವಾಗಿ ಮರ ಕಳ್ಳನತ ನಡೆಯುತ್ತಿದ್ದರೂ ಅರಣ್ಯ ಹಾಗೂ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗುತ್ತಿಲ್ಲ. ಇವರು ನೇರವಾಗಿ ಕಳ್ಳತನಕ್ಕೆ ನೆರವು ನೀಡುತ್ತಿರುವದರಿಂದ ಭಯವಿಲ್ಲದೆ ಕಳ್ಳತನ ನಡೆಯಲು ಸಾಧ್ಯವಾಗುತ್ತಿದೆ. ಇದರಿಂದಾಗಿ ಗ್ರಾಮಸ್ಥರೇ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.

ಮುಂದೆಯೂ ಕಳ್ಳತನ ನಡೆದರೆ ಪೊಲೀಸ್ ಹಾಗೂ ಅರಣ್ಯ ಇಲಾಖೆ ಕಚೇರಿ ಎದುರು ಗ್ರಾಮದ ಜನರು ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಗುವುದು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಕಳೆದ ವರ್ಷ ತಮ್ಮದೇ ತೋಟದಲ್ಲಿ ಬೀಟೆ ಮರ ಕಳ್ಳತನವಾಗಿದ್ದನ್ನು ಮೊದಲು ಅರಣ್ಯ ಇಲಾಖೆ ಸಿಬ್ಬಂದಿ ನನಗೆ ಮೊದಲು ಮಾಹಿತಿ ನೀಡಿದ್ದರು. ಅವರಿಗೆ ಕಳ್ಳರ ಮೂಲಕ ಮಾಹಿತಿ ದೊರೆಯದೆ ಮಾಹಿತಿ ದೊರೆಯಲು ಸಾಧ್ಯವಿಲ್ಲ. ಈ ಪ್ರಕರಣವನ್ನು ಮೂರು ತಿಂಗಳು ಕಳೆದ ನಂತರ ಪತ್ತೆಯಾಗದ ಪ್ರಕರಣ ಎಂದು ಮುಚ್ಚಲಾಗಿದೆ. ಗ್ರಾಮದಲ್ಲಿ ನಡೆಯುವ ಕಳ್ಳತನ ಪ್ರಕರಣಕ್ಕೆ ನ್ಯಾಯ ದೊರಕುತ್ತಿಲ್ಲ ಎಂದರು.

ಗಂಧದ ಮರ, ಬೀಟೆ, ತೇಗ ಮರಗಳ ಹನನ ನಿರಂತರವಾಗಿ ಗ್ರಾಮದ ತೋಟಗಳಲ್ಲಿ ನಡೆಯುತ್ತಿದೆ. ಆದರೂ ಇಲಾಖೆ ಅಧಿಕಾರಿಗಳು ಕೃಷಿಕರ ಪರವಾಗಿ ನಿಲ್ಲುತ್ತಿಲ್ಲ. ಪತ್ತೆಯಾಗದ ಪ್ರಕರಣ ಎಂದು ಎಲ್ಲಾ ಪ್ರಕರಣಗಳನ್ನು ಮುಚ್ಚಲಾಗುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರೇ ಕಾನೂನು ಕ್ರಮಕ್ಕೆ ಮುಂದಾಗಬೇಕಿದೆ. ಒಗ್ಗಟ್ಟಿನ ಮೂಲಕ ಕಳ್ಳರ ಬೇಟೆ ನಡೆಸುತ್ತೇವೆ ಎಂದರು.

ಹೊಸೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೋಪಿ ಚಿಣ್ಣಪ್ಪ ಮಾತನಾಡಿ, ಎಪ್ರಿಲ್ 18 ರಂದು ರಾತ್ರಿ ಗ್ರಾಮದಲ್ಲಿ ಬೀಟೆ ನಾಟ ಸಾಗಾಟ ನಡೆದಿದೆ. ಪ್ರವಾಸಕ್ಕೆ ತೆರಳಿದ್ದ ಗ್ರಾಮದ ಯುವಕರು ಮುಂಜಾನೆ ಗ್ರಾಮಕ್ಕೆ ಹಿಂತಿರುಗುವಾಗ ಗ್ರಾಮದಲ್ಲಿ ಪತ್ತೆಯಾದ ಕಾರನ್ನು ಪರಿಶೀಲನೆ ನಡೆಸಿದಾಗ ಬೀಟೆ ನಾಟ ಪತ್ತೆಯಾಗಿದೆ. ಈ ಬಗ್ಗೆ ಚಾಲಕ ಮೊಹಮ್ಮದ್ ಎಂಬುವವರನ್ನು ಹಿಡಿದು ಪೊಲೀಸ್ ಹಾಗೂ ಅರಣ್ಯ ಇಲಾಖೆಗೆ ಒಪ್ಪಿಸಿದ್ದರೂ ಮೂತ್ರ ವಿಸರ್ಜನೆ ಮಾಡಲು ತೆರಳಿದ್ದ ಸಂದರ್ಭ ಮೊಹಮ್ಮದ್ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಈ ಸಿಬ್ಬಂದಿ ಸಬೂಬು ನೀಡುತ್ತಿದ್ದಾರೆ. ಇಲಾಖೆ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪದಿಂದ ಕಳ್ಳತನಕ್ಕೆ ಕುಮ್ಮಕ್ಕು ದೊರೆಯುವಂತಾಗಿದೆ ಎಂದು ಆರೋಪಿಸಿದರು.

ಇಲಾಖೆಗಳ ವಿರುದ್ದ ಹೋರಾಟ ನಡೆಸಿ ಗ್ರಾಮದಲ್ಲಿನ ಮರಗಳತನಕ್ಕೆ ಶಾಶ್ವತ ಪರಿಹಾರಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು. ಗೋಷ್ಠಿಯಲ್ಲಿ ಗ್ರಾಮದ ಪ್ರಮುಖರುಗಳಾದ ಬಲ್ಯಮಂಡ ದೇವೇಂದ್ರ, ಗಿರೀಶ್, ಬೋಪಣ್ಣ ಇದ್ದರು.