ಕೂಡಿಗೆ, ಏ. 21: ನಿಶ್ಚಿತಾರ್ಥ ಗೊಂಡಿದ್ದ ಯುವತಿಯೊಂದಿಗೆ ಸರ್ವರ ಸಮ್ಮುಖದಲ್ಲಿ ಹಸೆಮಣೆ ಏರಬೇಕಿದ್ದ ಯುವಕನೋರ್ವ ದಿಢೀರನೆ ಎದೆನೋವೆಂದು ನಾಟಕ ವಾಡಿ ಮದುವೆಗೆ ನಿರಾಕರಿಸಿದ್ದರಿಂದ ವಧು-ವರನ ಕಡೆಯವರ ನಡುವೆ ಮಾರಾಮಾರಿ ನಡೆದು ಮದುವೆ ಮಂಟಪ ರಣರಂಗವಾದ ಘಟನೆ ಇಂದು ನಡೆದಿದೆ.

ತೊರೆನೂರು ವ್ಯಾಪ್ತಿಯ ಬೈರಪ್ಪನ ಗುಡಿಯ ಯುವತಿ ಯೋರ್ವಳ ಜೊತೆ ಹುಣಸೂರು ಸಮೀಪದ ಕಲ್ಗುಣಗಿ ಗ್ರಾಮದ ಯುವಕನ ವಿವಾಹ ಸಮಾರಂಭ ಇಂದು ಕಣಿವೆ ರಾಮಲಿಂಗೇಶ್ವರ ಸಭಾಭವನದಲ್ಲಿ ನಿಗದಿಯಾಗಿತ್ತು. ನಿನ್ನೆ ದಿನ ಸಂಜೆ ವಧುವಿಗೆ ಹೂ ಮುಡಿಸುವ ಶಾಸ್ತ್ರವೆಲ್ಲ ನಡೆದು ಇಂದು ಬೆಳಿಗ್ಗೆ 11.30 ಗಂಟೆಯ ಶುಭ ಲಗ್ನದಲ್ಲಿ ವಿವಾಹ ನೆರವೇರಬೇಕಿತ್ತು.ಆದರೆ.., ಬೆಳಿಗ್ಗೆ ಎದ್ದ ವರ ತನಗೆ ಎದೆನೋವೆಂದು ಹೇಳಿ ಇದ್ದಕ್ಕಿದ್ದಂತೆ ಬಿದ್ದು ಒದ್ದಾಡಲಾರಂಭಿಸಿದ್ದಾನೆ. ಇದನ್ನು ಕಂಡ ಕೆಲ ಸಂಬಂಧಿಕರು ಆತನನ್ನು ಮಡಿಕೇರಿಯ ಆಸ್ಪತ್ರೆಗೆ ಕರೆ ತಂದಿದ್ದಾರೆ. ಈ ವೇಳೆ ವರನನ್ನು ಪರಿಶೀಲಿಸಿದ ವೈದ್ಯರು ಆತನಿಗೆ ಯಾವದೇ ರೀತಿಯ ತೊಂದರೆ ಇಲ್ಎದು (ಮೊದಲ ಪುಟದಿಂದ) ಖಚಿತಪಡಿಸಿದ್ದಾರೆ. ನಂತರ ಮಡಿಕೇರಿಯಿಂದಲೇ ಮದುವೆ ಮಂಟಪದಲ್ಲಿದ್ದವರಿಗೆ ದೂರವಾಣಿ ಕರೆ ಮಾಡಿ ತನಗೆ ಮದುವೆಯಲ್ಲಿ ಆಸಕ್ತಿ ಇಲ್ಲ ಎಂದು ಹೇಳಿ, ಮದುವೆ ಆಗಲಾರೆ ಎಂದು ಪಟ್ಟು ಹಿಡಿದಿದ್ದಾನೆ. ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು ವಧು-ವರನ ಕಡೆಯವರ ನಡುವೆ ಮಾರಾಮಾರಿ ನಡೆದಿದೆ. ಬಳಿಕ ವಿಚಾರ ಪೊಲೀಸ್ ಠಾಣೆ ಮೇಟ್ಟಿಲೇರಿದ್ದು, ಪೊಲೀಸರು ಮಡಿಕೇರಿಯಲ್ಲಿದ್ದ ವರನನ್ನು ಮದುವೆ ಮಂಟಪಕ್ಕೆ ಕರೆಸಿ ವಿಚಾರಿಸಿದಾಗಲೂ ಆ ಭೂಪ ‘ನನಗೆ ಮದುವೆ ಬೇಡ; ಮದುವೆಯಲ್ಲಿ ನನಗೆ ಆಸಕ್ತಿ ಇಲ್ಲ’ ಎಂದೇ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸ್ಥಳೀಯರ ಸಮ್ಮುಖದಲ್ಲಿ ಚರ್ಚೆ ನಡೆಸಿ ಕೊನೆಗೆ ವರನ ಕಡೆಯವರು ವಧುವಿನ ಕಡೆಯವರಿಗೆ ನಷ್ಟವಾದ 4 ಲಕ್ಷ ರೂ.ಗಳನ್ನು ಒಂದು ತಿಂಗಳೊಳಗಾಗಿ ನೀಡ ಬೇಕೆಂದು ತೀರ್ಮಾನವಾಗಿ, ಈ ಬಗ್ಗೆ ವರನಿಂದ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿಕೊಡಲಾಯಿತು. ಸುಮಾರು ಒಂದೂವರೆ ಸಾವಿರ ಮಂದಿಗೆ ಮಾಡಲಾಗಿದ್ದ ಭೋಜನ ಇತ್ಯಾದಿ ವ್ಯವಸ್ಥೆ ವ್ಯರ್ಥವಾಯಿತು. -ಕೆ.ಕೆ. ನಾಗರಾಜ ಶೆಟ್ಟ