ಸೋಮವಾರಪೇಟೆ, ಏ.22: ಕಳೆದೆರಡು ದಿನಗಳ ಹಿಂದೆ ಸುರಿದ ಭಾರೀ ಮಳೆ-ಗಾಳಿಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿರುವ ಪರಿಣಾಮ ಮುಂದಿನ ಒಂದೆರಡು ದಿನಗಳವರೆಗೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ವ್ಯತ್ಯಯ ಉಂಟಾಗಲಿದೆ ಎಂದು ಮುಖ್ಯಾಧಿಕಾರಿ ನಟರಾಜ್ ತಿಳಿಸಿದ್ದಾರೆ. ಕುಶಾಲನಗರದ ಹಾರಂಗಿಯಿಂದ ಸೋಮವಾರಪೇಟೆಗೆ ಕುಡಿಯುವ ನೀರು ಸರಬರಾಜಾಗುತ್ತಿದ್ದು, ಮೊನ್ನೆ ಸುರಿದ ಭಾರೀ ಮಳೆಗೆ ಹಾರಂಗಿ-ಯಡವನಾಡು-ಸೋಮವಾರಪೇಟೆ ಮಾರ್ಗದ ವಿದ್ಯುತ್ ತಂತಿಗಳ ಮೇಲೆ ಮರಗಳು ಉರುಳುಬಿದ್ದಿವೆ. ಪರಿಣಾಮ 31 ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆಯಾಗಿದೆ.
ಈ ಹಿನ್ನೆಲೆ ದುರಸ್ತಿ ಕಾರ್ಯ ನಡೆಯುತ್ತಿದ್ದು, ಒಂದೆರಡು ದಿನಗಳ ಕಾಲ ಪಟ್ಟಣ ಪಂಚಾಯಿತಿಯಲ್ಲಿ ಕುಡಿಯುವ ನೀರಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಪಂಚಾಯಿತಿಯೊಂದಿಗೆ ಸಹಕರಿಸುವಂತೆ ನಟರಾಜ್ ಮನವಿ ಮಾಡಿದ್ದಾರೆ. ಪಟ್ಟಣಕ್ಕೆ ಕುಡಿಯುವ ನೀರನ್ನೊದಗಿಸುವ ಮತ್ತೊಂದು ಪ್ರಮುಖ ಜಲಮೂಲವಾದ ದುದ್ದುಗಲ್ಲು ಹೊಳೆಯಿಂದ ಇದೀಗ ನೀರು ಸರಬರಾಜಾಗುತ್ತಿದೆ. ಆದರೂ ಪಟ್ಟಣ ವಾಸಿಗಳಿಗೆ ಅಗತ್ಯಕ್ಕೆ ತಕ್ಕಷ್ಟು ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ತಾ. 18ರಂದು ಕುಶಾಲನಗರ, ಹಾರಂಗಿ, ಹುದುಗೂರು, ಯಡವನಾಡು ಭಾಗದಲ್ಲಿ ಸುರಿದ ಭಾರೀ ಮಳೆ-ಗಾಳಿಗೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಸೆಸ್ಕ್ ಸಿಬ್ಬಂದಿಗಳು ಇಂದಿಗೂ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.